ISRO ಕೇಂದ್ರ ಕಚೇರಿಗೆ ಮತ್ತೆ ಬಾಂಬ್ ಬೆದರಿಕೆ: 4 ದಿನಗಳಲ್ಲಿ ಮೂರನೇ ಬಾರಿ ಇ-ಮೇಲ್..!

ಭಾನುವಾರ ರಾತ್ರಿ ಸುಮಾರು 9 ಗಂಟೆಗೆ ಇ-ಮೇಲ್ ಬಂದಿದ್ದು, ಸಿಬ್ಬಂದಿ ಸೋಮವಾರ ಬೆಳಗ್ಗೆ 10.30ರ ಸುಮಾರಿಗೆ ಅದನ್ನು ಗಮನಿಸಿದ್ದಾರೆ. ಇಂಗ್ಲಿಷ್‌ನಲ್ಲಿ ಕಳುಹಿಸಲಾದ ಇ-ಮೇಲ್‌ನಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಬೆದರಿಕೆ ಹಾಕಲಾಗಿತ್ತು.
ISRO (FIle photo)
ಇಸ್ರೋ (ಸಂಗ್ರಹ ಚಿತ್ರ)
Updated on

ಬೆಂಗಳೂರು: ನಗರದ ನ್ಯೂ ಬಿಇಎಲ್ ರಸ್ತೆಯಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಕೇಂದ್ರ ಕಚೇರಿಗೆ ಮತ್ತೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಕೇವಲ ನಾಲ್ಕು ದಿನಗಳ ಅವಧಿಯಲ್ಲಿ ಇಸ್ರೋ ಸಂಸ್ಥೆಗೆ ಬಂದಿರುವ ಮೂರನೇ ಬೆದರಿಕೆ ಇಮೇಲ್ ಇದಾಗಿದೆ.

ಭಾನುವಾರ ರಾತ್ರಿ ಸುಮಾರು 9 ಗಂಟೆಗೆ ಇ-ಮೇಲ್ ಬಂದಿದ್ದು, ಸಿಬ್ಬಂದಿ ಸೋಮವಾರ ಬೆಳಗ್ಗೆ 10.30ರ ಸುಮಾರಿಗೆ ಅದನ್ನು ಗಮನಿಸಿದ್ದಾರೆ. ಇಂಗ್ಲಿಷ್‌ನಲ್ಲಿ ಕಳುಹಿಸಲಾದ ಇ-ಮೇಲ್‌ನಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಬೆದರಿಕೆ ಹಾಕಲಾಗಿತ್ತು.

ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (BDDS), ಶ್ವಾನದಳ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಹಾಗೂ ಸಂಜಯನಗರ ಪೊಲೀಸರು ಇಸ್ರೋದ ಆವರಣ ಮತ್ತು ಅಂತಾರಿಕ್ಷ ಭವನ ಸೇರಿದಂತೆ ಸಂಪೂರ್ಣ ಪ್ರದೇಶವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು.

ಹಲವು ಗಂಟೆಗಳ ಶೋಧದ ಬಳಿಕ ಯಾವುದೇ ಸ್ಫೋಟಕ ಪತ್ತೆಯಾಗದ ಹಿನ್ನೆಲೆಯಲ್ಲಿ ಇದು ಹುಸಿ ಬೆದರಿಕೆ ಎಂದು ಪೊಲೀಸರು ದೃಢಪಡಿಸಿದರು.

ಇದೇ ವೇಳೆ, ಪೀಣ್ಯ ಕೈಗಾರಿಕಾ ಪ್ರದೇಶದ ಎರಡನೇ ಹಂತದಲ್ಲಿರುವ ಇಸ್ರೋದ ISTRAC (ISRO Telemetry Tracking and Command Network) ಕೇಂದ್ರದಲ್ಲಿಯೂ ಪೊಲೀಸರು ಪರಿಶೀಲನೆ ನಡೆಸಿದರು.

ISRO (FIle photo)
ಬೆಂಗಳೂರು: ಇಸ್ರೋ ಪ್ರಧಾನ ಕಚೇರಿಗೆ ಬಾಂಬ್ ಬೆದರಿಕೆ; ಕಟ್ಟಡದ ಸಂಪೂರ್ಣ ಶೋಧ ನಡೆಸಿದ ಪೊಲೀಸರು!

ಜುಲೈ 3ರಂದು ಉತ್ತರ ಪ್ರದೇಶದ ಗಾಜಿಯಾಬಾದ್‌ನ ಸಂಯೋಗ್ ನಗರ ನಿವಾಸಿ 36 ವರ್ಷದ ನಿಶಾಂತ್ ತ್ಯಾಗಿ ಎಂಬಾತನನ್ನು, ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಅವರಿಗೆ ಬೆದರಿಕೆ ಇ-ಮೇಲ್ ಕಳುಹಿಸಿದ್ದ ಆರೋಪದಲ್ಲಿ ಬಂಧಿಸಲಾಗಿತ್ತು.

ಆದರೆ, ನಂತರ ಬಂದ ಎರಡನೇ ಹಾಗೂ ಈಗಿನ ಮೂರನೇ ಬೆದರಿಕೆ ಇ-ಮೇಲ್‌ಗಳಿಗೆ ನಿಶಾಂತ್ ತ್ಯಾಗಿಗೆ ಯಾವುದೇ ಸಂಬಂಧ ಇಲ್ಲ ಎಂದು ಉತ್ತರ ವಿಭಾಗದ ಡಿಸಿಪಿ ಬಿ.ಎಸ್. ನೇಮಗೌಡ ತಿಳಿಸಿದ್ದಾರೆ.

ಮೂರು ಬೆದರಿಕೆ ಇ-ಮೇಲ್‌ಗಳನ್ನೂ ವಿಭಿನ್ನ ಇ-ಮೇಲ್ ಐಡಿಗಳಿಂದ ಕಳುಹಿಸಲಾಗಿದ್ದು, ಪ್ರತಿಯೊಂದು ಪ್ರಕರಣದಲ್ಲೂ ಸಂಪೂರ್ಣ ತಪಾಸಣೆ ನಡೆಸಿದ ಬಳಿಕವೇ ಹುಸಿ ಬೆದರಿಕೆ ಎಂದು ಘೋಷಿಸಲಾಗಿದೆ ಎಂದು ಹೇಳಿದರು.

ಈ ಸಂಬಂಧ ಸಂಜಯನಗರ ಪೊಲೀಸರು ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com