ನೆಲಮಂಗಲದಲ್ಲಿ ಗಂಗ-ರಾಷ್ಟ್ರಕೂಟರ ಕಾಲದ ಅಪರೂಪದ 8 ಅಡಿ ಉದ್ದದ ಬೃಹತ್‌ ವೀರಗಲ್ಲು ಪತ್ತೆ...!

ಸುಮಾರು 8 ಅಡಿ ಉದ್ದ ಹಾಗೂ 2.5 ಅಡಿ ಅಗಲ ಇರುವ ಈ ವೀರಗಲ್ಲು, ರೈತ ರಂಗಸ್ವಾಮಯ್ಯ ತಮ್ಮ ಜಮೀನಿನಲ್ಲಿದ್ದ ನೀಲಗಿರಿ ಮರಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸುವ ವೇಳೆ ಪತ್ತೆಯಾಗಿದೆ.
The rare hero stone with an inscription dating back to the 850 AD era.
ವೀರಗಲ್ಲು
Updated on

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪದ ಭೈರಸಂದ್ರ ಗ್ರಾಮದಲ್ಲಿ ಗಂಗ ಹಾಗೂ ರಾಷ್ಟ್ರಕೂಟರ ಕಾಲಘಟ್ಟಕ್ಕೆ ಸೇರಿದ, ಕ್ರಿ.ಶ. 850ರ ಅವಧಿಯ ಅಪರೂಪದ 'ಹುಲಿಬೇಟೆ ವೀರಗಲ್ಲು' ಪತ್ತೆಯಾಗಿದೆ.

ಸುಮಾರು 8 ಅಡಿ ಉದ್ದ ಹಾಗೂ 2.5 ಅಡಿ ಅಗಲ ಇರುವ ಈ ವೀರಗಲ್ಲು, ರೈತ ರಂಗಸ್ವಾಮಯ್ಯ ತಮ್ಮ ಜಮೀನಿನಲ್ಲಿದ್ದ ನೀಲಗಿರಿ ಮರಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸುವ ವೇಳೆ ಪತ್ತೆಯಾಗಿದೆ.

ಇದರ ಐತಿಹಾಸಿಕ ಮಹತ್ವವನ್ನು ಅರಿತ ರಂಗಸ್ವಾಮಯ್ಯ ಅವರು ಸ್ಥಳೀಯ ಪತ್ರಕರ್ತ ಹಾಗೂ ಇತಿಹಾಸಾಸಕ್ತ ವಿಜಯಕುಮಾರ್ ಹೊಸಪಾಳ್ಯ ಅವರಿಗೆ ಮಾಹಿತಿ ನೀಡಿದ್ದಾರೆ.

ರಂಗಸ್ವಾಮಯ್ಯ ಅವರ ಪುತ್ರ ಅಶೋಕ್ ಅವರ ಸಹಾಯದಿಂದ ವಿಜಯಕುಮಾರ್ ಅವರು ಇತಿಹಾಸಕಾರರಾದ ಬಾಳಸುಬ್ರಹ್ಮಣ್ಯ ಜಿ. ರಾವ್ ಹಾಗೂ ಡಾ. ವೇದಾವತಿ ಎಸ್ ಅವರಿಗೆ ಮಾಹಿತಿ ನೀಡಿದ್ದು, ಅವರು ಇದನ್ನು ವೀರಗಲ್ಲು ಎಂದು ದೃಢಪಡಿಸಿದರು.

ಬಳಿಕ ತಜ್ಞರಾದ ಕೆ. ಧನಪಾಲ್, ನರೇಂದ್ರ ಎಂ. ಹಾಗೂ ಶಾಂತಕುಮಾರ್ ಸ್ಥಳ ಪರಿಶೀಲನೆ ನಡೆಸಿ ಅದರ ಐತಿಹಾಸಿಕ ಮಹತ್ವವನ್ನು ಖಚಿತಪಡಿಸಿದರು.

ಈ ವೀರಗಲ್ಲಿನ ಮೇಲಿನ ಶಾಸನವು ಹಳೆಗನ್ನಡ ಲಿಪಿಯಲ್ಲಿದ್ದು, ಶಾಸನದಲ್ಲಿ ನಿಖರವಾದ ವರ್ಷ ಉಲ್ಲೇಖಿಸಿಲ್ಲ. ಆದರೆ, ಲಿಪಿಯ ಶೈಲಿಯನ್ನು ಆಧರಿಸಿ ಇದು ಗಂಗ–ರಾಷ್ಟ್ರಕೂಟರ ಆಳ್ವಿಕೆಯ ಕ್ರಿ.ಶ. 850ರ ಕಾಲಘಟ್ಟಕ್ಕೆ ಸೇರಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

The rare hero stone with an inscription dating back to the 850 AD era.
ಉಡುಪಿಯಲ್ಲಿ ಅಪರೂಪದ ಶಿಲ್ಪ ಪತ್ತೆ: 45 ಇಂಚು ಎತ್ತರದ ಬೇಟೆಯ ವೀರಗಲ್ಲು ಪತ್ತೆ..!

