

ಬೆಂಗಳೂರು: ಕರ್ನಾಟಕದ ಜಲಹಕ್ಕನ್ನು ತಮಿಳುನಾಡಿನ ರಾಜಕೀಯಕ್ಕಾಗಿ ಬಲಿಕೊಟ್ಟ ಕಾಂಗ್ರೆಸ್ ಸರ್ಕಾರದ ಮಹಾದ್ರೋಹ ಸಂಸತ್ತಿನಲ್ಲಿ ಬೆತ್ತಲಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ರಾಜಕೀಯ ಮೈತ್ರಿಗಾಗಿ, ಅಧಿಕಾರಕ್ಕಾಗಿ ಕಳೆದ ಮೂರೂ ವರ್ಷಗಳಿಂದ ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಲೇ ಬಂದಿರುವ ಕರ್ನಾಟಕ ಸರ್ಕಾರದ ಕಳ್ಳಾಟವನ್ನ ಈಗ ಸಂಸತ್ತಿನ ಅಧಿಕೃತ ದಾಖಲೆಗಳೇ ಬಯಲಿಗೆಳೆದಿವೆ. ತಮಿಳುನಾಡಿನ ರಾಜ್ಯಸಭಾ ಸಂಸದ ಡಾ. ಅನ್ಬುಮಣಿ ರಾಮದಾಸ್ ಅವರು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಜಲಶಕ್ತಿ ಸಚಿವಾಲಯ ನೀಡಿರುವ ಅಧಿಕೃತ ಉತ್ತರ ಕಾಂಗ್ರೆಸ್ ಸರ್ಕಾರದ ನಿಜಮುಖವನ್ನು ರಾಜ್ಯದ ಜನತೆಯ ಮುಂದೆ ತೆರೆದಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾಖಲೆಗಳು ಹೇಳುತ್ತಿರುವ ದ್ರೋಹದ ನಗ್ನ ಸತ್ಯ: 2025-26ರ ಜಲವರ್ಷದ ಮೇ ತಿಂಗಳಲ್ಲಿ ಬಿಳಿಗುಂಡ್ಲುವಿನಲ್ಲಿ ತಮಿಳುನಾಡಿಗೆ ಹರಿಸಬೇಕಿದ್ದದ್ದು ಕೇವಲ 2.5 TMC ನೀರು! ಕಾಂಗ್ರೆಸ್ ಹರಿಸಿದ್ದು: ಕನ್ನಡಿಗರ ಕಣ್ಣಿಗೆ ಮಣ್ಣೆರಚಿ, ತಮಿಳುನಾಡಿಗೆ ಹರಿಸಿದ್ದು ಬರೋಬ್ಬರಿ 3.101 TMC ನೀರು! ಅಂದರೆ ನಿಯಮಕ್ಕಿಂತ 0.601 TMC ಹೆಚ್ಚು ನೀರನ್ನು ಕದ್ದುಮುಚ್ಚಿ ತಮಿಳುನಾಡಿಗೆ ಹರಿಸಿ, ರಾಜ್ಯದ ರೈತರಿಗೆ ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿದೆ ಎಂದು ಆರೋಪಿಸಿದ್ದಾರೆ.
ಅವತ್ತು ಬೇಕಾಬಿಟ್ಟಿಯಾಗಿ ನೀರು ಹರಿಸಿದ ಪರಿಣಾಮವೇ ಇಂದು ಕಾವೇರಿ ಕೊಳ್ಳದ ರೈತರ ಬೆಳೆ ಒಣಗುತ್ತಿದೆ. ಬೆಂಗಳೂರು ಟ್ಯಾಂಕರ್ ಮಾಫಿಯಾದ ಕಪಿಮುಷ್ಟಿಗೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ಕನ್ನಡಿಗರ ಮುಂದೆ ಮೇಕೆದಾಟು ಹೆಸರಿನಲ್ಲಿ ರಾಜಕಾರಣ, ಮತ್ತೊಂದೆಡೆ ಕರ್ನಾಟಕದ ಜೀವಜಲವನ್ನು ಹೆಚ್ಚುವರಿಯಾಗಿ ಹರಿಸಿ ಕನ್ನಡಿಗರ ಹಿತಾಸಕ್ತಿಗೆ ದ್ರೋಹ! ಇದು ಕೇವಲ ರಾಜಕೀಯ ವಂಚನೆಯಲ್ಲ. ಇದು ಕರ್ನಾಟಕದ ನೀರಿನ ಹಕ್ಕು, ರೈತರ ಬದುಕು ಮತ್ತು ಬೆಂಗಳೂರಿನ ಜಲಭದ್ರತೆಗೆ ಮಾಡಿದ ಮಹಾದ್ರೋಹ ಎಂದಿದ್ದಾರೆ.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಸರ್ಕಾರ ಕನ್ನಡಿಗರ ಕ್ಷಮೆ ಕೇಳಬೇಕು. ರಾಜ್ಯದ ಜನತೆಗೆ ಎಸಗಿದ ಈ ದ್ರೋಹಕ್ಕೆ ಉತ್ತರ ನೀಡಲೇಬೇಕು ಎಂದು ಒತ್ತಾಯಿಸಿದ್ದಾರೆ.