ಲೈಂಗಿಕ ದೌರ್ಜನ್ಯ ಮುಚ್ಚಿಡುವುದೂ ಅಪರಾಧ: POCSO ಕೇಸ್ ಮುಚ್ಚಿಟ್ಟರೆ ನಿಮಗೂ ಶಿಕ್ಷೆ; ಶಿಕ್ಷಣ ಸಂಸ್ಥೆಗಳಿಗೆ ಹೈಕೋರ್ಟ್‌ ಖಡಕ್ ಎಚ್ಚರಿಕೆ

ಸಂತ್ರಸ್ತ ಬಾಲಕನ ತಂದೆ ದಾಖಲಿಸಿದ್ದ ದೂರಿನ ಆಧಾರದ ಮೇಲೆ ಪೊಕ್ಸೊ ಕಾಯ್ದೆಯ ಸೆಕ್ಷನ್ 4, 8 ಮತ್ತು 21ರಡಿ ದಾಖಲಾಗಿದ್ದ ಪ್ರಕರಣವನ್ನು ಪ್ರಶ್ನಿಸಿ ಮೂವರು ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
High court
ಹೈಕೋರ್ಟ್ online desk
Updated on

ಬೆಂಗಳೂರು: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಮಾಡದೇ ಮುಚ್ಚಿಡುವುದೂ ಗಂಭೀರ ಅಪರಾಧವಾಗಿದ್ದು, ಪೋಕ್ಸೋ ಕೇಸ್ ಮುಚ್ಚಿಡುವ ಶಾಲೆಗಳಿಗು ಶಿಕ್ಷೆ ವಿಧಿಸಲಾಗುವುದು ಎಂದು ಶಿಕ್ಷಣ ಸಂಸ್ಥೆಗಳಿಗೆ ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಉಡುಪಿ ಜಿಲ್ಲೆಯ ವಸತಿ ಶಾಲೆಯ ಮುಖ್ಯೋಪಾಧ್ಯಾಯ, ಸಹ ಮುಖ್ಯೋಪಾಧ್ಯಾಯ ಹಾಗೂ ವಾರ್ಡನ್ ವಿರುದ್ಧ ಪೊಕ್ಸೊ (POCSO) ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ತಿರಸ್ಕರಿಸಿ ಈ ಮಹತ್ವದ ಆದೇಶ ನೀಡಿದ್ದಾರೆ.

ಸಂತ್ರಸ್ತ ಬಾಲಕನ ತಂದೆ ದಾಖಲಿಸಿದ್ದ ದೂರಿನ ಆಧಾರದ ಮೇಲೆ ಪೊಕ್ಸೊ ಕಾಯ್ದೆಯ ಸೆಕ್ಷನ್ 4, 8 ಮತ್ತು 21ರಡಿ ದಾಖಲಾಗಿದ್ದ ಪ್ರಕರಣವನ್ನು ಪ್ರಶ್ನಿಸಿ ಮೂವರು ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಈ ಹಂತದಲ್ಲಿ ದೂರಿನಲ್ಲಿರುವ ಆರೋಪಗಳನ್ನು ಸತ್ಯವೆಂದು ಪರಿಗಣಿಸಲೇಬೇಕಾಗುತ್ತದೆ. ಇದು ಕೇವಲ ಮಾಹಿತಿ ನೀಡದಿರುವ ಪ್ರಕರಣವಲ್ಲ, ಅದಕ್ಕಿಂತಲೂ ಗಂಭೀರವಾದ ಆರೋಪಗಳಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಕರಣದ ವಿವರಗಳ ಪ್ರಕಾರ, ಜೂನ್ 2ರಂದು ಬಾಲಕನ ಸಹಪಾಠಿ ಹಾಗೂ ರೂಮ್‌ಮೇಟ್ ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಬಾಲಕ ಈ ಬಗ್ಗೆ ಶಾಲಾ ಆಡಳಿತಕ್ಕೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಲಿಲ್ಲ. ಬದಲಾಗಿ, ಅದನ್ನು ಇಬ್ಬರ ಪರಸ್ಪರ ಒಪ್ಪಿಗೆಯ ಘಟನೆ ಎಂಬಂತೆ ಬಿಂಬಿಸಲು ಯತ್ನಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಘಟನೆಯ ಬಗ್ಗೆ ಬಾಲಕ ಮಕ್ಕಳ ಕಲ್ಯಾಣ ಅಧಿಕಾರಿಗೆ ಪತ್ರ ಬರೆದು ಮಾಹಿತಿ ನೀಡಿದ್ದ. ಆದರೆ, ಆ ಪತ್ರವನ್ನು ಅಧಿಕಾರಿಯೇ ನಾಶಪಡಿಸಿ, "ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ. ಇಬ್ಬರು ವಿದ್ಯಾರ್ಥಿಗಳ ನಡುವಿನ ಜಗಳದಿಂದ ದೂರು ನೀಡಲಾಗಿದೆ" ಎಂದು ಬರೆಯುವಂತೆ ಮತ್ತೊಂದು ಪತ್ರ ಬರೆಯುವಂತೆ ಒತ್ತಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ.

