ವಾಣಿಜ್ಯ LPG ದರ ಏರಿಕೆ: ಸದ್ಯಕ್ಕೆ ದರ ಏರಿಕೆ ಇಲ್ಲ, ಗ್ರಾಹಕರಿಗೆ ರಿಲೀಫ್ ಕೊಟ್ಟ ಹೋಟೆಲ್ ಉದ್ಯಮ..!

ಸಾಮಾನ್ಯವಾಗಿ ತಿಂಗಳ ಆರಂಭದಲ್ಲಿ ರೂ.40ರ ಆಸುಪಾಸಿನಲ್ಲಿ ದರ ಬದಲಾಗುತ್ತದೆ. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ಒಟ್ಟು ರೂ.900ಕ್ಕೂ ಹೆಚ್ಚು ಏರಿಕೆಯಾಗಿರುವುದರಿಂದ ಹೋಟೆಲ್ ಉದ್ಯಮದ ನಿರ್ವಹಣಾ ವೆಚ್ಚಗಳು ಗಣನೀಯವಾಗಿ ಹೆಚ್ಚಿವೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಜೂನ್ 1ರಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ರೂ.46 ಏರಿಕೆಯಾಗಿರುವುದು ಬೆಂಗಳೂರಿನ ಹೋಟೆಲ್, ರೆಸ್ಟೋರೆಂಟ್ ಹಾಗೂ ಕ್ಯಾಟರಿಂಗ್ ಉದ್ಯಮಕ್ಕೆ ಮತ್ತಷ್ಟು ಆರ್ಥಿಕ ಹೊರೆ ತಂದಿದೆ. ಆದರೂ ಸದ್ಯಕ್ಕೆ ಆಹಾರ ಪದಾರ್ಥಗಳ ದರ ಹೆಚ್ಚಿಸುವ ಉದ್ದೇಶ ಇಲ್ಲ ಎಂದು ಹೋಟೆಲ್ ಉದ್ಯಮದ ಪ್ರತಿನಿಧಿಗಳು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ಹೋಟೆಲ್ಸ್ ಅಸೋಸಿಯೇಷನ್ ಕಾರ್ಯದರ್ಶಿ ವೀರೇಂದ್ರ ಕಾಮತ್ ಅವರು ಮಾತನಾಡಿ, ಪ್ರತಿ ತಿಂಗಳ ಆರಂಭದಲ್ಲಿ ವಾಣಿಜ್ಯ ಎಲ್‌ಪಿಜಿ ದರದಲ್ಲಿ ಏರಿಳಿತ ಸಾಮಾನ್ಯ. ಆದರೆ, ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ದರ ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ತಿಂಗಳ ಆರಂಭದಲ್ಲಿ ರೂ.40ರ ಆಸುಪಾಸಿನಲ್ಲಿ ದರ ಬದಲಾಗುತ್ತದೆ. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ಒಟ್ಟು ರೂ.900ಕ್ಕೂ ಹೆಚ್ಚು ಏರಿಕೆಯಾಗಿರುವುದರಿಂದ ಹೋಟೆಲ್ ಉದ್ಯಮದ ನಿರ್ವಹಣಾ ವೆಚ್ಚಗಳು ಗಣನೀಯವಾಗಿ ಹೆಚ್ಚಿವೆ ಎಂದು ತಿಳಿಸಿದ್ದಾರೆ.

ಬೆಂಗಳೂರು ಹೋಟೆಲ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಪಿ.ಸಿ. ರಾವ್ ಮಾತನಾಡಿ, ಹೆಚ್ಚುವರಿ ವೆಚ್ಚವನ್ನು ಸದ್ಯಕ್ಕೆ ಹೋಟೆಲ್‌ಗಳೇ ಭರಿಸುತ್ತಿವೆ. ಗ್ರಾಹಕರ ಮೇಲೆ ಹೊರೆ ಹಾಕುವ ಉದ್ದೇಶ ಇಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಎಲ್‌ಪಿಜಿ ದರ ರೂ.900ಕ್ಕೂ ಹೆಚ್ಚು ಏರಿದ್ದಾಗ ಮಾತ್ರ ಮೆನು ದರ ಪರಿಷ್ಕರಣೆ ಮಾಡಲಾಗಿತ್ತು ಎಂದು ಸ್ಮರಿಸಿದ್ದಾರೆ.

File photo
ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ದರ ಏಷ್ಟಿದೆ?

ಮದ್ಯಪ್ರಾಚ್ಯದಲ್ಲಿ ಉದ್ಭವಿಸಿದ ಬಿಕ್ಕಟ್ಟಿನ ನಂತರ ವಾಣಿಜ್ಯ ಎಲ್‌ಪಿಜಿ ದರಗಳು ನಿರಂತರ ಏರಿಕೆಯಾಗುತ್ತಿವೆ. ಮಾರ್ಚ್ ತಿಂಗಳಲ್ಲಿ ಸುಮಾರು ರೂ.1,845 ಇದ್ದ ವಾಣಿಜ್ಯ ಸಿಲಿಂಡರ್ ಬೆಲೆ ಇದೀಗ ರೂ.3,199ಕ್ಕೆ ಏರಿಕೆಯಾಗಿದ್ದು, ಅಲ್ಪಾವಧಿಯಲ್ಲಿ ರೂ.1,354ರಷ್ಟು ಹೆಚ್ಚಳ ಕಂಡಿದೆ.

ಇಂಧನ ದರಗಳ ಏರಿಕೆಯಿಂದ ಹೋಟೆಲ್ ಮತ್ತು ಆಹಾರ ಸೇವಾ ಕ್ಷೇತ್ರದ ಒಟ್ಟಾರೆ ಕಾರ್ಯಾಚರಣಾ ವೆಚ್ಚವೂ ಹೆಚ್ಚಾಗಿದೆ. ಕಚ್ಚಾ ವಸ್ತುಗಳು, ವಿದ್ಯುತ್ ಮತ್ತು ಇತರೆ ಸೇವಾ ವೆಚ್ಚಗಳ ಹೆಚ್ಚಳದ ನಡುವೆಯೇ ಎಲ್‌ಪಿಜಿ ದರ ಏರಿಕೆಯೂ ಆಹಾರ ಪದಾರ್ಥಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೋಟೆಲ್ ಮಾಲೀಕರು ಅಭಿಪ್ರಾಯಪಟ್ಟಿದ್ದಾರೆ.

ಭವಿಷ್ಯದಲ್ಲಿ ಇಂಧನ ದರಗಳ ಅಸ್ಥಿರತೆಯಿಂದಾಗುವ ಹೊಡೆತವನ್ನು ಕಡಿಮೆ ಮಾಡಲು ಅನೇಕ ಹೋಟೆಲ್‌ಗಳು ಪರ್ಯಾಯ ಇಂಧನ ಮೂಲಗಳತ್ತ ಗಮನ ಹರಿಸುತ್ತಿವೆ.

ವಿದ್ಯುತ್ ಆಧಾರಿತ ಅಡುಗೆ ವ್ಯವಸ್ಥೆಗಳು ಹಾಗೂ ಜೈವಿಕ ಇಂಧನ (ಬಯೋಫ್ಯುಯೆಲ್) ಬಳಕೆಯಂತಹ ಆಯ್ಕೆಗಳನ್ನು ಪರಿಶೀಲಿಸುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com