

ನವದೆಹಲಿ/ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಅವಕಾಶ ನೀಡುವ ಸುಳಿವು ನೀಡಿದೆ.
ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಪೀಠ, ಸಿಬಿಐ ತನಿಖೆಯ ಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, "ನೀವು ಯಾರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದೀರಿ?" ಎಂದು ನೇರವಾಗಿ ಪ್ರಶ್ನಿಸಿದೆ. ಆದರೆ, ಈ ಕುರಿತು ಅಂತಿಮ ತೀರ್ಪನ್ನು ಕಾಯ್ದಿರಿಸಿರುವ ನ್ಯಾಯಪೀಠ, ಸಾಕ್ಷಿದಾರರಿಗೆ ನೀಡಿರುವ ರಕ್ಷಣೆಯನ್ನು ಮುಂದುವರಿಸುವಂತೆ ಹಾಗೂ ಕಾಲಕಾಲಕ್ಕೆ ಅನುಸರಣೆ ವರದಿಗಳನ್ನು ಸಲ್ಲಿಸುವಂತೆ ಸೂಚಿಸಿದೆ.
ಸೌಜನ್ಯ ಅವರ ತಾಯಿ ಕುಸುಮಾವತಿ ಗೌಡ ಅವರು, ಮರು ತನಿಖೆ ನಡೆಸಲು ನಿರಾಕರಿಸಿದ್ದ ಕರ್ನಾಟಕ ಹೈಕೋರ್ಟ್‌ನ 2024ರ ಆಗಸ್ಟ್ 30ರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ವಿಶೇಷ ಅನುಮತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು.
ವಿಚಾರಣೆ ವೇಳೆ ಮಹತ್ವದ ಬೆಳವಣಿಗೆಯೊಂದರಲ್ಲಿ, ಈ ಹಿಂದೆ ಮರು ತನಿಖೆಗೆ ವಿರೋಧ ವ್ಯಕ್ತಪಡಿಸಿದ್ದ ಕರ್ನಾಟಕ ಸರ್ಕಾರ ತನ್ನ ನಿಲುವು ಬದಲಿಸಿ, ಮರು ತನಿಖೆಗೆ ಬೆಂಬಲ ಸೂಚಿಸಿತು. ಈ ಸಂಬಂಧ ಜುಲೈ 20ರಂದು ನ್ಯಾಯಾಲಯಕ್ಕೆ ವಿವರವಾದ ಪ್ರಮಾಣಪತ್ರವನ್ನೂ ಸಲ್ಲಿಸಿತು.
ಈ ಪ್ರಕರಣದಲ್ಲಿ ಸುಮಾರು ಆರು ವರ್ಷ ಜೈಲು ಶಿಕ್ಷೆ ಅನುಭವಿಸಿ, 2023ರಲ್ಲಿ ಖುಲಾಸೆಯಾದ ಸಂತೋಷ್ ರಾವ್ ಕೂಡ ಸೌಜನ್ಯ ಅವರ ತಾಯಿಯ ಮನವಿಯನ್ನು ಬೆಂಬಲಿಸಿದರು.
ತಮ್ಮ ವಿರುದ್ಧ ದುರುದ್ದೇಶಪೂರ್ವಕವಾಗಿ ಪ್ರಕರಣ ದಾಖಲಿಸಲಾಗಿತ್ತು ಎಂದು ಆರೋಪಿಸಿದ ಅವರು, ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಇದರಿಂದ ಮರು ತನಿಖೆಗೆ ವಿರೋಧ ವ್ಯಕ್ತಪಡಿಸಿದ ಏಕೈಕ ಸಂಸ್ಥೆಯಾಗಿ ಸಿಬಿಐ ಉಳಿಯಿತು. ವಿಚಾರಣೆ ವೇಳೆ ಸಿಬಿಐ ತನಿಖೆಯ ಹಲವು ಲೋಪಗಳನ್ನು ಅರ್ಜಿದಾರರ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.
ಪ್ರಕರಣದ ಸ್ಥಳಕ್ಕೆ ಸಿಬಿಐ ಆರೋಪಪಟ್ಟಿ ಸಲ್ಲಿಸಿದ ಅಧಿಕಾರಿಯೇ ಎಂದಿಗೂ ಭೇಟಿ ನೀಡಿರಲಿಲ್ಲ, 14 ವರ್ಷಗಳಾದರೂ ಸೌಜನ್ಯ ಅವರ ತಾಯಿಯ ಹೇಳಿಕೆಯನ್ನು ಯಾವುದೇ ತನಿಖಾ ಸಂಸ್ಥೆ ದಾಖಲಿಸಿರಲಿಲ್ಲ, ಮೃತದೇಹದ ಬಳಿ ಪತ್ತೆಯಾಗಿದ್ದ 2:45ಕ್ಕೆ ನಿಂತಿದ್ದ ಕೈಗಡಿಯಾರವನ್ನು ಪರೀಕ್ಷೆಗೆ ಕಳುಹಿಸಿರಲಿಲ್ಲ, ಕಾಣೆಯಾಗಿದ್ದ ಒಳ ಉಡುಪಿನ ಬದಲಿಗೆ ಹೊಸ ಒಳಉಡುಪನ್ನು ಮನೆಯಲ್ಲೇ ಪಡೆದು ತನಿಖೆ ನಡೆಸಲಾಗಿತ್ತು ಎಂಬ ಅಂಶಗಳನ್ನು ನ್ಯಾಯಾಲಯದ ಮುಂದೆ ವಿವರಿಸಲಾಯಿತು.
