ದುಬಾರೆ ದುರಂತ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ: ಓಪನ್ ಸಫಾರಿ ವಾಹನಗಳಿಗೆ ನಿಷೇಧ..!

ದುಬಾರೆ ಶಿಬಿರದಲ್ಲಿ ನಡೆದ ಘಟನೆಯಲ್ಲಿ ಆನೆಗಳ ನಡುವೆ ನಡೆದ ಕಾದಾಟದಲ್ಲಿ ಆನೆಯೊಂದು ನಿಯಂತ್ರಣ ತಪ್ಪಿ ಬಿದ್ದಿತ್ತು. ಆ ಸಂದರ್ಭದಲ್ಲಿ ಅದರ ಕೆಳಗೆ ಸಿಲುಕಿದ ಮಹಿಳಾ ಪ್ರವಾಸಿಗೆ ಸಾವನ್ನಪ್ಪಿದ್ದರು.
Safari vehicle
ಸಫಾರಿ ವಾಹನ
Updated on

ಬೆಂಗಳೂರು: ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ನಡೆದ ದುರ್ಘಟನೆಯಲ್ಲಿ ಮಹಿಳಾ ಪ್ರವಾಸಿಗೆಯೊಬ್ಬರು ಸಾವನ್ನಪ್ಪಿದ ಘಟನೆ ಬಳಿಕ ರಾಜ್ಯ ಅರಣ್ಯ ಇಲಾಖೆ ಕಠಿಣ ಸುರಕ್ಷತಾ ಕ್ರಮಗಳಿಗೆ ಮುಂದಾಗಿದೆ.

ರಾಜ್ಯದ ಎಲ್ಲಾ ವನ್ಯಜೀವಿ ಸಫಾರಿಗಳಲ್ಲಿ ಇನ್ನುಮುಂದೆ ತೆರೆದ ಜೀಪ್‌ಗಳ ಬಳಕೆಗೆ ನಿಷೇಧ ಹೇರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ದುಬಾರೆ ಶಿಬಿರದಲ್ಲಿ ನಡೆದ ಘಟನೆಯಲ್ಲಿ ಆನೆಗಳ ನಡುವೆ ನಡೆದ ಕಾದಾಟದಲ್ಲಿ ಆನೆಯೊಂದು ನಿಯಂತ್ರಣ ತಪ್ಪಿ ಬಿದ್ದಿತ್ತು. ಆ ಸಂದರ್ಭದಲ್ಲಿ ಅದರ ಕೆಳಗೆ ಸಿಲುಕಿದ ಮಹಿಳಾ ಪ್ರವಾಸಿಗೆ ಸಾವನ್ನಪ್ಪಿದ್ದರು. ಈ ಘಟನೆ ವನ್ಯಜೀವಿ ಪ್ರವಾಸೋದ್ಯಮದ ಸುರಕ್ಷತೆ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ ಅವರು, ಪ್ರವಾಸಿಗರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ರಾಜ್ಯದ ಐದು ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಾದ ಬಂಡೀಪುರ, ನಾಗರಹೊಳೆ, ಕಾಳಿ, ಬಿಳಿಗಿರಿರಂಗನಬೆಟ್ಟ ಮತ್ತು ಭದ್ರಾ ಹಾಗೂ ಮಲೆ ಮಹದೇಶ್ವರ ಬೆಟ್ಟ, ದಾಂಡೇಲಿ, ಕೆ.ಗುಡಿ ಮುಂತಾದೆಡೆ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಲ್ಲಿಯವರೆಗೆ ತೆರೆದ ಕ್ಯಾಂಪರ್ ವಾಹನಗಳಲ್ಲಿ ಸಫಾರಿ ನಡೆಸಲಾಗುತ್ತಿತ್ತು. ಆದರೆ, ಇನ್ನು ಮುಂದೆ ತೆರೆದ ಕ್ಯಾಂಪರ್ ಬದಲಿಗೆ ಸಂಪೂರ್ಣ ಸುರಕ್ಷಿತವಾದ ಬಸ್ ಸಫಾರಿಗಳನ್ನು ನಡೆಸಲು ಸಚಿವರು ನಿರ್ದೇಶಿಸಿದ್ದಾರೆ.

