

ಬೆಂಗಳೂರು: ವಿಐಪಿ ಸಂಚಾರಕ್ಕಾಗಿ ಹೇರಲಾಗಿದ್ದ ಟ್ರಾಫಿಕ್ ನಿರ್ಬಂಧದಿಂದ ತನ್ನ ಗರ್ಭಿಣಿ ಪತ್ನಿ ವಾಹನದಲ್ಲೇ ಸಿಲುಕಿಕೊಂಡಿದ್ದಾಳೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ನಡೆಸಿದ್ದ ಪ್ರತಿಭಟನೆ ವಿಚಾರವಾಗಿ ತನಿಖೆಗೆ ಆದೇಶಿಸಲಾಗಿದೆ.
ಬೆಂಗಳೂರಿನ ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿ ಭಾನುವಾರ ನಡೆದ ಈ ಘಟನೆ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಗರ್ಭಿಣಿ ಮಹಿಳೆಯ ಪತಿ ಧರಣಿ ನಡೆಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಈ ಘಟನೆ ಕುರಿತು ಸೋಮವಾರ ತನಿಖೆಗೆ ಆದೇಶಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ ನಿನ್ನೆ ರಾಜ್ಯಪಾಲರ ಸಂಚಾರದ ಹಿನ್ನೆಲೆಯಲ್ಲಿ ಸುಮಾರು 30 ನಿಮಿಷಗಳ ಕಾಲ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ವ್ಯಾಪಕ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಡರ್‌ಪಾಸ್ ಕಾಮಗಾರಿಯಿಂದಾಗಿ ಮೊದಲೇ ಕಿರಿದಾಗಿದ್ದ ರಸ್ತೆಯಲ್ಲಿ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಏಕಾಏಕಿ ರಸ್ತೆ ನಿರ್ಬಂಧಿಸಿದ್ದರಿಂದ ಸಂಚಾರ ವ್ಯವಸ್ಥೆ ಸಂಪೂರ್ಣ ಸ್ಥಗಿತವಾಗಿತ್ತು. ಈ ಸಂಚಾರ ದಟ್ಟಣೆಯ ನಡುವೆ ತನ್ನ ಗರ್ಭಿಣಿ ಪತ್ನಿಯನ್ನು ತುರ್ತಾಗಿ ಕರೆದೊಯ್ಯುತ್ತಿದ್ದ ವ್ಯಕ್ತಿಯೊಬ್ಬರು ಸಿಲುಕಿಕೊಂಡಿದ್ದು, ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ತಲುಪಿಸಲಾಗದೆ ಆ ವ್ಯಕ್ತಿ ನಡುರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದರು.
ಕಾರಲ್ಲಿ ಗರ್ಭಿಣಿ ಇದ್ದಾಳೆ
ಈ ಪರಿಸ್ಥಿತಿಯಿಂದ ತೀವ್ರ ಆತಂಕಗೊಂಡ ಮಹಿಳೆಯ ಪತಿ, ಅಧಿಕಾರಿಗಳ ಕ್ರಮದ ವಿರುದ್ಧ ರಸ್ತೆಯಲ್ಲೇ ಕುಳಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಮ್ಮ ಪತ್ನಿಯ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ವಿಐಪಿ ಸಂಚಾರಕ್ಕಾಗಿ ಸಾಮಾನ್ಯ ನಾಗರಿಕರ ತುರ್ತು ಅಗತ್ಯಗಳನ್ನು ಕಡೆಗಣಿಸುವುದು ಸರಿಯಲ್ಲ. ಕಾರಲ್ಲಿ ಗರ್ಭಿಣಿ ಇದ್ದಾಳೆ. ಸರ್ಕಾರಕ್ಕೆ ನಾವೇನೂ ಅಲ್ವಾ.. ?
ನಮ್ಮ ಪ್ರಾಣಕ್ಕಿಂತ ಝೀರೋ ಟ್ರಾಫಿಕ್ ಮುಖ್ಯಾನಾ? ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಸಾರ್ವಜನಿಕರ ತುರ್ತು ಅಗತ್ಯಗಳಿಗಿಂತ ವಿಐಪಿ ಸಂಚಾರಕ್ಕೆ ಏಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಆತ ಪ್ರಶ್ನಿಸಿದ್ದಾನೆ.
ಪ್ರತಿಭಟನೆಯ ವೇಳೆ ಅವರು ರಸ್ತೆ ಮಧ್ಯದಲ್ಲೇ ನಿಂತು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದ್ದು, ಸ್ಥಳದಲ್ಲಿದ್ದ ಕೆಲವರು ಅವರ ಆಕ್ರೋಶಕ್ಕೆ ಬೆಂಬಲ ಸೂಚಿಸಿದರು. ಘಟನೆಯ ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಐಪಿ ಸಂಚಾರದ ಸಂದರ್ಭದಲ್ಲಿ ಸಾಮಾನ್ಯ ಜನರು ಎದುರಿಸುವ ತೊಂದರೆಗಳ ಬಗ್ಗೆ ಮತ್ತೆ ಚರ್ಚೆಗೆ ಕಾರಣವಾಗಿದೆ.