High court
ಹೈಕೋರ್ಟ್ ನಿರ್ದೇಶನ: ವೇತನ ಸಹಿತ ಮುಟ್ಟಿನ ರಜೆ ಜಾರಿಗೆ ತರಲು ಸರ್ಕಾರ ಬದ್ಧ; ಸಂತೋಷ್ ಲಾಡ್

ಶಾಲಾ ಆಡಳಿತವು ಈ ಘಟನೆಯ ಬಗ್ಗೆ ಬಾಲಕನ ಪೋಷಕರಿಗೆ ಮಾಹಿತಿ ನೀಡದೇ, ವಿಷಯ ಬಹಿರಂಗಪಡಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಾಲಕನಿಗೆ ಬೆದರಿಕೆ ಹಾಕಿದೆ ಎನ್ನಲಾಗಿದೆ.

ಜೂನ್ 8ರಂದು ಇಬ್ಬರು ವಿದ್ಯಾರ್ಥಿಗಳ ಮೊಬೈಲ್‌ಗಳನ್ನು ಶಾಲಾ ಆಡಳಿತ ವಶಕ್ಕೆ ಪಡೆದಿದ್ದು, ಜೂನ್ 10ರಂದು ವಸತಿ ನಿಲಯದಲ್ಲಿ ಮೊಬೈಲ್ ಅಡಗಿಸಿಟ್ಟ ಆರೋಪದಡಿ ಬಾಲಕನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಆಗಲೇ ಬಾಲಕ ತನ್ನ ತಂದೆಗೆ ನಡೆದ ಘಟನೆ ವಿವರಿಸಿದ್ದ. ನಂತರ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಪ್ರಕರಣದಲ್ಲಿ ನ್ಯಾಯಾಲಯ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪೋಕ್ಸೊ ಕಾಯ್ದೆಯ ಉದ್ದೇಶ ಕೇವಲ ಅಪರಾಧಿಗೆ ಶಿಕ್ಷೆ ನೀಡುವುದಲ್ಲ, ಶಿಕ್ಷಣ ಸಂಸ್ಥೆಗಳ ಮೌನ ಮತ್ತು ಪ್ರಕರಣಗಳನ್ನು ಮುಚ್ಚಿಡುವ ಪ್ರವೃತ್ತಿಯನ್ನು ತಡೆಯುವುದೂ ಆಗಿದೆ ಎಂದು ಹೇಳಿದೆ.

ಲೈಂಗಿಕ ದೌರ್ಜನ್ಯ ಆರೋಪವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವ ಬದಲು ಅದನ್ನು ಮುಚ್ಚಿಡಲು, ಬದಲಾಯಿಸಲು ಅಥವಾ ಬೇರೆ ರೀತಿಯಲ್ಲಿ ತೋರಿಸಲು ಮಾಡುವ ಯಾವುದೇ ಪ್ರಯತ್ನ ಅಪರಾಧಿಗೆ ಮತ್ತಷ್ಟು ಧೈರ್ಯ ತುಂಬುತ್ತದೆ. ಜೊತೆಗೆ ಸಂತ್ರಸ್ತ ಮಗುವಿನ ಮಾನಸಿಕ ನೋವನ್ನು ಹೆಚ್ಚಿಸಿ, ಪೋಕ್ಸೊ ಕಾಯ್ದೆಯ ಮೂಲ ಉದ್ದೇಶವನ್ನೇ ವಿಫಲಗೊಳಿಸುತ್ತದೆ ಹಾಗೂ ಮಕ್ಕಳನ್ನು ಶಿಕ್ಷಣ ಸಂಸ್ಥೆಗಳ ಆರೈಕೆಗೆ ಒಪ್ಪಿಸುವ ಪೋಷಕರ ವಿಶ್ವಾಸಕ್ಕೆ ದ್ರೋಹ ಎಸಗಿದಂತಾಗುತ್ತದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com