

ಬೆಂಗಳೂರು: ಕರ್ನಾಟಕದಲ್ಲಿ ಕಾವೇರಿ ವಿಚಾರವಾಗಿ ನಡೆಯುತ್ತಿರುವ ಪ್ರತಿಭಟನೆ ಹಿನ್ನಲೆಯಲ್ಲಿ ಆಗಸ್ಟ್ 3ರಂದು ಬೆಂಗಳೂರಿಗೆ ನಿಗದಿಯಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಸಿ. ವಿಜಯ್ ಜೋಸೆಫ್ ಅವರ ಭೇಟಿಯನ್ನು ಮುಂದೂಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.
ಕಾವೇರಿ ನೀರು ಹಂಚಿಕೆ ಪ್ರಾಧಿಕಾರ (CWMA) ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸುವಂತೆ ನೀಡಿರುವ ನಿರ್ದೇಶನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವುದರಿಂದ ಸಿಎಂ ಡಿಕೆಶಿ ಈ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ, ವಿಶೇಷವಾಗಿ ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ವಿಚಾರವಾಗಿ ಪ್ರತಿಭಟನೆಗಳು ತೀವ್ರಗೊಂಡಿವೆ. ಪ್ರತಿಭಟನಾಕಾರರು ವಿಜಯ್ ಅಭಿನಯದ ಇತ್ತೀಚೆಗೆ ಬಿಡುಗಡೆಯಾದ 'ಜನನಾಯಕನ್' ಚಿತ್ರದ ಪೋಸ್ಟರ್‌ಗಳನ್ನು ಹರಿದು ಹಾಕಿದ್ದು, ಕೆಲವೆಡೆ ಚಿತ್ರ ಪ್ರದರ್ಶನವನ್ನೂ ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆರಂಭದಲ್ಲಿ ತಮಿಳುನಾಡು ಮುಖ್ಯಮಂತ್ರಿಯವರನ್ನು ಸ್ವಾಗತಿಸಲು ಸರ್ಕಾರ ಸಿದ್ಧತೆ ನಡೆಸಿದ್ದರೂ, ಸಚಿವ ಸಂಪುಟದ ಸಹೋದ್ಯೋಗಿಗಳು ಹಾಗೂ ಕಾನೂನು ತಜ್ಞರೊಂದಿಗೆ ಚರ್ಚಿಸಿದ ಬಳಿಕ ಭೇಟಿಯನ್ನು ಮುಂದೂಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಪರಿಸ್ಥಿತಿ ಸುಧಾರಿಸುತ್ತಿದೆ
"ತಾತ್ಕಾಲಿಕವಾಗಿ ತಮ್ಮ ಭೇಟಿಯನ್ನು ಮುಂದೂಡಬೇಕೆಂದು ನಾನು ಮನವಿ ಮಾಡಿದ್ದೇನೆ. ಈಗ ಪರಿಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದೆ. ಉತ್ತಮ ಮಳೆಯಾಗುತ್ತಿದ್ದು, ಜಲಾಶಯಗಳಿಗೆ ನೀರಿನ ಹರಿವು ಹೆಚ್ಚುತ್ತಿದೆ. ಪರಿಸ್ಥಿತಿ ಸಂಪೂರ್ಣ ಶಾಂತವಾದ ಬಳಿಕ ಸ್ನೇಹಪೂರ್ವಕ ವಾತಾವರಣದಲ್ಲಿ ಸಭೆ ನಡೆಸೋಣ," ಎಂದು ಅವರು ಸುದ್ದಿಗಾರರಿಗೆ ಹೇಳಿದರು.
ಈ ಕುರಿತು ಈಗಾಗಲೇ ತಮಿಳುನಾಡು ಮುಖ್ಯಮಂತ್ರಿಯವರೊಂದಿಗೆ ಮಾತನಾಡಿದ್ದು, ಆಗಸ್ಟ್ 3ರ ಬದಲು ಪರಸ್ಪರ ಅನುಕೂಲಕರ ದಿನಾಂಕ ನಿಗದಿಪಡಿಸೋಣ ಎಂದು ಮತ್ತೊಮ್ಮೆ ಮನವಿ ಮಾಡುವುದಾಗಿ ಹೇಳಿದರು.
