

ಮೈಸೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ದೇವರ ಮೇಲೆ ಅಪಾರ ನಂಬಿಕೆ. ಕಠಿಣ ರಾಜಕೀಯ ಸವಾಲು ಅಥವಾ ಬಿಕ್ಕಟ್ಟು ಎದುರಾದಾಗ ಅವರು ಈ ಹಿಂದೆ ದೇವರ ಮೊರೆ ಹೋದದ್ದನ್ನು ನೋಡಿದ್ದೇವೆ. ಅವರ ಕುಟುಂಬ ಸದಸ್ಯರು ಕೂಡ ದೇವರ ಮೇಲೆ ನಂಬಿಕೆ ಹೊಂದಿದ್ದು, ಪೂಜೆ-ಪುನಸ್ಕಾರವನ್ನು ಮಾಡಿಕೊಂಡು ಬರುವವರು.
ಇಂದು ಆಷಾಢ ಮಾಸದ ಮೊದಲ ಶುಕ್ರವಾರ ಸಿಎಂ ಅವರ ಪತ್ನಿ ಉಷಾ ಶಿವಕುಮಾರ್ ಇಂದು ಮೈಸೂರಿನ ಐತಿಹಾಸಿಕ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಮ್ಮ ವಿಶೇಷ ಹರಕೆಯೊಂದನ್ನು ತೀರಿಸಿದ್ದಾರೆ. ತಮ್ಮ ಪತಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾದರೆ ನಾಡದೇವತೆ ಚಾಮುಂಡೇಶ್ವರಿಗೆ ಉಡಿಸಲು ಸೀರೆ ನೀಡುವುದಾಗಿ ಉಷಾ ಶಿವಕುಮಾರ್ ಅವರು ಈ ಹಿಂದೆ ಹರಕೆ ಹೊತ್ತಿದ್ದರಂತೆ.
ಅದರಂತೆ, ಇಂದು ಆಷಾಢ ಮಾಸದ ಮೊದಲ ಶುಕ್ರವಾರದ ಅತ್ಯಂತ ಪವಿತ್ರ ದಿನದಂದು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದು, ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಾವು ಕಾಣಿಕೆಯಾಗಿ ತಂದಿದ್ದ ರೇಷ್ಮೆ ಸೀರೆಯನ್ನು ತಾಯಿಯ ಮೂಲ ವಿಗ್ರಹಕ್ಕೆ ಸಮರ್ಪಿಸುವ ಮೂಲಕ ಹರಕೆ ಪೂರೈಸಿದರು.
ಸಿಎಂ ಪತ್ನಿ ಭಕ್ತಿಯಿಂದ ಅರ್ಪಿಸಿದ ಈ ಸೀರೆಯನ್ನು ಚಾಮುಂಡಿಬೆಟ್ಟದ ಆಡಳಿತ ಮಂಡಳಿ ಹಾಗೂ ಪ್ರಧಾನ ಅರ್ಚಕರು ದೇವಿಗೆ ಉಡಿಸಿ, ವಿಶೇಷ ಅಲಂಕಾರದೊಂದಿಗೆ ಮಹಾಮಂಗಳಾರತಿ ನೆರವೇರಿಸಿದ್ದಾರೆ. ಮೊದಲ ಆಷಾಢ ಶುಕ್ರವಾರದ ಸಡಗರದಲ್ಲಿ ಸಿಎಂ ಕುಟುಂಬದ ಈ ವಿಶೇಷ ಸೇವೆ ಭಕ್ತರ ಗಮನ ಸೆಳೆದಿದೆ.
ದೇವಿ ದರ್ಶನ ಮಾಡಿದ ದರ್ಶನ್ ತೂಗುದೀಪ ಪತ್ನಿ ವಿಜಯಲಕ್ಷ್ಮಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುಟುಂಬಕ್ಕೆ ಸಹ ಮೈಸೂರು ಅಧಿದೇವತೆ ಚಾಮುಂಡಿ ದೇವಿ ಅಂದರೆ ವಿಶೇಷ ಅಚ್ಚುಮೆಚ್ಚು. ದರ್ಶನ್ ಅವರು ಕೂಡ ಆಗಾಗ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ದೇವಿಯ ದರ್ಶನ ಪಡೆಯುತ್ತಿದ್ದರು. ಇಂದು ಅವರ ಪತ್ನಿ ವಿಜಯಲಕ್ಷ್ಮಿ ತಮ್ಮ ಸ್ನೇಹಿತೆಯರ ಜೊತೆಗೆ ವಿವಿಐಪಿ ದರ್ಶನದಲ್ಲಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ತೆರಳಿದ್ದಾರೆ.