ಇದಲ್ಲದೆ, 2021ರಲ್ಲಿ ಸಿಬಿಐ ತಾನೇ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ, ನಾಲ್ವರು ಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ ಸ್ಥಳೀಯ ಮೂವರು ವ್ಯಕ್ತಿಗಳ ಪಾತ್ರವನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಿದ್ದರೂ, ನಂತರ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದನ್ನೂ ವಕೀಲರು ಪ್ರಸ್ತಾಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, "ನೀವು ಯಾರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದೀರಿ? ನೀವು ಆರೋಪಪಟ್ಟಿ ಸಲ್ಲಿಸಿದ್ದ ವ್ಯಕ್ತಿ ಈಗಾಗಲೇ ಖುಲಾಸೆಯಾಗಿದ್ದಾನೆ. ಆತನೇ ನಿಜವಾದ ಆರೋಪಿಗಳನ್ನು ಪತ್ತೆಹಚ್ಚುವಂತೆ ಕೇಳುತ್ತಿದ್ದಾನೆ. ಹಾಗಿದ್ದರೂ ಸತ್ಯ ಹೊರಬರಲು ನಡೆಯುವ ಪ್ರಯತ್ನವನ್ನೇ ನೀವು ಏಕೆ ವಿರೋಧಿಸುತ್ತಿದ್ದೀರಿ?" ಎಂದು ಸಿಬಿಐಯನ್ನು ಪ್ರಶ್ನಿಸಿತು.
ಇದಲ್ಲದೆ, ಸಿಬಿಐ ಅಧಿಕಾರಿ ತನಿಖಾಧಿಕಾರಿಯಂತೆ ಅಲ್ಲ, ನ್ಯಾಯಾಧೀಶನಂತೆ ವರ್ತಿಸಿದ್ದಾರೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು. ಹಿಂದಿನ ಹೇಳಿಕೆಗಳನ್ನು ಮರು ವ್ಯಾಖ್ಯಾನಿಸಿ ಸ್ವತಂತ್ರ ತನಿಖೆಯಿಲ್ಲದೆ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಕೋರ್ಟ್ ಟೀಕಿಸಿತು.
ಈ ಹಿಂದೆ 2026ರ ಏಪ್ರಿಲ್ 29ರಂದು ಸುಪ್ರೀಂ ಕೋರ್ಟ್, ಅರ್ಜಿದಾರರು ಉಲ್ಲೇಖಿಸಿದ್ದ ಸಾಕ್ಷಿದಾರರಿಗೆ ರಕ್ಷಣೆ ನೀಡುವಂತೆ ಆದೇಶಿಸಿತ್ತು. ನಂತರ ರಾಜ್ಯ ಸರ್ಕಾರ ಸಲ್ಲಿಸಿದ ವರದಿಯಲ್ಲಿ, ಹಲವು ಸಾಕ್ಷಿದಾರರನ್ನು ಪತ್ತೆಹಚ್ಚಿ ಭದ್ರತೆ ಒದಗಿಸಲಾಗಿದೆ ಎಂದು ತಿಳಿಸಲಾಗಿದೆ.
ಪ್ರಕರಣದ ಮರು ತನಿಖೆಯನ್ನು ಸುಪ್ರೀಂ ಕೋರ್ಟ್ ನೇರ ಮೇಲ್ವಿಚಾರಣೆಯಲ್ಲೇ ನಡೆಸಬೇಕು ಎಂದು ಸೌಜನ್ಯ ಅವರ ತಾಯಿ ಪರ ವಕೀಲರು ಮನವಿ ಮಾಡಿದರು.
ಈ ಹಿನ್ನೆಲೆಯಲ್ಲಿ ನ್ಯಾಯಪೀಠ ತೀರ್ಪನ್ನು ಕಾಯ್ದಿರಿಸಿದ್ದು, ಸಾಕ್ಷಿದಾರರ ರಕ್ಷಣೆಯನ್ನು ಮುಂದುವರಿಸುವಂತೆ ಸೂಚಿಸಿದೆ. ಇದೀಗ ಸುಪ್ರೀಂ ಕೋರ್ಟ್ ನೀಡಲಿರುವ ಅಂತಿಮ ತೀರ್ಪಿನತ್ತ ಎಲ್ಲರ ಗಮನ ನೆಟ್ಟಿದೆ.