ಅಲ್ಲದೆ "ನಮ್ಮ ರಾಜ್ಯಕ್ಕೆ ಅತಿಥಿಗಳು ಬಂದಾಗ ಅವರನ್ನು ಆತ್ಮೀಯವಾಗಿ ಸ್ವಾಗತಿಸಬೇಕು. ಕರ್ನಾಟಕ ಎಂದಿಗೂ ಎಲ್ಲ ರಾಜ್ಯದ ಜನರನ್ನು ಗೌರವದಿಂದ ಬರಮಾಡಿಕೊಂಡಿದೆ. ಯಾರ ಭಾವನೆಗೂ ಧಕ್ಕೆ ಉಂಟಾಗಬಾರದು" ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಶಾಂತಿ ಪ್ರಿಯ ರಾಜ್ಯ
ಕರ್ನಾಟಕ ಶಾಂತಿ ಪ್ರಿಯ ರಾಜ್ಯವಾಗಿದ್ದು, ಶಾಂತಿ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದ ಅವರು, ತಮಿಳುನಾಡಿನ ಸಾವಿರಾರು ಜನ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದಾರೆ ಹಾಗೂ ಅನೇಕ ಕನ್ನಡಿಗರು ತಮಿಳುನಾಡಿನಲ್ಲಿ ಉದ್ಯೋಗ ಮಾಡುತ್ತಿದ್ದಾರೆ ಎಂದು ನೆನಪಿಸಿದರು.
"ಯಾರಿಗೂ ಯಾವುದೇ ತೊಂದರೆ ಆಗಬಾರದು. ಭಾವೋದ್ವೇಗದ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಭೇಟಿಯನ್ನು ಮುಂದೂಡುವ ನಿರ್ಧಾರವು ಕೇವಲ ಉತ್ತಮ ವಾತಾವರಣದಲ್ಲಿ ಮಾತುಕತೆ ನಡೆಸುವ ಉದ್ದೇಶದಿಂದ ಮಾತ್ರ ತೆಗೆದುಕೊಳ್ಳಲಾಗಿದೆ. ಸರ್ಕಾರ ಈಗಾಗಲೇ ಭೇಟಿ ಸಿದ್ಧತೆಗಳನ್ನು ಆರಂಭಿಸಿತ್ತು ಎಂದು ಹೇಳಿದರು.
"ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಂಡಿದ್ದೇವೆ. ವಾಸ್ತವವಾಗಿ ತಮಿಳುನಾಡು ಮುಖ್ಯಮಂತ್ರಿಯವರ ಭೇಟಿಗಾಗಿ ಎಲ್ಲಾ ಸಿದ್ಧತೆಗಳನ್ನೂ ಮಾಡಿದ್ದೆವು. ಕಾನೂನು ತಜ್ಞರು ಹಾಗೂ ಅಧಿಕಾರಿಗಳು ಎಲ್ಲಾ ವಿಷಯಗಳನ್ನು ಗೌರವಯುತವಾಗಿ ಚರ್ಚಿಸಲು ಸಿದ್ಧರಾಗಿದ್ದರು" ಎಂದು ಡಿಕೆಶಿವಕುಮಾರ್ ಹೇಳಿದರು.
ಮೇಕೆದಾಟು: ತಮಿಳುನಾಡಿಗೇ ಹೆಚ್ಚು ಲಾಭ, ನೀರು ಬಳಸುವ ಅಧಿಕಾರ ಕರ್ನಾಟಕಕ್ಕೆ ಇಲ್ಲ
ಮೇಕೆದಾಟು ಸಮತೋಲನ ಜಲಾಶಯ ಯೋಜನೆ ಕುರಿತು ಮಾತನಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಈ ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೇ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಪ್ರತಿಪಾದಿಸಿದರು.
"ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚು ಲಾಭವಾಗುತ್ತದೆ. ಕರ್ನಾಟಕಕ್ಕೆ ನೇರವಾಗಿ ಸಿಗುವ ಲಾಭ ಎಂದರೆ ಸುಮಾರು 400 ಮೆಗಾವಾಟ್ ಜಲವಿದ್ಯುತ್ ಉತ್ಪಾದನೆ ಮಾತ್ರ. 66 ಟಿಎಂಸಿ ಸಾಮರ್ಥ್ಯದ ಈ ಜಲಾಶಯ ಕೇವಲ ಸಮತೋಲನ (Balancing Reservoir) ಜಲಾಶಯವಾಗಿದ್ದು, ಇದರ ನೀರನ್ನು ಹೊಸ ನೀರಾವರಿ ಯೋಜನೆಗಳಿಗೆ ಬಳಸುವ ಅಧಿಕಾರ ಕರ್ನಾಟಕಕ್ಕಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
"66 ಟಿಎಂಸಿ ನೀರನ್ನು ಯಾವುದೇ ಹೊಸ ನೀರಾವರಿ ಯೋಜನೆಗೆ ಬಳಸಲು ಸಾಧ್ಯವಿಲ್ಲ. ಇದು ಕೇವಲ ಸಮತೋಲನ ಜಲಾಶಯ. ನೀರಾವರಿಗಾಗಿ ಬಳಸುವ ಅಧಿಕಾರ ನಮಗಿಲ್ಲ" ಎಂದರು.
ಸುಪ್ರೀಂ ಕೋರ್ಟ್ ಆದೇಶದ ಉಲ್ಲೇಖ
ಸುಪ್ರೀಂ ಕೋರ್ಟ್ ಅಂತಿಮ ತೀರ್ಪಿನಂತೆ ಕರ್ನಾಟಕವು ತಮಿಳುನಾಡಿಗೆ 177.25 ಟಿಎಂಸಿ ನೀರು ಬಿಡಬೇಕು ಎಂದು ನಿರ್ದೇಶನ ನೀಡಿರುವುದರ ಜೊತೆಗೆ, ತನ್ನ ಭೂಪ್ರದೇಶದಲ್ಲಿ ಸಮತೋಲನ ಜಲಾಶಯ ನಿರ್ಮಿಸುವ ಹಕ್ಕನ್ನೂ ಕರ್ನಾಟಕಕ್ಕೆ ಮಾನ್ಯತೆ ನೀಡಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. "ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪು 177.25 ಟಿಎಂಸಿ ನೀರು ಬಿಡುವ ಜವಾಬ್ದಾರಿಯನ್ನು ಪುನರುಚ್ಚರಿಸಿದೆ. ಅದೇ ವೇಳೆ, ತನ್ನ ವ್ಯಾಪ್ತಿಯಲ್ಲಿ ಸಮತೋಲನ ಜಲಾಶಯ ನಿರ್ಮಿಸುವ ಹಕ್ಕನ್ನೂ ಕರ್ನಾಟಕಕ್ಕೆ ಒಪ್ಪಿದೆ" ಎಂದರು.