ವೀರಗಲ್ಲಿನ ಶಿಲ್ಪದಲ್ಲಿ ಒಬ್ಬ ವೀರನು ಹುಲಿಯೊಂದಿಗೆ ಹೋರಾಡುತ್ತಿರುವ ದೃಶ್ಯವನ್ನು ಕೆತ್ತಲಾಗಿದೆ. ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದ ಬಳಿಕ ಅಪ್ಸರೆಯರು ಆತನನ್ನು ಸ್ವರ್ಗಕ್ಕೆ ಕರೆದೊಯ್ಯುತ್ತಿರುವ ಚಿತ್ರಣವೂ ಅದರಲ್ಲಿ ಮೂಡಿಬಂದಿದೆ. ವೀರನು ಬಲಗೈಯಲ್ಲಿ ಕತ್ತಿ ಹಿಡಿದು, ಎಡಗೈಯಿಂದ ಹುಲಿಯ ಮುಂಗಾಲನ್ನು ಹಿಡಿದು ಹೋರಾಡುತ್ತಿರುವುದು ಶಿಲ್ಪದಲ್ಲಿ ಕಂಡು ಬಂದಿದೆ.

ಶಾಸನದ ಪ್ರಕಾರ, ಈ ವೀರನ ಹೆಸರು ಶಿವಮಾರೆನಾಡಿ. ಆತ ತಣ್ಣಿಯರಟ್ಟಮ್ಮರೊಡೆಯ ಅವರ ಪುತ್ರನಾಗಿದ್ದು, ಮನ್ನೆನಾಡಿನ ನಾಡಗೌಡ ಮಾರಮ್ಮ ಅವರ ಸೇವಕನಾಗಿದ್ದನು. ಕೃಷಿ ಮತ್ತು ಪಶುಸಂಗೋಪನೆ ಪ್ರಮುಖ ಜೀವನೋಪಾಯವಾಗಿದ್ದ ಕಾಲದಲ್ಲಿ ಕಾಡುಪ್ರಾಣಿಗಳಿಂದ ಬೆಳೆ ಹಾಗೂ ಜಾನುವಾರುಗಳನ್ನು ರಕ್ಷಿಸುವ ಸಂದರ್ಭದಲ್ಲಿ ನಡೆದ ಹೋರಾಟದಲ್ಲಿ ಆತ ವೀರಮರಣ ಹೊಂದಿದ್ದನೆಂದು ಶಾಸನ ತಿಳಿಸುತ್ತದೆ. ಅವನ ಶೌರ್ಯವನ್ನು ಸ್ಮರಿಸುವ ಸಲುವಾಗಿ ಈ ವೀರಗಲ್ಲು ಸ್ಥಾಪಿಸಲಾಗಿದೆ ಎಂದು ಇತಿಹಾಸಕಾರರು ಹೇಳಿದ್ದಾರೆ.

ಇತಿಹಾಸಕಾರರ ಪ್ರಕಾರ, ಇಂದಿನ ನೆಲಮಂಗಲ, ಮಾಗಡಿ, ದೊಡ್ಡಬಳ್ಳಾಪುರ ತಾಲ್ಲೂಕುಗಳ ಬಹುಭಾಗ ಹಾಗೂ ಹೆಸರಘಟ್ಟ ಹೋಬಳಿಯ ಕೆಲವು ಪ್ರದೇಶಗಳು ಅಂದಿನ ಮನ್ನೆನಾಡು ವ್ಯಾಪ್ತಿಗೆ ಸೇರಿದ್ದವು. ಗಂಗರ ಆಳ್ವಿಕೆಯಲ್ಲಿ ಮನ್ನೆ ರಾಜಧಾನಿಯಾಗಿತ್ತು.

ಪತ್ತೆಯಾದ ವೀರಗಲ್ಲನ್ನು ಸಮೀಪದ ದೇವಾಲಯದಲ್ಲಿ ಸುರಕ್ಷಿತವಾಗಿ ಪ್ರತಿಷ್ಠಾಪಿಸಲಾಗಿದ್ದು, ಮುಂದಿನ ಸಂರಕ್ಷಣಾ ಕ್ರಮಕ್ಕಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಇತಿಹಾಸಕಾರ ಬಾಳಸುಬ್ರಹ್ಮಣ್ಯ ಜಿ. ರಾವ್ ತಿಳಿಸಿದ್ದಾರೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com