ಬಂಡೀಪುರ, ನಾಗರಹೊಳೆ ಸಫಾರಿಗೆ ಮತ್ತೆ ಗ್ರೀನ್ ಸಿಗ್ನಲ್; ಮುತ್ತತ್ತಿಯಲ್ಲಿ ಸುರಕ್ಷತಾ ಕ್ರಮಗಳಿಗೆ ಸರ್ಕಾರ ಸೂಚನೆ

ಪರಿಸರ ಪ್ರವಾಸೋದ್ಯಮ (ಇಕೋ ಟೂರಿಸಂ) ಕ್ಷೇತ್ರದಲ್ಲಿ ಕರ್ನಾಟಕ ಅಪಾರ ಅವಕಾಶಗಳನ್ನು ಹೊಂದಿದ್ದು, ಪರಿಸರ ಸಂರಕ್ಷಣೆಯೊಂದಿಗೆ ಸ್ಥಳೀಯರಿಗೆ ಉದ್ಯೋಗ ಹಾಗೂ ಜೀವನೋಪಾಯ ಒದಗಿಸುವ ಸುಸ್ಥಿರ ಪ್ರವಾಸೋದ್ಯಮ ಮಾದರಿಯನ್ನು ರಾಜ್ಯ ಸರ್ಕಾರ ಅನುಸರಿಸುತ್ತಿದೆ.
Safari vehicle
ಸಫಾರಿ ವಾಹನ
Updated on

ಬೆಂಗಳೂರು: ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ (ಟೈಗರ್ ರಿಸರ್ವ್) ಸಫಾರಿ (ಪಾರ್ಕ್ ಎಕ್ಸ್‌ಕರ್ಷನ್)ಯನ್ನು ಮತ್ತೆ ಸಂಪೂರ್ಣವಾಗಿ ಪುನರಾರಂಭಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ತಜ್ಞರ ತಾಂತ್ರಿಕ ಸಮಿತಿ ವೈಜ್ಞಾನಿಕವಾಗಿ ನಿರ್ಧರಿಸಿದ ಪರಿಸರದ ಹೊರೆ ಹೊರುವ ಸಾಮರ್ಥ್ಯ (Carrying Capacity) ಆಧರಿಸಿ ಸಫಾರಿ ನಡೆಸಲು ಸರ್ಕಾರ ಅನುಮೋದನೆ ನೀಡಿದೆ.

ತಾಂತ್ರಿಕ ಸಮಿತಿ ಸಲ್ಲಿಸಿದ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿದ್ದು, ಅದರ ಶಿಫಾರಸುಗಳಿಗೆ ಅನುಗುಣವಾಗಿ ನಿಯಂತ್ರಿತ ರೀತಿಯಲ್ಲಿ ಅರಣ್ಯ ಸಫಾರಿ ನಡೆಸುವಂತೆ ಇಲಾಖೆಗೆ ಸೂಚನೆ ನೀಡಿದೆ.

ಪರಿಸರ ಪ್ರವಾಸೋದ್ಯಮ (ಇಕೋ ಟೂರಿಸಂ) ಕ್ಷೇತ್ರದಲ್ಲಿ ಕರ್ನಾಟಕ ಅಪಾರ ಅವಕಾಶಗಳನ್ನು ಹೊಂದಿದ್ದು, ಪರಿಸರ ಸಂರಕ್ಷಣೆಯೊಂದಿಗೆ ಸ್ಥಳೀಯರಿಗೆ ಉದ್ಯೋಗ ಹಾಗೂ ಜೀವನೋಪಾಯ ಒದಗಿಸುವ ಸುಸ್ಥಿರ ಪ್ರವಾಸೋದ್ಯಮ ಮಾದರಿಯನ್ನು ರಾಜ್ಯ ಸರ್ಕಾರ ಅನುಸರಿಸುತ್ತಿದೆ.

