

ಬೆಂಗಳೂರು: ಮನೆಯಲ್ಲಿ ಮಕ್ಕಳ ಜೊತೆಗೆ ಪೋಷಕರು ಮಲಗಿದ್ದ ವೇಳೆ ನಾಗರಹಾವೊಂದು ಪ್ರತ್ಯಕ್ಷವಾಗಿ ಆತಂಕಕ್ಕೆ ಒಳಗಾಗಿರುವ ಘಟನೆ ನಡೆದಿದೆ.
ಬೆಂಗಳೂರಿನ ಉತ್ತರ ತಾಲೂಕಿನ ಹೆಸರುಘಟ್ಟಿಯ ಬಳಿಯ ಗುಡ್ಡದಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಚಾಪೆ ಹಾಸಿಕೊಂಡು ಬೆಚ್ಚನೆಯ ಬೆಡ್‌ಶೀಟ್ ಹೊದ್ದುಕೊಂಡು ನೆಮ್ಮದಿಯಾಗಿ ಮಲಗಿದ್ದ ಮಕ್ಕಳು ಅದೃಷ್ಟವಶಾತ್ ಬಚಾವ್ ಆಗಿದ್ದಾರೆ.
ಬಿಹಾರ ಮೂಲದ ತಾಯಿ ಮತ್ತು ಮಕ್ಕಳು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ತಾಯಿ ಅಂಜು ರಾತ್ರಿ 11 ಗಂಟೆ ಸುಮಾರಿನಲ್ಲಿ ಮೂತ್ರ ವಿಸರ್ಜನೆಗೆಂದು ಎದ್ದಾಗ 7 ವರ್ಷದ ಮಗಳು ರಾಶಿ ಮತ್ತು 4 ವರ್ಷದ ಮಗ ಅನುಮೋನ ಪಕ್ಕದಲ್ಲಿದ್ದ ನಾಗರಹಾವನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ.
ಅದು ಎಲ್ಲಿ ಮಕ್ಕಳನ್ನು ಕಚ್ಚಿಬಿಡುತ್ತೋ ಎಂಬ ಆತಂಕದಲ್ಲಿ ಮನೆಯಿಂದ ಹೊರಬಂದು ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣವೇ ಉರಗ ರಕ್ಷಕರಾದ ಪ್ರಶಾಂತ್ ಗೆ ಕರೆ ಮಾಡಿದ್ದಾರೆ.
ಪ್ರಶಾಂತ್ ತಮ್ಮ ಚಾಣಾಕ್ಷತನದಿಂದ ಕಾರ್ಯಾಚರಣೆ ನಡೆಸಿ ಹಾವನ್ನು ಸೆರೆಹಿಡಿದಿದ್ದಾರೆ. ಉರಗ ರಕ್ಷಕರ ಸಕಾಲಿಕ ಸ್ಪಂದನೆಯಿಂದಾಗಿ ಪುಟ್ಟ ಮಕ್ಕಳು ಜೀವಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಪೋಷಕರು ಪ್ರಶಾಂತ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಪ್ರಶಾಂತ್ ಹಾವನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ. ಬರೋಬ್ಬರಿ 5 ಅಡಿ ಉದ್ದವಿದ್ದ ನಾಗರಹಾವನ್ನು ಉರಗ ರಕ್ಷಕರ ಮೂಲಕ ರಕ್ಷಣೆ ಮಾಡಲಾಗಿದೆ. ಹಾವಿನಿಂದ ಯಾವುದೇ ತೊಂದರೆಯಾಗದಂತೆ ಮೊದಲು ಮಕ್ಕಳನ್ನು ರಕ್ಷಿಸಲಾಯಿತು.