

ಬೆಂಗಳೂರು: ಸಿಲಿಕಾನ್ ಸಿಟಿ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಂತ ಆಘಾತಕಾರಿ ಮತ್ತು ದಾರುಣ ಘಟನೆಯೊಂದು ಬೆಳಕಿಗೆ ಬಂದಿದೆ.
ಆಂಧ್ರಪ್ರದೇಶ ಮೂಲದ ಯುವಕನೊಬ್ಬ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ತುಂಡಾದ ತಲೆಯನ್ನು ಬೀದಿ ನಾಯಿಗಳು ಕ್ರಿಕೆಟ್ ಮೈದಾನಕ್ಕೆ ಎಳೆದೊಯ್ದಿರುವ ಭೀಕರ ದೃಶ್ಯ ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.
ಮೃತರನ್ನು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ನಿವಾಸಿ, 25 ವರ್ಷದ ವಿಶ್ವನಾಥ್ ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನಲ್ಲಿ ಡೆಲಿವರಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು.
ಕಳೆದ ಮಂಗಳವಾರ (ಜುಲೈ 28) ಮಧ್ಯರಾತ್ರಿ ಹೊಸೂರು ರೈಲ್ವೆ ನಿಲ್ದಾಣದ ಬಳಿ ವಿಶ್ವನಾಥ್ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈಲು ಹರಿದ ರಭಸಕ್ಕೆ ಅವರ ರುಂಡ ಮತ್ತು ಮುಂಡ ಬೇರ್ಪಟ್ಟಿತ್ತು.
ಬುಧವಾರ ಬೆಳಗ್ಗೆ ವರ್ತೂರಿನ ಕೊಡತಿ ಗ್ರಾಮದ ಕ್ರಿಕೆಟ್ ಆಟದ ಮೈದಾನದಲ್ಲಿ ತುಂಡಾಗಿರುವ ತಲೆ ಪತ್ತೆಯಾದಾಗ ಸ್ಥಳೀಯರು ಬೆಚ್ಚಿಬಿದ್ದಿದ್ದರು. ಬಳಿಕ 'ನಮ್ಮ 112' ತುರ್ತು ಸಹಾಯವಾಣಿಗೆ ಮಾಹಿತಿ ನೀಡಿದ್ದರು.
ಸುದ್ದಿ ತಿಳಿಯುತ್ತಿದ್ದಂತೆಯೇ ತಕ್ಷಣವೇ ವೈಟ್‌ಫೀಲ್ಡ್ ಮತ್ತು ವರ್ತೂರು ಪೊಲೀಸರು ಸ್ಥಳಕ್ಕೆ ಧಾವಿಸಿದರು. ಆರಂಭದಲ್ಲಿ ಕೊಲೆ ಇರಬಹುದು ಎಂದು ಶಂಕಿಸಲಾಗಿತ್ತಲ್ಲದೆ, ಭಾರೀ ವದಂತಿ ಮತ್ತು ಆತಂಕ ಶುರುವಾಗಿತ್ತು.
ಬಳಿಕ ವಿಧಿವಿಜ್ಞಾನ ಇಲಾಖೆ (FSL) ಮತ್ತು ಶ್ವಾನ ದಳದೊಂದಿಗೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ.
ರೈಲ್ವೆ ಹಳಿಯಲ್ಲಿದ್ದ ತಲೆಯನ್ನು ಬೀದಿ ನಾಯಿಗಳ ಹಿಂಡು ಸುಮಾರು 500 ಮೀಟರ್ ದೂರದ ಕ್ರಿಕೆಟ್ ಮೈದಾನದವರೆಗೆ ಎಳೆದೊಯ್ದು ಹಾಕಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಪೊಲೀಸರು ಇದನ್ನು ಅಸಹಜ ಸಾವು (UDR) ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ವಿಶ್ವನಾಥ್ ಕಳೆದ ಕೆಲವು ದಿನಗಳಿಂದ ತೀವ್ರವಾದ ಪ್ರೇಮ ವೈಫಲ್ಯ ಹಾಗೂ ವೈಯಕ್ತಿಕ ಸಂಬಂಧಗಳ ಸಮಸ್ಯೆಯಿಂದ ಖಿನ್ನತೆಗೆ ಒಳಗಾಗಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇದೇ ಬೇಸರದಿಂದ ಅವರು ಆತ್ಮಹತ್ಯೆಯಂತಹ ತೀವ್ರ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ಮತ್ತು ತಲೆಯನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತನ ಕುಟುಂಬ ಸದಸ್ಯರಿಗೂ ಘಟನೆ ಬಗ್ಗೆ ಮಾಹಿತಿ ನೀಡಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ವಿಶ್ವನಾಥ್ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಅವರು ಪ್ರೇಮ ಸಂಬಂಧದಲ್ಲಿದ್ದರು. ಸಾವಿಗೆ ಮುನ್ನ ಅವರು ತಮ್ಮ ಗೆಳತಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದರು ಎನ್ನಲಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.
ನೀವು ಅಥವಾ ನಿಮಗೆ ಪರಿಚಿತರಾದ ಯಾರಾದರೂ ಆತ್ಮಹತ್ಯೆಯ ಆಲೋಚನೆಗಳು ಅಥವಾ ತೀವ್ರ ಮಾನಸಿಕ ಒತ್ತಡವನ್ನು ಎದುರಿಸುತ್ತಿದ್ದರೆ, ವಿಶ್ವಾಸಾರ್ಹ ಕುಟುಂಬ ಸದಸ್ಯರು, ಸ್ನೇಹಿತರು ಅಥವಾ ಮಾನಸಿಕ ಆರೋಗ್ಯ ತಜ್ಞರೊಂದಿಗೆ ಮಾತನಾಡಿ. ಇಲ್ಲವೇ ಭಾರತದಲ್ಲಿ 24x7 ಟೆಲಿ-ಮನಸ್ ಸಹಾಯವಾಣಿ 14416 ಅಥವಾ 1-800-89-14416 ಗೆ ಕರೆ ಮಾಡಿ ನೆರವು ಪಡೆಯಬಹುದು.