ಪರಿಸರದ ಸಮತೋಲನ ಕಾಪಾಡುವ ಜೊತೆಗೆ, ಪ್ರವಾಸೋದ್ಯಮದಿಂದ ಸಂರಕ್ಷಣೆ ಮತ್ತು ಸ್ಥಳೀಯ ಆರ್ಥಿಕತೆಗೆ ಉತ್ತೇಜನ ಸಿಗುವಂತೆ ಮಾಡುವುದು ಸರ್ಕಾರ ಬದ್ಧತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ನವೆಂಬರ್‌ನಲ್ಲಿ ವನ್ಯಜೀವಿಗಳ ದಾಳಿಗಳು ಹೆಚ್ಚಾದ ಹಿನ್ನೆಲೆಯಲ್ಲಿ ಬಂಡೀಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈ ಕ್ರಮವನ್ನು ಕಳೆದ ಮೇ ತಿಂಗಳಲ್ಲಿ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಬಿ. ಖಂಡ್ರೆ ಸಮರ್ಥಿಸಿಕೊಂಡು, ಸಾರ್ವಜನಿಕರ ಜೀವ ರಕ್ಷಣೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ತಿಳಿಸಿದ್ದರು.

Safari vehicle
ದುಬಾರೆ ದುರಂತ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ: ಓಪನ್ ಸಫಾರಿ ವಾಹನಗಳಿಗೆ ನಿಷೇಧ..!

ಇತ್ತ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮುತ್ತತ್ತಿಯಲ್ಲಿ ಕಾವೇರಿ ನದಿಯಲ್ಲಿ ಸಂಭವಿಸಿದ ದುರಂತದ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪ್ರವಾಸಿಗರಿಗಾಗಿ ಕಾವೇರಿ ನದಿಯಲ್ಲಿ ಸುರಕ್ಷಿತ ಈಜು ಪ್ರದೇಶಗಳನ್ನು ಗುರುತಿಸಬೇಕು. ಅಪಾಯಕಾರಿ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಿ, ಪ್ರವಾಸಿಗರು ನದಿಗೆ ಇಳಿಯದಂತೆ ಕ್ರಮ ಕೈಗೊಳ್ಳಬೇಕು ಎಂದು ಮಂಡ್ಯ ಜಿಲ್ಲಾಧಿಕಾರಿಗೆ ದೂರವಾಣಿ ಮೂಲಕ ನಿರ್ದೇಶನ ನೀಡಿದ್ದಾರೆಂದು ತಿಳಿದುಬಂದಿದೆ.

ಇತ್ತೀಚೆಗೆ ಮುತ್ತತ್ತಿಯಲ್ಲಿ ಒಂದೇ ಕುಟುಂಬದ ಐವರು ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ.

ಪ್ರವಾಸಿಗರಿಗೆ ಎಚ್ಚರಿಕೆ ನೀಡುವ ಸೂಚನಾ ಫಲಕಗಳನ್ನು ಅಳವಡಿಸಬೇಕು ಹಾಗೂ ಸುರಕ್ಷಿತ ಈಜು ಪ್ರದೇಶಗಳಲ್ಲಿ ಮಾರ್ಗದರ್ಶಕರು ಅಥವಾ ತರಬೇತಿ ಪಡೆದ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ.

ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಅವರು, ಶೀಘ್ರದಲ್ಲೇ ಮಂಡ್ಯ ಜಿಲ್ಲೆಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.

ಈ ನಡುವೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಪತ್ರ ಬರೆದು, ಮುತ್ತತ್ತಿಯಲ್ಲಿ ಪದೇ ಪದೇ ಸಂಭವಿಸುತ್ತಿರುವ ದುರಂತಗಳನ್ನು ತಡೆಯಲು ತುರ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮುತ್ತತ್ತಿಯಲ್ಲಿ ಪೊಲೀಸ್ ಹೊರಠಾಣೆ ಸ್ಥಾಪನೆ, ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜನೆ, ಎಚ್ಚರಿಕೆ ಫಲಕಗಳು ಹಾಗೂ ಬ್ಯಾರಿಕೇಡ್‌ಗಳ ಅಳವಡಿಕೆ, ಅಪಾಯಕಾರಿ ಪ್ರದೇಶಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ ಸೇರಿದಂತೆ ಹಲವು ಕ್ರಮಗಳನ್ನು ತಕ್ಷಣ ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕಳೆದ ಐದು ತಿಂಗಳಲ್ಲಿ ಮುತ್ತತ್ತಿಯಲ್ಲಿ 11 ಮಂದಿ ಹಾಗೂ ಕಳೆದ ಐದು ವರ್ಷಗಳಲ್ಲಿ 36ಕ್ಕೂ ಹೆಚ್ಚು ಮಂದಿ ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟಿರುವುದನ್ನು ಉಲ್ಲೇಖಿಸಿದ ಕುಮಾರಸ್ವಾಮಿ ಅವರು, ಮತ್ತಷ್ಟು ಪ್ರಾಣಹಾನಿ ತಡೆಯಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com