

ಮೈಸೂರು: 30 ವರ್ಷದ ವಿವಾಹಿತ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವೈವಾಹಿಕ ಕಲಹದಿಂದಾಗಿ ಗೃಹಿಣಿಯನ್ನು ಕೊಲೆ ಮಾಡಲಾಗಿದೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ. ಮೈಸೂರಿನ ಸರಸ್ವತಿಪುರಂನ ಜವರೇಗೌಡ ಪಾರ್ಕ್ ಬಳಿಯ ಮನೆಯೊಂದರಲ್ಲಿ ಘಟನೆ ನಡೆದಿದ್ದು ಸಂಧ್ಯಾಳ ಮೃತದೇಹ ನೇಣುಬಿಗಿ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸಂಧ್ಯಾ ಅಕ್ಷಯ್ ಮದುವೆಯಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮದುವೆಯಾದ ಕೆಲವು ತಿಂಗಳೊಳಗೆ ದಂಪತಿ ಆಗಾಗ್ಗೆ ಜಗಳವಾಡಲು ಪ್ರಾರಂಭಿಸಿದರು. ತಮ್ಮ ಪುತ್ರಿ ಸಂಧ್ಯಾ ಪತಿ ಮತ್ತು ಅತ್ತೆ-ಮಾವರಿಂದ ಕಿರುಕುಳ ಮತ್ತು ಕೌಟುಂಬಿಕ ಹಿಂಸೆ ಅನುಭವಿಸುತ್ತಿದ್ದಳು. ಇದೀಗ ಆಕೆಯನ್ನು ಕೊಲೆ ಮಾಡಿ, ಫ್ಯಾನ್‌ಗೆ ಶವವನ್ನು ನೇಣು ಹಾಕಿ ಇದು ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾರೆ ಸಂಧ್ಯಾಳ ತಾಯಿ ಗೀತಾ ನಿಂಗರಾಜು ಆರೋಪಿಸಿದ್ದಾರೆ. ಇನ್ನು ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನಾವು ಸಾಕಷ್ಟು ವರದಕ್ಷಿಣೆ ನೀಡಿದ್ದೇವು, ಅರ್ಧ ಕೆಜಿ ಚಿನ್ನ ಕೊಟ್ಟು ಅದ್ಧೂರಿ ಮದುವೆ ಮಾಡಿಕೊಟ್ಟಿದ್ದೇವು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಅವರ ನಡುವೆ ಜಗಳಗಳು ಪ್ರಾರಂಭವಾಗಿತ್ತು. ನನ್ನ ಮಗಳಿಗೆ ಆಕೆಯ ಗಂಡ, ಅತ್ತೆ ಮತ್ತು ಮಾವ ಕಿರುಕುಳ ನೀಡುತ್ತಿದ್ದರು. ಹೆತ್ತವರ ಮನೆಗೆ ಹೋದರೆ ಅದು ಅವಮಾನ ಎಂದು ಭಾವಿಸಿ ಎಲ್ಲವನ್ನೂ ಸಹಿಸಿಕೊಂಡು ಅಲ್ಲೇ ವಾಸಿಸುತ್ತಿದ್ದಳು ಎಂದು ಗೀತಾ ಹೇಳಿದ್ದಾರೆ. ಸರಸ್ವತಿಪುರಂ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಸಾವು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂದು ನಿರ್ಧರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Advertisement