

ಬೆಂಗಳೂರು: ರಾಜ್ಯಾದ್ಯಂತ ಬಾಕಿ ಉಳಿದಿರುವ ಇ-ಚಲನ್ ಸಂಚಾರ ದಂಡದ ಮೊತ್ತ ರೂ.2,800 ಕೋಟಿಗೂ ಅಧಿಕವಾಗಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಘೋಷಿಸಿರುವ ಶೇ50 ದಂಡ ರಿಯಾಯಿತಿ ಯೋಜನೆಯನ್ನು ಯಶಸ್ವಿಗೊಳಿಸಲು ಬೆಂಗಳೂರು ಸಂಚಾರ ಪೊಲೀಸರು (BTP) ವಿಶೇಷ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಜೂನ್ 21ರಿಂದ ಜುಲೈ 10ರವರೆಗೆ ಬಾಕಿ ಇರುವ ಸಂಚಾರ ದಂಡಗಳನ್ನು ಕೇವಲ ಶೇ.50ರಷ್ಟು ಮೊತ್ತ ಪಾವತಿಸಿ ಇತ್ಯರ್ಥಪಡಿಸಿಕೊಳ್ಳುವ ಅವಕಾಶವನ್ನು ರಾಜ್ಯ ಸರ್ಕಾರ ನೀಡಿದೆ.
ಈ ಹಿನ್ನೆಲೆಯಲ್ಲಿ ಹೆಚ್ಚಿನ ವಾಹನ ಸಂಚಾರವಿರುವ ಪ್ರಮುಖ ಪ್ರದೇಶಗಳಲ್ಲಿ ವಿಶೇಷ ಕೌಂಟರ್‌ಗಳನ್ನು ತೆರೆಯಲು ಬೆಂಗಳೂರು ಸಂಚಾರ ಪೊಲೀಸರು ಯೋಜನೆ ರೂಪಿಸಿದ್ದಾರೆ.
ಜೂನ್ 4ರಂದು ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ, 2025ರಲ್ಲಿ ಹಲವು ಬಾರಿ ಅಭಿಯಾನಗಳನ್ನು ನಡೆಸಿದರೂ ಇನ್ನೂ ಸಾವಿರಾರು ಪ್ರಕರಣಗಳು ಬಾಕಿ ಉಳಿದಿವೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಸುಮಾರು ರೂ.2,827 ಕೋಟಿ ದಂಡ ವಸೂಲಿ ಆಗಬೇಕಿದೆ.
ಈ ಯೋಜನೆಯಡಿ ವಾಹನ ಸವಾರರು ತಮ್ಮ ಬಾಕಿ ಉಳಿದಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಕೇವಲ ಅರ್ಧ ದಂಡ ಪಾವತಿಸುವ ಮೂಲಕ ಮುಕ್ತಾಯಗೊಳಿಸಬಹುದು. ಅಲ್ಲದೆ, 1991ರಿಂದ 2022ರ ನಡುವೆ ಸಾರಿಗೆ ಇಲಾಖೆ ದಾಖಲಿಸಿದ್ದರೂ ಇನ್ನೂ ದಂಡ ಪಾವತಿಯಾಗದ ಪ್ರಕರಣಗಳಿಗೂ ಈ ಸೌಲಭ್ಯ ಅನ್ವಯವಾಗಲಿದೆ.
ಬೆಂಗಳೂರು ಸಂಚಾರ ಪೊಲೀಸ್ ಅಧಿಕಾರಿಗಳು ಮಾತನಾಡಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಾಮಾಜಿಕ ಜಾಲತಾಣಗಳು ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ. ಹೆಚ್ಚಿನ ವಾಹನ ಸಂಚಾರವಿರುವ ಪ್ರದೇಶಗಳಲ್ಲಿ ವಿಶೇಷ ಕೌಂಟರ್‌ಗಳನ್ನು ಸ್ಥಾಪಿಸಿ ದಂಡ ಪಾವತಿಗೆ ಅನುಕೂಲ ಕಲ್ಪಿಸಲಾಗುತ್ತದೆ.
ರಿಯಾಯಿತಿ ಅವಧಿಯಲ್ಲಿ ನಗರದಲ್ಲಿ ವಾಹನ ತಪಾಸಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುತ್ತದೆ. ಸಂಚಾರ ನಿಯಮ ಉಲ್ಲಂಘನೆಗಾಗಿ ವಾಹನಗಳನ್ನು ತಪಾಸಣೆ ಮಾಡುವ ವೇಳೆ, ವಾಹನದ ಮೇಲೆ ಯಾವುದೇ ಬಾಕಿ ದಂಡವಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಬಾಕಿ ಇದ್ದರೆ ಸ್ಥಳದಲ್ಲೇ ದಂಡ ಪಾವತಿಸಲು ಸೂಚಿಸಲಾಗುತ್ತದೆ ಎಂದು ಹೇಳಿದ್ದಾರೆ.
ಮತ್ತೊಬ್ಬ ಹಿರಿಯ ಪೊಲೀಸ್ ಅಧಿಕಾರಿ ಮಾತನಾಡಿ, ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರ ಮಾಹಿತಿ ಸಂಗ್ರಹಿಸಿ ಅವರಿಗೆ ಮುಂಚಿತವಾಗಿ ಎಚ್ಚರಿಕೆ ನೀಡಲಾಗುತ್ತದೆ. ದಂಡ ಪಾವತಿಸದವರಿಗೆ ಕಾನೂನು ನೋಟಿಸ್‌ಗಳನ್ನು ಜಾರಿಗೊಳಿಸುವ ಕ್ರಮವನ್ನೂ ಇಲಾಖೆ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಈ ಶೇ.50ರಷ್ಟು ದಂಡ ರಿಯಾಯಿತಿ ಯೋಜನೆ ವಾಹನ ಸವಾರರಿಗೆ ಆರ್ಥಿಕ ನೆಮ್ಮದಿ ನೀಡುವುದರ ಜೊತೆಗೆ, ವರ್ಷಗಳಿಂದ ಬಾಕಿ ಉಳಿದಿರುವ ಸಾವಿರಾರು ಇ-ಚಲನ್ ಪ್ರಕರಣಗಳ ಇತ್ಯರ್ಥಕ್ಕೂ ನೆರವಾಗಲಿದೆ.
Advertisement