ಬೆಂಗಳೂರು: ಕೆ.ಆರ್ ವೃತ್ತದಲ್ಲಿ BMTC ಬಸ್ಸುಗಳ ಡಿಕ್ಕಿ; ಚಾಲಕ ಸೇರಿ ಹಲವು ಪ್ರಯಾಣಿಕರು ಗಂಭೀರ ಗಾಯ

ವಿಧಾನ ಸೌಧದಿಂದ ಕೂಗಳತೆ ದೂರದಲ್ಲಿ ಇಂದು ಶನಿವಾರ ಬೆಳ್ಳಂಬೆಳಗ್ಗೆಯೇ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
BMTC bus accident
ಬಿಎಂಟಿಸಿ ಬಸ್ಸು ತೀವ್ರ ಅಪಘಾತ
Updated on

ಬೆಂಗಳೂರು: ವಿಧಾನ ಸೌಧದಿಂದ ಕೂಗಳತೆ ದೂರದಲ್ಲಿ ಇಂದು ಶನಿವಾರ ಬೆಳ್ಳಂಬೆಳಗ್ಗೆಯೇ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನಗರದ ಪ್ರಮುಖ ಜಂಕ್ಷನ್ ಆದ ಕೆ.ಆರ್. ಸರ್ಕಲ್ (ಕೃಷ್ಣರಾಜೇಂದ್ರ ವೃತ್ತ) ಬಳಿ ಎರಡು ಬಿಎಂಟಿಸಿ (BMTC) ಬಸ್‌ಗಳ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಿಂದ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಗೊಂಡವರನ್ನು ಬಸ್‌ ನಿಂದ ಹೊರತೆಗೆಯಲು ಹರಸಾಹಸಪಡಲಾಗಿದೆ.

ಅಪಘಾತ ಹೇಗಾಯಿತು?

ಇಂದು ಬೆಳಗಿನ ಜಾವ ಎಂದಿನಂತೆ ಕೆ ಆರ್ ಸರ್ಕಲ್ ಬಳಿ ಸಂಚಾರ ದಟ್ಟಣೆ ಇತ್ತು. ಕೆ.ಆರ್. ಸರ್ಕಲ್ ಜಂಕ್ಷನ್‌ನ ಸಿಗ್ನಲ್‌ನಲ್ಲಿ ಬಿಎಂಟಿಸಿಯ ‘ವಾಯು ವಜ್ರ’ ಬಸ್ ನಿಂತಿತ್ತು. ಇದೇ ವೇಳೆ ಹಿಂಬದಿಯಿಂದ ಅತಿ ವೇಗವಾಗಿ ಬಂದ ಮತ್ತೊಂದು ಸಾಮಾನ್ಯ ಬಿಎಂಟಿಸಿ ಬಸ್, ಸಿಗ್ನಲ್‌ನಲ್ಲಿ ನಿಂತಿದ್ದ ವಾಯು ವಜ್ರ ಬಸ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸಾಮಾನ್ಯ ಬಿಎಂಟಿಸಿ ಬಸ್‌ನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಬಸ್‌ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಮಹಿಳೆಗೆ ಗಂಭೀರ ಗಾಯವಾಗಿ ಕಾಲು ಸಿಕ್ಕಿಹಾಕಿಕೊಂಡು ತೆಗೆಯಲು ಹರಸಾಹಸಪಟ್ಟರು.. ಕಬ್ಬಿಣದ ಸಲಾಕೆಗಳನ್ನು ಹರ ಸಾಹಸಪಟ್ಟು ತುಂಡರಿಸಿ ಮಹಿಳೆಯನ್ನು ಹೊರ ತೆಗೆಯಲಾಯಿತು.

ಬೆಳಗ್ಗಿನ ಅವಧಿಯಾಗಿದ್ದರಿಂದ ಬಸ್‌ಗಳಲ್ಲಿ ಕಚೇರಿ ಹಾಗೂ ದೈನಂದಿನ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇದ್ದಕ್ಕಿದ್ದಂತೆ ಸಂಭವಿಸಿದ ಈ ಘೋರ ಅಪಘಾತದಿಂದಾಗಿ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ತೀವ್ರ ತೊಂದರೆಯುಂಟಾಯಿತು. ಅಪಘಾತದ ತೀವ್ರತೆಗೆ ಬಸ್‌ನ ಮುಂಭಾಗದ ಸೀಟುಗಳಲ್ಲಿದ್ದ ಹಲವು ಮಹಿಳಾ ಪ್ರಯಾಣಿಕರಿಗೆ ತಲೆ ಹಾಗೂ ಕೈಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಸಂಚಾರ ದಟ್ಟಣೆ

ನಗರದ ಅತ್ಯಂತ ಬ್ಯುಸಿ ವೃತ್ತಗಳಲ್ಲಿ ಒಂದಾದ ಕೆ.ಆರ್. ಸರ್ಕಲ್‌ನಲ್ಲಿ ಬೆಳ್ಳಂಬೆಳಗ್ಗೆಯೇ ಎರಡು ಸರ್ಕಾರಿ ಬಸ್‌ಗಳು ಅಪಘಾತಕ್ಕೀಡಾದ ಪರಿಣಾಮವಾಗಿ ಇಡೀ ರಸ್ತೆಯಲ್ಲಿ ಭಾರೀ ಸಂಚಾರ ದಟ್ಟಣೆ (ಟ್ರಾಫಿಕ್ ಜಾಮ್) ಉಂಟಾಯಿತು. ಸ್ಥಳಕ್ಕೆ ಧಾವಿಸಿದ ಸಂಚಾರಿ ಪೊಲೀಸರು ಕರಗಿದ ಬಸ್‌ಗಳನ್ನು ರಸ್ತೆಯಿಂದ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬೆಂಗಳೂರು ನಗರ ಸಂಚಾರ ಪೊಲೀಸರು ಆ ಮಾರ್ಗದಲ್ಲಿ ದಟ್ಟಣೆಯುಂಟಾಗಿದೆ. ವಾಹನ ಸವಾರರು ಬದಲಿ ಮಾರ್ಗ ಕಂಡುಕೊಳ್ಳಿ ಎಂದು ಪ್ರಕಟಣೆ ಹೊರಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com