ಲಿಸ್ಟ್‌ನಲ್ಲಿದ್ದ ಹೆಸರು ಆರ್ಡರ್ ಕಾಪಿಯಲ್ಲಿ ಮಾಯ..! ವೈದ್ಯಾಧಿಕಾರಿಗಳ ವರ್ಗಾವಣೆ ಆದೇಶದಲ್ಲಿ ಭಾರಿ ಲೋಪ; ನಡೆದಿದ್ಯಾ ಅಕ್ರಮ?

ಅಂತಿಮ ವರ್ಗಾವಣೆ ಪಟ್ಟಿಯಲ್ಲಿ ಹೆಸರು ಹೊಂದಿದ್ದರೂ ವರ್ಗಾವಣೆ ಆದೇಶದಲ್ಲಿ ಕಾಣಿಸದ ವೈದ್ಯರಲ್ಲಿ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯ ಡಾ. ಶ್ರೀನಿವಾಸ್ ಜಿ ಮತ್ತು ಕೆ.ಆರ್. ಪುರಂ ಸರ್ಕಾರಿ ಆಸ್ಪತ್ರೆಯ ಡಾ. ಲತಾ ಪ್ರಮೀಳಾ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ (DHFWS) ಹೊರಡಿಸಿರುವ ವೈದ್ಯಾಧಿಕಾರಿಗಳ ವರ್ಗಾವಣೆ ಆದೇಶ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ.

2026-27ನೇ ಸಾಲಿನ ಮುಖ್ಯ ವೈದ್ಯಾಧಿಕಾರಿಗಳ (CMO) ಅಂತಿಮ ವರ್ಗಾವಣೆ ಪಟ್ಟಿಯಲ್ಲಿ ಹೆಸರು ಹೊಂದಿದ್ದ ಕೆಲ ವೈದ್ಯರ ಹೆಸರುಗಳು ಅಧಿಕೃತ ವರ್ಗಾವಣೆ ಆದೇಶದಲ್ಲಿ ಕಾಣಿಸದೇ ಇರುವುದರಿಂದ ಪಾರದರ್ಶಕತೆ ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.

ನಿಯಮಗಳ ಪ್ರಕಾರ, ಅಂತಿಮ ವರ್ಗಾವಣೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಪ್ರತಿಯೊಬ್ಬ ಅಧಿಕಾರಿಯ ಹೆಸರೂ ಅಧಿಕೃತ ವರ್ಗಾವಣೆ ಆದೇಶದಲ್ಲಿ ಕಡ್ಡಾಯವಾಗಿ ಇರಬೇಕು. ಒಂದು ವೇಳೆ ವಿನಾಯಿತಿ ನೀಡಿದ್ದರೆ ಅದರ ಬಗ್ಗೆ ಸ್ಪಷ್ಟ ಕಾರಣ ಮತ್ತು ಆದೇಶವನ್ನು ದಾಖಲಿಸಬೇಕು. ಆದರೆ, ಈ ಪ್ರಕರಣದಲ್ಲಿ ಕೆಲ ಹಿರಿಯ ವೈದ್ಯರ ಹೆಸರುಗಳನ್ನು ಯಾವುದೇ ವಿವರಣೆ ನೀಡದೇ ಅಂತಿಮ ಆದೇಶದಿಂದ ಕೈಬಿಡಲಾಗಿದೆ ಎನ್ನುವುದು ವಿವಾದಕ್ಕೆ ಕಾರಣವಾಗಿದೆ.

ಅಂತಿಮ ವರ್ಗಾವಣೆ ಪಟ್ಟಿಯಲ್ಲಿ ಹೆಸರು ಹೊಂದಿದ್ದರೂ ವರ್ಗಾವಣೆ ಆದೇಶದಲ್ಲಿ ಕಾಣಿಸದ ವೈದ್ಯರಲ್ಲಿ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯ ಡಾ. ಶ್ರೀನಿವಾಸ್ ಜಿ ಮತ್ತು ಕೆ.ಆರ್. ಪುರಂ ಸರ್ಕಾರಿ ಆಸ್ಪತ್ರೆಯ ಡಾ. ಲತಾ ಪ್ರಮೀಳಾ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ.

ಈ ಬೆಳವಣಿಗೆಯಿಂದ ವೈದ್ಯಾಧಿಕಾರಿಗಳ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ವರ್ಗಾವಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಲಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ.

