ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ: CIDಗೆ ಪ್ರಕರಣ ಹಸ್ತಾಂತರ!

ಈ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಹಾಗೂ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಲಾಗುವುದು ಎಂದು ಪ್ರಿಯಾಂಕಾ ಗಾಂಧಿ ಭರವಸೆ ನೀಡಿದ್ದಾರೆ.
Priyank Kharge
ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) 400 ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ದಾಖಲಾದ ಪ್ರಕರಣಗಳನ್ನು ಸಿಐಡಿ (ಅಪರಾಧ ತನಿಖಾ ದಳ) ತನಿಖೆಗೆ ಹಸ್ತಾಂತರಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಂಗಳವಾರ ತಿಳಿಸಿದರು.

ಈ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಹಾಗೂ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಈ ಕುರಿತು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, "ನ್ಯಾಯಯುತ, ನಿಷ್ಪಕ್ಷಪಾತ ಮತ್ತು ಸಮಗ್ರ ತನಿಖೆಯನ್ನು ಖಚಿತಪಡಿಸುವ ದೃಷ್ಟಿಯಿಂದ ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಮಾರ್ಗಗಳ ತಡೆಗಟ್ಟುವಿಕೆ ಕ್ರಮಗಳು) ಕಾಯ್ದೆ-2023'ರ ಸೆಕ್ಷನ್ 10ರ ಅಡಿಯಲ್ಲಿ ಬೆಂಗಳೂರು ನಗರದ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕೆಪಿಎಸ್‌ಸಿ ವಿರುದ್ಧ ದಾಖಲಿಸಲಾದ ಎರಡು ಪ್ರಕರಣಗಳನ್ನು ಮುಂದಿನ ತನಿಖೆಗಾಗಿ ಸಿಐಡಿಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕ ನೇಮಕಾತಿ ಪ್ರಕ್ರಿಯೆಯ ಘನತೆ ಮತ್ತು ವಿಶ್ವಾಸಾರ್ಹತೆಯನ್ನು ಎತ್ತಿಹಿಡಿಯಲು ಸರ್ಕಾರ ಬದ್ಧವಾಗಿದೆ. ಪರೀಕ್ಷೆಗಳು ಅಥವಾ ನೇಮಕಾತಿಯಲ್ಲಿ ಭ್ರಷ್ಟಾಚಾರ, ದುರ್ನಡತೆ ಅಥವಾ ಅಕ್ರಮ ಮಾರ್ಗಗಳ ಕುರಿತ ಯಾವುದೇ ಆರೋಪದ ಬಗ್ಗೆ ನಿರ್ಭಯವಾಗಿ ಮತ್ತು ಪಕ್ಷಪಾತವಿಲ್ಲದೆ ಸಮಗ್ರ ತನಿಖೆ ನಡೆಸಲಾಗುವುದು. ತಪ್ಪಿತಸ್ಥರು ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ, ಅವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು," ಎಂದು ಅವರು ಹೇಳಿದ್ದಾರೆ.

ತನಿಖೆಯನ್ನು ಸಿಐಡಿ (CID)ಗೆ ವಹಿಸಿರುವುದು, ಲಕ್ಷಾಂತರ ಆಕಾಂಕ್ಷಿಗಳು ಹಾಗೂ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವಂತಹ ಸ್ವತಂತ್ರ ಮತ್ತು ಪಾರದರ್ಶಕ ತನಿಖೆಯನ್ನು ಖಚಿತಪಡಿಸಿಕೊಳ್ಳುವ ಸರ್ಕಾರದ ದೃಢ ನಿರ್ಧಾರವನ್ನು ಪ್ರತಿಬಿಂಬಿಸುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಪಾವಿತ್ರ್ಯತೆಯನ್ನು ಕಾಪಾಡುವುದು ಮತ್ತು ಅರ್ಹತೆಗೆ ರಕ್ಷಣೆ ನೀಡುವುದು ನಮ್ಮ ಆದ್ಯತೆಗಳಾಗಿವೆ" ಎಂದು ಸಚಿವರು ತಿಳಿಸಿದ್ದಾರೆ. ಸಿಬಿಐ (CBI) ಅಥವಾ ಕರ್ನಾಟಕ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ವಿರೋಧ ಪಕ್ಷವಾದ ಬಿಜೆಪಿ ಆಗ್ರಹಿಸುತ್ತಿರುವಾಗಲೇ ಈ ಘೋಷಣೆ ಹೊರಬಿದ್ದಿದೆ.

Priyank Kharge
ಪಶುವೈದ್ಯಕೀಯ ಅಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ: ಸಿಬಿಐ, ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಬಿಜೆಪಿ ಒತ್ತಾಯ

ಈ ಪ್ರಕರಣದಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ (FIR) ಅಮಾನತುಗೊಂಡಿರುವ ಕೆಪಿಎಸ್‌ಸಿ (KPSC) ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್, ಕೆಪಿಎಸ್‌ಸಿಯ ಇತರ ಅಧಿಕಾರಿಗಳು ಮತ್ತು ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ 29 ಅಭ್ಯರ್ಥಿಗಳ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಪಶುವೈದ್ಯಕೀಯ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಆಂತರಿಕ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಅಂತಿಮ ಆಯ್ಕೆ ಪಟ್ಟಿಯನ್ನು ತಡೆಹಿಡಿಯಲು ಕೆಪಿಎಸ್‌ಸಿ (KPSC) ಭಾನುವಾರ ನಿರ್ಧರಿಸಿತು. ಈ ಆರೋಪಗಳನ್ನು ಪರಿಶೀಲಿಸಲು, ಆಯೋಗವು ಹಿರಿಯ ಸದಸ್ಯರೊಬ್ಬರ ನೇತೃತ್ವದಲ್ಲಿ ಆಂತರಿಕ ತನಿಖಾ ಉಪಸಮಿತಿಯೊಂದನ್ನು ರಚಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com