

ಬೆಂಗಳೂರು: ನಗರದ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ ರಾಜ್ಯಪಾಲರ ಸಂಚಾರದ ಉಂಟಾಗಿದ್ದ ಟ್ರಾಫಿಕ್ ಜ್ಯಾಮ್ ಮತ್ತು ವ್ಯಕ್ತಿಯೊಬ್ಬರ ಪ್ರತಿಭಟನೆ ವಿಚಾರವಾಗಿ ಬೆಂಗಳೂರು ಪೊಲೀಸರು ಮಹತ್ವದ ಟ್ವಿಸ್ಟ್ ನೀಡಿದ್ದಾರೆ.
ಹೌದು.. ನಗರದ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ ರಾಜ್ಯಪಾಲರ ಸಂಚಾರದ ಹಿನ್ನೆಲೆಯಲ್ಲಿ ಸುಮಾರು 30 ನಿಮಿಷಗಳ ಕಾಲ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ವ್ಯಾಪಕ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದ್ದು, ಸಾರ್ವಜನಿಕರು ತೀವ್ರ ತೊಂದರೆಗೀಡಾಗಿದ್ದರು. ಇದೇ ಸಂದರ್ಭದಲ್ಲಿ ವ್ಯಕ್ತಿಯೋರ್ವ ಪ್ರತಿಭಟನೆ ನಡೆಸಿದ್ದ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿ ನಗರದ ಖ್ಯಾತನಾಮರು ಈ ಬಗ್ಗೆ ಟ್ವೀಟ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದ ಐಟಿ ಕ್ಷೇತ್ರದ ಹಿರಿಯ ತಜ್ಞ ಟಿವಿ ಮೋಹನ್ ದಾಸ್ ಪೈ (T V Mohandas Pai) ಕೂಡ ವಿಐಪಿ ಸಂಸ್ಕೃತಿಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಅವರು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿ, ವಿಐಪಿ ಸಂಚಾರಕ್ಕಾಗಿ ರಸ್ತೆ ಸಂಚಾರ ಸ್ಥಗಿತಗೊಳಿಸುವ ಕ್ರಮವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದರು.
ಪೊಲೀಸರು ಹೇಳಿದ್ದೇನು?
ಟಿವಿ ಮೋಹನ್ ದಾಸ್ ಪೈ ಮಾಡಿದ್ದ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸರು, 'ವೈರಲ್ ಆಗಿರುವ ಘಟನೆಯ ಕುರಿತು ತನಿಖೆ ನಡೆಸಲಾಗಿದ್ದು, ಸಂಬಂಧಿತ ವ್ಯಕ್ತಿ ಒಬ್ಬರೇ ಪ್ರಯಾಣಿಸುತ್ತಿದ್ದರೆಂದು ತಿಳಿದುಬಂದಿದೆ. ರಸ್ತೆ ಸಂಚಾರದ ವೇಳೆ ಯಾವುದೇ ಪರಿಸ್ಥಿತಿಯಲ್ಲಿಯೂ ಆಂಬುಲೆನ್ಸ್‌ಗಳು ಹಾಗೂ ವೈದ್ಯಕೀಯ ತುರ್ತು ಸೇವೆಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂಬುದನ್ನು ನಾವು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇವೆ ಎಂದು ಹೇಳಿದ್ದಾರೆ.
ಅಂತೆಯೇ ಯಾವುದೇ ವಿಷಯವನ್ನು ಸಂಚಲನಾತ್ಮಕವಾಗಿ ಬಿಂಬಿಸುವ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮುನ್ನ ಸಾರ್ವಜನಿಕರು ವಾಸ್ತವಾಂಶಗಳನ್ನು ಪರಿಶೀಲಿಸುವಂತೆ ವಿನಂತಿಸಿಕೊಳ್ಳುತ್ತೇವೆ. ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕರ ಎಚ್ಚರಿಸಿದ್ದಾರೆ.
ಆಗಿದ್ದೇನು?
ನಗರದ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ ರಾಜ್ಯಪಾಲರ ಸಂಚಾರದ ಹಿನ್ನೆಲೆಯಲ್ಲಿ ಸುಮಾರು 30 ನಿಮಿಷಗಳ ಕಾಲ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ವ್ಯಾಪಕ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಡರ್‌ಪಾಸ್ ಕಾಮಗಾರಿಯಿಂದಾಗಿ ಮೊದಲೇ ಕಿರಿದಾಗಿದ್ದ ರಸ್ತೆಯಲ್ಲಿ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಏಕಾಏಕಿ ರಸ್ತೆ ನಿರ್ಬಂಧಿಸಿದ್ದರಿಂದ ಸಂಚಾರ ವ್ಯವಸ್ಥೆ ಸಂಪೂರ್ಣ ಸ್ಥಗಿತವಾಗಿತ್ತು. ಈ ಸಂಚಾರ ದಟ್ಟಣೆಯ ನಡುವೆ ಓರ್ವ ವ್ಯಕ್ತಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ತನ್ನ ಗರ್ಭಿಣಿ ಪತ್ನಿಯನ್ನು ತುರ್ತಾಗಿ ಕರೆದೊಯ್ಯಬೇಕು ಎಂದು ಹೇಳಿಕೊಂಡಿದ್ದರು. ಈ ಘಟನೆಗೆ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದರು.
ಈ ಘಟನೆ ವ್ಯಾಪಕ ಸುದ್ದಿಗೆ ಗ್ರಾಸವಾಗಿ, ಪೊಲೀಸ್ ಇಲಾಖೆ ಕೂಡ ತನಿಖೆಗೆ ಆದೇಶಿಸಿತ್ತು. ಆದರೆ ತನಿಖೆ ವೇಳೆ ಪ್ರತಿಭಟನೆ ನಡೆಸಿದ್ದ ವ್ಯಕ್ತಿ ಕಾರಿನಲ್ಲಿ ಒಬ್ಬನೇ ಬಂದಿದ್ದ. ಕಾರಿನಲ್ಲಿ ಬೇರಾರೂ ಇರಲಿಲ್ಲ ಎಂದು ಮನಗಂಡಿದ್ದಾರೆ.
ಗರ್ಭಿಣಿ ಮಹಿಳೆಯ ಕರೆತರಲು ಹೋಗುತ್ತಿದ್ದೆ: ವ್ಯಕ್ತಿ ಸ್ಪಷ್ಟನೆ
ಇನ್ನು ತನ್ನ ಪ್ರತಿಭಟನೆ ವಿಚಾರ ದೇಶಾದ್ಯಂತ ವ್ಯಾಪಕ ವೈರಲ್ ಆಗುತ್ತಲೇ ಈ ಕುರಿತು ಸ್ಪಷ್ಟನೆ ನೀಡಿರುವ ಪ್ರತಿಭಟನೆ ನಡೆಸಿದ ವ್ಯಕ್ತಿ ಕಾರಿನಲ್ಲಿ ಗರ್ಭಿಣಿ ಪತ್ನಿ ಇರಲಿಲ್ಲ.. ಆದರೆ ಆಕೆಯನ್ನು ಕರೆತರಲು ಹೋಗುತ್ತಿದ್ದೆ ಎಂದು ಹೇಳಿದ್ದಾರೆ.
Advertisement