File photo
ಅಕ್ರಮ ಆರೋಪ: KSOU ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ; ಬ್ಯಾಂಕ್ ಖಾತೆ ಫ್ರೀಜ್'ಗೆ ಆದೇಶ

ಹಿಂದೆ ಇದೇ ರೀತಿಯ ವಿನಾಯಿತಿಗಾಗಿ ಸಲ್ಲಿಸಿದ್ದ ಮನವಿಗಳನ್ನು ಇಲಾಖೆ ತಿರಸ್ಕರಿಸಿದ್ದ ಉದಾಹರಣೆಗಳಿದ್ದು, ಕೆಲ ಅಧಿಕಾರಿಗಳು ಮನವಿ ತಿರಸ್ಕೃತವಾದ ಬಳಿಕ ಸ್ವಯಂ ನಿವೃತ್ತಿ ಪಡೆದಿದ್ದ ಸಂದರ್ಭಗಳೂ ಇವೆ. ಇಂತಹ ಸಂದರ್ಭದಲ್ಲಿ ಕೆಲವರಿಗೆ ಮಾತ್ರ ವಿನಾಯಿತಿ ನೀಡಿರುವ ಸಾಧ್ಯತೆ ಚರ್ಚೆಗೆ ಗ್ರಾಸವಾಗಿದೆ.

ಈ ಪ್ರಕರಣದಲ್ಲಿ ಡಾ. ಶ್ರೀನಿವಾಸ್ ಜಿ ಅವರ ಹೆಸರು ವಿಶೇಷ ಗಮನ ಸೆಳೆದಿದೆ. ಅವರು ಪ್ರಸ್ತುತ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ (ಕೋಲಾರ ಜಿಲ್ಲೆ) ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದು, ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ವರ್ಗಾವಣೆ ಹಾಗೂ ಬಡ್ತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ಭರವಸೆ ನೀಡಿದ್ದರು. ಇದೀಗ ಅವರ ಹೆಸರೇ ವರ್ಗಾವಣೆ ಆದೇಶದಲ್ಲಿ ಕಾಣಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಇದುವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಅಂತಿಮ ಪಟ್ಟಿಯಲ್ಲಿದ್ದ ಹೆಸರುಗಳನ್ನು ಏಕೆ ಕೈಬಿಡಲಾಯಿತು? ಅವರಿಗೆ ವಿನಾಯಿತಿ ನೀಡಲಾಗಿದೆಯೇ? ನೀಡಿದ್ದರೆ ಅದರ ಆಧಾರವೇನು? ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.

ಆರೋಗ್ಯ ಇಲಾಖೆ ವೀಕ್ಷಕರ ಪ್ರಕಾರ, ಈ ಬೆಳವಣಿಗೆ ವರ್ಗಾವಣೆ ಪ್ರಕ್ರಿಯೆಯ ವಿಶ್ವಾಸಾರ್ಹತೆಗೆ ಧಕ್ಕೆಯುಂಟು ಮಾಡಿದ್ದು, ಆಡಳಿತಾತ್ಮಕ ಪಾರದರ್ಶಕತೆ ಬಗ್ಗೆ ಅನುಮಾನ ಮೂಡಿಸಿದೆ. ವೈದ್ಯಾಧಿಕಾರಿಗಳ ಸಂಘ ಹಾಗೂ ಹಲವು ವಲಯಗಳು ಈ ಕುರಿತು ಸಂಪೂರ್ಣ ಸ್ಪಷ್ಟನೆ ನೀಡುವಂತೆ ಸರ್ಕಾರ ಮತ್ತು ಇಲಾಖೆಯನ್ನು ಆಗ್ರಹಿಸಿವೆ.

ಇದೀಗ ವರ್ಗಾವಣೆ ಪಟ್ಟಿಯಲ್ಲಿ ಇದ್ದ ಹೆಸರುಗಳು ಅಧಿಕೃತ ಆದೇಶದಲ್ಲಿ ಏಕೆ ಕಾಣಿಸಿಲ್ಲ ಎಂಬುದರ ಕುರಿತು ಆರೋಗ್ಯ ಇಲಾಖೆ ಯಾವ ಸ್ಪಷ್ಟನೆ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com