ಹಾಲಿ ಬಳಕೆಯಲ್ಲಿರುವ ಕ್ಯಾಂಪರ್‌ಗಳನ್ನೇ ಬಳಸಬೇಕಾದ ಅನಿವಾರ್ಯತೆ ಇದ್ದಲ್ಲಿ, ಅವುಗಳಿಗೆ ಕಬ್ಬಿಣದ ಸರಳುಗಳಿಂದ ಕೂಡಿದ ಜಾಲರಿಗಳನ್ನು ಅಳವಡಿಸಬೇಕು. ಇಲ್ಲವೇ ಒಡೆಯಲಾಗದ ಗಾಜಿನ ಕಿಟಕಿಗಳನ್ನು ಅಳವಡಿಸಿ ಸುರಕ್ಷತೆಯನ್ನು ಹೆಚ್ಚಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ.

Safari vehicle
ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳ ಕಾದಾಟ: ಕಂಜನ್ ದಾಳಿಯಿಂದ ಗಾಯಗೊಂಡಿದ್ದ 'ಮಾರ್ತಾಂಡ' ಸಾವು! Video

ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲ, ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತೆಯಲ್ಲಿ ಯಾವುದೇ ರಾಜಿ ಇರಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇದಲ್ಲದೆ, ಎಲ್ಲಾ ಸಫಾರಿ ವಾಹನಗಳಲ್ಲಿ ಪ್ರಥಮ ಚಿಕಿತ್ಸೆ ಕಿಟ್ ಕಡ್ಡಾಯವಾಗಿರಬೇಕು ಮತ್ತು ಸಫಾರಿ ಕೇಂದ್ರಗಳ ಬಳಿ ಆಂಬುಲೆನ್ಸ್ ವ್ಯವಸ್ಥೆ ಇರಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಸಫಾರಿಯ ವೇಳೆ ಪ್ರವಾಸಿಗರು ಅರಣ್ಯದೊಳಗೆ ವಾಹನದಿಂದ ಇಳಿಯುವುದು ಅಥವಾ ವನ್ಯಜೀವಿಗಳ ಹತ್ತಿರಕ್ಕೆ ಹೋಗುವ ಸಾಹಸ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪ್ರವಾಸಿಗರ ಕುತೂಹಲವು ಕೆಲವೊಮ್ಮೆ ಪ್ರಾಣಾಪಾಯಕ್ಕೆ ದಾರಿ ಮಾಡಿಕೊಡಬಹುದು. ಹಾಗಾಗಿ, ವಾಹನದಿಂದ ಕೆಳಗಿಳಿಯದಂತೆ ನಿರ್ಬಂಧ ಹೇರಲು ಸಚಿವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಇದೇ ವೇಳೆ ದುಬಾರೆ ಘಟನೆಯಲ್ಲಿ ಆಕ್ರಮಣಕಾರಿ ವರ್ತನೆ ತೋರಿದ ‘ಕಂಚನ್’ ಹೆಸರಿನ ಆನೆಯನ್ನು ಮೈಸೂರು ದಸರಾ ಜಂಬೂಸವಾರಿಯಿಂದ ಕೈಬಿಡಲು ತೀರ್ಮಾನಿಸಲಾಗಿದೆ.

ಈ ಹಿಂದೆ ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕಂಚನ್, ಇನ್ನುಮುಂದೆ ಪಟ್ಟಿಯಲ್ಲಿ ಇರಬಾರದು ಎಂದು ಸಚಿವರು ಸೂಚನೆ ನೀಡಿದ್ದಾರೆ.

ದಸರಾ ವೇಳೆ ಕೂಡ ಜನರು ಆನೆಗಳಿಗೆ ಅತಿಯಾಗಿ ಹತ್ತಿರ ಹೋಗದಂತೆ ಹೊಸ ಸುರಕ್ಷತಾ ನಿಯಮಾವಳಿ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com