

ಬೆಂಗಳೂರು: ಬೇರೊಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಾಳೆ ಎಂಬ ಅನುಮಾನದಿಂದ ಸಿಕ್ಕಿಂನ 22 ವರ್ಷದ ಯುವತಿಯನ್ನು ಆಕೆಯ ಲವರ್ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಬೆಳ್ಳಂದೂರು ಪೊಲೀಸ್ ವ್ಯಾಪ್ತಿಯ ದೊಡ್ಡಕನ್ನೆಲ್ಲಿಯಲ್ಲಿ ಭಾನುವಾರ ನಡೆದಿದೆ.
ಸಲೂನ್ ವೊಂದರಲ್ಲಿ ರಿಸಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ಆತಿ ಹಂಗ್ಮಾ ಶುಭಾ (22) ಅವರನ್ನು ಕೊಂದ ಆರೋಪದ ಮೇಲೆ ಆಕೆಯ ಗೆಳೆಯ ಪುರ್ಬಾ ಲೆಪ್ಚಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮೂಲದವನಾಗಿದ್ದು, ಹೋಟೆಲ್‌ನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದ. ಇವರಿಬ್ಬರು ಪರಸ್ಪರ ಸಂಬಂಧ ಹೊಂದಿದ್ದರು ಮತ್ತು ಸಿಕ್ಕಿಂನಲ್ಲಿ ಸುಮಾರು ಒಂದು ವರ್ಷ ಒಟ್ಟಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ.
ಕೆಲಸ ಹುಡುಕಿಕೊಂಡು ಸುಮಾರು ಒಂದು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಇವರು ದೊಡ್ಡಕನ್ನೆಲ್ಲಿಯಲ್ಲಿ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಶುಭಾ ಮತ್ತೊಬ್ಬ ವ್ಯಕ್ತಿಯೊಂದಿಗೆ ಮಾತನಾಡಿದ ಕಾರಣದಿಂದ ಇತ್ತೀಚೆಗೆ ಇಬ್ಬರು ಸಾಕಷ್ಟು ಜಗಳವಾಡಿದ್ದರು.
ಭಾನುವಾರ ಬೆಳಿಗ್ಗೆ 5.30 ರ ಸುಮಾರಿಗೆ ಮತ್ತೆ ಜಗಳ ಆರಂಭವಾಗಿದ್ದು, ಲೆಪ್ಚಾ ಚಾಕುವಿನಿಂದ ಮಹಿಳೆಯ ಕತ್ತು ಸೀಳಿದ್ದಾನೆ. ಇದರಿಂದಾಗಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಭಾಳ ಕಿರುಚಾಟ ಕೇಳಿದ ನಂತರ ಮನೆ ಮಾಲೀಕರು ಪೊಲೀಸರಿಗೆ ಕೊಲೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಲೆಪ್ಚಾ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ಆರೋಪಿ ಫೋಟೋಗಳನ್ನು ಗಸ್ತು ತಂಡಗಳಿಗೆ ರವಾನಿಸಿದ್ದು, ಸಮೀಪದ ಚಿಕ್ಕಬೆಳ್ಳಂದೂರಿನಲ್ಲಿರುವ ಕಾರ್ಮೆಲಾರಾಮ್ ರೈಲು ನಿಲ್ದಾಣಕ್ಕೂ ಧಾವಿಸಿದಾಗ, ಅಲ್ಲಿ ಲೆಪ್ಚಾ ಪತ್ತೆಯಾಗಿದ್ದು, ಆತನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
Advertisement