ಗ್ರಾಮೀಣ ವಲಸೆ ತಡೆಯಲು ಹೊಸ ಯೋಜನೆ; 2-3ನೇ ಹಂತದ ನಗರಗಳಲ್ಲಿ ಕೈಗಾರಿಕೆಗೆ ಉತ್ತೇಜನ; 2 ಸಾವಿರ CSR ಶಾಲೆಗಳ ಘೋಷಣೆ..! Video

ಉದ್ಯೋಗಕ್ಕಾಗಿ ಗ್ರಾಮೀಣ ಜನರು ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿಯನ್ನು ತಪ್ಪಿಸುವುದು ನಮ್ಮ ಸರ್ಕಾರದ ಪ್ರಮುಖ ಗುರಿಯಾಗಿದೆ. ಅದಕ್ಕಾಗಿ ಉದ್ಯೋಗಗಳೇ ಜನರಿರುವ ಪ್ರದೇಶಗಳಿಗೆ ತಲುಪುವಂತೆ ಕೈಗಾರಿಕೆಗಳನ್ನು ದ್ವಿತೀಯ ಮತ್ತು ತೃತೀಯ ಹಂತದ ನಗರಗಳಲ್ಲಿ ಸ್ಥಾಪಿಸಲು ಉತ್ತೇಜನ ನೀಡಲಾಗುತ್ತಿದೆ.
DCM D.K. Shivakumar
ಡಿಕೆ.ಶಿವಕುಮಾರ್
Updated on

ಕಲಬುರಗಿ: ಗ್ರಾಮೀಣ ಪ್ರದೇಶದ ಜನರು ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ದೊಡ್ಡ ನಗರಗಳಿಗೆ ವಲಸೆ ಹೋಗುವುದನ್ನು ತಡೆಯಲು ರಾಜ್ಯ ಸರ್ಕಾರ ಮಹತ್ವದ ಕ್ರಮಗಳನ್ನು ಕೈಗೊಂಡಿದೆ.

ದ್ವಿತೀಯ ಹಾಗೂ ತೃತೀಯ ಹಂತದ ನಗರಗಳಲ್ಲಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಮೂಲಕ ಸ್ಥಳೀಯ ಮಟ್ಟದಲ್ಲೇ ಉದ್ಯೋಗ ಸೃಷ್ಟಿಸಲಾಗುವುದು. ಜೊತೆಗೆ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ 2 ಸಾವಿರ ಸಿಎಸ್‌ಆರ್ (ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ) ಶಾಲೆಗಳನ್ನು ನಿರ್ಮಿಸಿ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲಾಗುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.

ಮಂಗಳವಾರ ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ ಪರಿಹಾರ ಕಾಮಗಾರಿಗಳು ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳ ಪರಿಶೀಲನೆಗಾಗಿ ವಿಭಾಗೀಯ ಕೇಂದ್ರಗಳ ಪ್ರವಾಸವನ್ನು ಆರಂಭಿಸಿದ್ದು, ಸೋಮವಾರ ಬೀದರ್ ಜಿಲ್ಲೆಯ ಬಸವಕಲ್ಯಾಣದಿಂದ ಈ ಪ್ರವಾಸಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಉದ್ಯೋಗಕ್ಕಾಗಿ ಗ್ರಾಮೀಣ ಜನರು ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿಯನ್ನು ತಪ್ಪಿಸುವುದು ನಮ್ಮ ಸರ್ಕಾರದ ಪ್ರಮುಖ ಗುರಿಯಾಗಿದೆ. ಅದಕ್ಕಾಗಿ ಉದ್ಯೋಗಗಳೇ ಜನರಿರುವ ಪ್ರದೇಶಗಳಿಗೆ ತಲುಪುವಂತೆ ಕೈಗಾರಿಕೆಗಳನ್ನು ದ್ವಿತೀಯ ಮತ್ತು ತೃತೀಯ ಹಂತದ ನಗರಗಳಲ್ಲಿ ಸ್ಥಾಪಿಸಲು ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕಲಬುರಗಿ ಸೇರಿದಂತೆ ದ್ವಿತೀಯ ಹಾಗೂ ತೃತೀಯ ಹಂತದ ನಗರಗಳಲ್ಲಿ ಕೈಗಾರಿಕೆಗಳನ್ನು ಆಕರ್ಷಿಸಲು 0.6 ಶೇಕಡಾ ಪ್ರೀಮಿಯಂ ಎಫ್‌ಎಆರ್ (Floor Area Ratio) ಹಾಗೂ 2 ಪಟ್ಟು ಎಫ್‌ಎಆರ್ ಸೌಲಭ್ಯ ನೀಡಲು ಸರ್ಕಾರ ತೀರ್ಮಾನಿಸಿದೆ. ಇದರಿಂದ ಕೈಗಾರಿಕೆಗಳಿಗೆ ಕಡಿಮೆ ವೆಚ್ಚದಲ್ಲಿ ಭೂಮಿ ಲಭ್ಯವಾಗಲಿದ್ದು, ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಅಗತ್ಯ ಕಾನೂನು ತಿದ್ದುಪಡಿ ತರಲಿದೆ ಎಂದರು.

ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣಕ್ಕಾಗಿ ನಗರಗಳಿಗೆ ವಲಸೆ ಹೋಗುವುದನ್ನು ತಡೆಯುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಿಎಸ್‌ಆರ್ ಮಾದರಿಯ ಶಾಲೆಗಳನ್ನು ಆರಂಭಿಸಲಾಗುವುದು.

ಕಂಪನಿಗಳು ತಮ್ಮ ಸಿಎಸ್‌ಆರ್ ನಿಧಿಯಿಂದ 10 ರಿಂದ 15 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಲಾ ಕಟ್ಟಡ ಹಾಗೂ ಅಗತ್ಯ ಮೂಲಸೌಕರ್ಯ ನಿರ್ಮಿಸಿಕೊಡಬೇಕು. ಸರ್ಕಾರಕ್ಕೆ ಹಣ ನೀಡುವ ಅಗತ್ಯವಿಲ್ಲ, ಶಾಲೆಗಳನ್ನೇ ನಿರ್ಮಿಸಿಕೊಡಬೇಕು. ರಾಜ್ಯದಾದ್ಯಂತ 2 ಸಾವಿರ ಶಾಲೆಗಳನ್ನು ನಿರ್ಮಿಸುವ ಗುರಿ ಹೊಂದಿದ್ದೇವೆ. ಶಿಕ್ಷಕರ ನೇಮಕಾತಿಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ವಿವರಿಸಿದರು.

ಖಾಸಗಿ ವಲಯದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ 'ಯುವ ಸೇತು' ಯೋಜೆಯನ್ನು ರೂಪಿಸಲಾಗಿದೆ. ಈ ಯೋಜನೆಯ ಮೂಲಕ ಖಾಸಗಿ ಕಂಪನಿಗಳು ಮತ್ತು ಉದ್ಯೋಗಾಕಾಂಕ್ಷಿಗಳ ನಡುವೆ ಉದ್ಯೋಗ ವಿನಿಮಯ ವ್ಯವಸ್ಥೆ ನಿರ್ಮಿಸಲಾಗುವುದು. ಕೌಶಲ್ಯ ಹೊಂದಿರುವ ಯುವಕರನ್ನು ಕಂಪನಿಗಳ ಅಗತ್ಯಕ್ಕೆ ಅನುಗುಣವಾಗಿ ಆಯ್ಕೆ ಮಾಡಲಾಗುವುದು. ಅವರಿಗೆ ಸರ್ಕಾರದ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಅಗತ್ಯ ತರಬೇತಿಯನ್ನೂ ನೀಡಲಾಗುತ್ತದೆ ಎಂದು ಹೇಳಿದರು.

ಉದ್ಯೋಗ, ಕೈಗಾರಿಕೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಸಮತೋಲನದ ಅಭಿವೃದ್ಧಿ ಸಾಧಿಸುವ ಮೂಲಕ ಗ್ರಾಮೀಣ ಪ್ರದೇಶದ ಜನರು ತಮ್ಮ ಊರಿನಲ್ಲೇ ಉತ್ತಮ ಅವಕಾಶಗಳನ್ನು ಪಡೆಯುವಂತೆ ಮಾಡುವುದೇ ಸರ್ಕಾರದ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

DCM D.K. Shivakumar
ವಾಸ್ತವ ವರದಿ ವಿಶ್ಲೇಷಣೆ ಬಳಿಕ ಬರಪೀಡಿತ ಪ್ರದೇಶಗಳಿಗೆ ಪರಿಹಾರ: CM ಡಿ.ಕೆ ಶಿವಕುಮಾರ್; Video

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com