'ಮೇಕೆದಾಟು ಪ್ರಸ್ತಾವನೆ ತಿರಸ್ಕೃತವಾಗಿಲ್ಲ'
ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕದ ಪ್ರಸ್ತಾವನೆ ತಿರಸ್ಕೃತವಾಗಿದೆ ಎಂಬ ವರದಿಗಳನ್ನು ತಳ್ಳಿಹಾಕಿದ ಅವರು, ಅದು ಸತ್ಯವಲ್ಲ ಎಂದು ಸ್ಪಷ್ಟಪಡಿಸಿದರು. "ನಮ್ಮ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ ಎಂದು ಕೆಲವರು ಹೇಳಿದ್ದಾರೆ. ಅದು ತಪ್ಪು. ತಿರಸ್ಕಾರವಾಗಿಲ್ಲ. ಕೆಲವು ಸ್ಪಷ್ಟೀಕರಣಗಳನ್ನು ಮಾತ್ರ ಕೇಳಲಾಗಿದೆ. ಅವುಗಳನ್ನು ಅಧ್ಯಯನ ಮಾಡಿ ಅಗತ್ಯ ವಿವರಣೆ ಸಲ್ಲಿಸಿ, ಕಾನೂನು ವ್ಯಾಪ್ತಿಯಲ್ಲೇ ಯೋಜನೆಯನ್ನು ಮುಂದುವರಿಸುತ್ತೇವೆ" ಎಂದು ಹೇಳಿದರು.
'ಎಲ್ಲ ಅಂಕಿ-ಅಂಶ ದಾಖಲೆಗಳಲ್ಲಿವೆ; ಮೇಲ್ಮನವಿ ಸಲ್ಲಿಸಿದ್ದೇವೆ'
ಕಾವೇರಿ ನೀರು ಬಿಡುಗಡೆ ಆದೇಶದ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ರಾಜ್ಯದ ಎಲ್ಲಾ ಅಂಕಿ-ಅಂಶಗಳು ಮತ್ತು ವಾಸ್ತವಾಂಶಗಳನ್ನು ಈಗಾಗಲೇ ದಾಖಲೆಗಳ ರೂಪದಲ್ಲಿ ಸಂಬಂಧಿತ ಪ್ರಾಧಿಕಾರಗಳ ಮುಂದೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. "ಎಲ್ಲ ಅಂಕಿ-ಅಂಶಗಳು ದಾಖಲೆಗಳಲ್ಲಿವೆ. ನಮ್ಮ ಕಾನೂನು ಹೋರಾಟ ಮುಂದುವರಿಯುತ್ತದೆ. ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದೇವೆ" ಎಂದು ಅವರು ಹೇಳಿದರು.
ಭಾನುವಾರ ಸರ್ವಪಕ್ಷ ಸಭೆ
ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳು ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಹೊಂದಿವೆ ಎಂದು ಹೇಳಿದ ಮುಖ್ಯಮಂತ್ರಿ, ಕಾನೂನು ಹೋರಾಟದ ಜೊತೆಗೆ ಸಂವಾದದ ಮೂಲಕವೂ ಸಮಸ್ಯೆ ಬಗೆಹರಿಸಲು ಸರ್ಕಾರ ಪ್ರಯತ್ನ ಮುಂದುವರಿಸಲಿದೆ ಎಂದರು.
"ತಮಿಳುನಾಡಿನ ಹಿತವನ್ನೂ ನಾವು ಬಯಸುತ್ತೇವೆ. ಆದರೆ ಈ ವರ್ಷ ಕರ್ನಾಟಕ ಎದುರಿಸುತ್ತಿರುವ ಸಂಕಷ್ಟವನ್ನು ಅವರಿಗೆ ಮನವರಿಕೆ ಮಾಡಿಕೊಡುವುದು ನಮ್ಮ ಕರ್ತವ್ಯ" ಎಂದು ಹೇಳಿದರು. ಭಾನುವಾರ ನಡೆಯಲಿರುವ ಸರ್ವಪಕ್ಷ ಸಭೆಯ ಬಳಿಕ ಪರಿಸ್ಥಿತಿ ಶಾಂತವಾದ ತಕ್ಷಣ ತಮಿಳುನಾಡು ಮುಖ್ಯಮಂತ್ರಿಯವರನ್ನು ಮತ್ತೊಮ್ಮೆ ಮಾತುಕತೆಗೆ ಆಹ್ವಾನಿಸುವುದಾಗಿ ಡಿ.ಕೆ. ಶಿವಕುಮಾರ್ ತಿಳಿಸಿದರು.