ವಿಡಿಯೋ ವೈರಲ್
ವಿಡಿಯೊ ಹಂಚಿಕೊಂಡ ಬಳಕೆದಾರರು ತಮ್ಮ ಪೋಸ್ಟ್‌ನಲ್ಲಿ, "ಅಂಡರ್‌ಪಾಸ್ ಕಾಮಗಾರಿಯಿಂದ ಓಲ್ಡ್ ಏರ್‌ಪೋರ್ಟ್ ರಸ್ತೆ ಈಗಾಗಲೇ ತೀವ್ರ ದಟ್ಟಣೆಯಿಂದ ಬಳಲುತ್ತಿದೆ. ಇಂದು ರಾಜ್ಯಪಾಲರ ವಾಹನ ದಳದ ಸಂಚಾರಕ್ಕಾಗಿ ಸುಮಾರು 30 ನಿಮಿಷಗಳ ಕಾಲ ಸಂಪೂರ್ಣ ಟ್ರಾಫಿಕ್ ಸ್ಥಗಿತಗೊಳಿಸಲಾಯಿತು. ಗರ್ಭಿಣಿ ಪತ್ನಿಯನ್ನು ಕರೆದೊಯ್ಯುತ್ತಿದ್ದ ವ್ಯಕ್ತಿಯೊಬ್ಬರು ಈ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದರು. ಸಾರ್ವಜನಿಕರ ಅನುಕೂಲಕ್ಕೂ ವಿಐಪಿಗಳ ಅನುಕೂಲದಷ್ಟೇ ಮಹತ್ವ ಯಾವಾಗ ಸಿಗಲಿದೆ?" ಎಂದು ಪ್ರಶ್ನಿಸಿದ್ದಾರೆ.
ಪ್ರತಿಕ್ರಿಯಿಸಿದ ಪೊಲೀಸರು, ತನಿಖೆಗೆ ಆದೇಶ
ಈ ಕುರಿತು ಪ್ರತಿಕ್ರಿಯಿಸಿದ ಹಿರಿಯ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು, ಪ್ರಕರಣದ ಬಗ್ಗೆ ಈಗಾಗಲೇ ತನಿಖೆ ಆರಂಭಿಸಲಾಗಿದ್ದು, ಘಟನೆಯ ನೈಜ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ತನಿಖೆಯ ವರದಿಯ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಪೋಸ್ಟ್ ಅನ್ನು ಹಂಚಿಕೊಂಡ ಐಟಿ ಕ್ಷೇತ್ರದ ಹಿರಿಯ ತಜ್ಞ ಟಿವಿ ಮೋಹನ್ ದಾಸ್ ಪೈ (T V Mohandas Pai) ಕೂಡ ವಿಐಪಿ ಸಂಸ್ಕೃತಿಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಅವರು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿ, ವಿಐಪಿ ಸಂಚಾರಕ್ಕಾಗಿ ರಸ್ತೆ ಸಂಚಾರ ಸ್ಥಗಿತಗೊಳಿಸುವ ಕ್ರಮವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ಪೊಲೀಸರು ಅಗತ್ಯಕ್ಕಿಂತ ಹೆಚ್ಚು ಸಮಯ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸುತ್ತಾರೆ ಎಂದು ಅವರು ಆರೋಪಿಸಿದ್ದಾರೆ.
"ನಗರದಲ್ಲಿ ಇಂತಹ ವಿಐಪಿ ಸಂಸ್ಕೃತಿಗೆ ಅಂತ್ಯ ಹಾಡಬೇಕು. ಪೊಲೀಸರು ನಾಗರಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ ಹಾಗೂ ಅವರನ್ನು ತಳ್ಳಾಡಿಸುತ್ತಾರೆ. ನಾಗರಿಕರನ್ನು ಗೌರವದಿಂದ ನಡೆಸಿಕೊಳ್ಳಬೇಕು. ನಾವು ಯಾರ ಅಧೀನದಲ್ಲಿರುವ ಪ್ರಜೆಗಳಲ್ಲ.
ಕೆಲವು ವರ್ಷಗಳ ಹಿಂದೆ ರಾಜಭವನದ ಎದುರು ಒಬ್ಬ ಎಸ್‌ಪಿ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಈ ರೀತಿಯ ದುರ್ವರ್ತನೆಯ ಸಂಸ್ಕೃತಿ ಬದಲಾಗಬೇಕು," ಎಂದು ಅವರು 'ಎಕ್ಸ್'ನಲ್ಲಿ ಬರೆದುಕೊಂಡಿದ್ದಾರೆ.
ಅದೇ ಪೋಸ್ಟ್‌ನಲ್ಲಿ ಅವರು ಪೊಲೀಸ್ ವರಿಷ್ಠಾಧಿಕಾರಿಗಳಾಗ ಸೀಮಂತ್ ಕುಮಾರ್ ಸಿಂಗ್, ಎಂಎ ಸಲೀಂ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಟ್ಯಾಗ್ ಮಾಡಿದ್ದಾರೆ.
Advertisement