ಕೆಂಪೇಗೌಡ ಜಯಂತಿ ಇನ್ನು ಮುಂದೆ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಆಚರಣೆ: ನೂತನ ಯೋಜನೆ ಪ್ರಕಟಿಸಿದ CM ಡಿ ಕೆ ಶಿವಕುಮಾರ್

ಬೆಂಗಳೂರು ನಗರದ ಅಭಿವೃದ್ಧಿ ಮತ್ತು ಕೆಂಪೇಗೌಡರ ಸ್ಮರಣೆಗೆ ಸಂಬಂಧಿಸಿದಂತೆ ಹಲವು ಮುಖ್ಯ ಘೋಷಣೆಗಳನ್ನು ಮಾಡಿದರು.
CM D K Shivakumar paid tribute to Nadaprabhu Kempegowda
ಕೆಂಪೇಗೌಡ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ಸಿಎಂ ಡಿ ಕೆ ಶಿವಕುಮಾರ್
Updated on

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಅದ್ದೂರಿಯಾಗಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಸಿಎಂ ಡಿ.ಕೆ ಶಿವಕುಮಾರ್ ಕೆಂಪೇಗೌಡರ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೆಂಗಳೂರು ನಗರದ ಅಭಿವೃದ್ಧಿ ಮತ್ತು ಕೆಂಪೇಗೌಡರ ಸ್ಮರಣೆಗೆ ಸಂಬಂಧಿಸಿದಂತೆ ಹಲವು ಮುಖ್ಯ ಘೋಷಣೆಗಳನ್ನು ಮಾಡಿದರು. ಇದು ರಾಜ್ಯದ ಜನರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.

ಕೆಂಪೇಗೌಡ ಜಯಂತಿ ಆಚರಣೆ ವಿಸ್ತರಣೆ

ಇನ್ನು ಮುಂದೆ ಕೆಂಪೇಗೌಡ ಜಯಂತಿಯನ್ನು ವಿಧಾನಸೌಧ ಅಥವಾ ಫ್ರೀಡಂ ಪಾರ್ಕ್‌ಗೆ ಸೀಮಿತಗೊಳಿಸದೆ, ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ವರ್ಷಕ್ಕೊಂದು ಕ್ಷೇತ್ರದ ವ್ಯಾಪ್ತಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವುದು.

CM D K Shivakumar paid tribute to Nadaprabhu Kempegowda
ಕೆಂಪೇಗೌಡ ಬಡಾವಣೆಯಲ್ಲಿ ಈ ಬಾರಿಯ ಕೆಂಪೇಗೌಡ ಜಯಂತಿ: ಸಿಎಂ ಡಿ.ಕೆ ಶಿವಕುಮಾರ್

ಈ ವರ್ಷ ಯಶವಂತಪುರ ಕ್ಷೇತ್ರದ ಕೆಂಪೇಗೌಡ ಲೇಔಟ್‌ನಲ್ಲಿ ಜಯಂತಿ ಆಚರಣೆ ಪ್ರಾರಂಭವಾಗಿದ್ದು, ಮುಂದಿನ 28 ವರ್ಷಗಳ ಕಾಲ ಬೇರೆ ಬೇರೆ ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮ ಮುಂದುವರಿಯಲಿದೆ. ಜಿಬಿಎ ವತಿಯಿಂದ ಇದಕ್ಕೆ ಹಣಕಾಸಿನ ವ್ಯವಸ್ಥೆ ಮಾಡಲಾಗಿದ್ದು, ಇಡೀ ರಾಜ್ಯದಲ್ಲಿ ಕೆಂಪೇಗೌಡ ಜಯಂತಿಯನ್ನು ಆಚರಿಸಲು ಸರ್ಕಾರ ನಿರ್ಧರಿಸಿದೆ. ಕೆಂಪೇಗೌಡರ ಆಚಾರ-ವಿಚಾರಗಳನ್ನು ಅಳವಡಿಸಿಕೊಂಡು ಬೆಂಗಳೂರಿಗೆ ಹೊಸ ರೂಪ ನೀಡುವ ಚಿಂತನೆ ಇದೆ ಎಂದು ಹೇಳಿದರು.

ಮಾಗಡಿಯಲ್ಲಿ ಕೆಂಪೇಗೌಡರ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯ

ಮಾಗಡಿ ಬಳಿ ಸುಮಾರು 10 ಎಕರೆ ಪ್ರದೇಶದಲ್ಲಿ ಕೆಂಪೇಗೌಡರ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಈಗಾಗಲೇ 5.5 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಉಳಿದ ಭೂಮಿಯ ಸ್ವಾಧೀನ ಪ್ರಕ್ರಿಯೆ ಶೀಘ್ರದಲ್ಲೇ ಪೂರ್ಣಗೊಳ್ಳುವುದು ಎಂದು ತಿಳಿಸಿದರು.

ಮಾಗಡಿಯಲ್ಲಿ ಕೆಂಪೇಗೌಡರ ಹೆಸರಿನಲ್ಲಿ ಟೌನ್ ಪ್ಲಾನಿಂಗ್ ಮಾಡಲು ಸೂಚನೆ ನೀಡಿರುವುದಾಗಿ ಸಿಎಂ ಹೇಳಿದರು. ಏರ್‌ಪೋರ್ಟ್‌ನಲ್ಲಿರುವ ಕೆಂಪೇಗೌಡರ ಪ್ರತಿಮೆಯನ್ನು ಇನ್ನಷ್ಟು ಸುಂದರವಾಗಿ ಅಭಿವೃದ್ಧಿಪಡಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಬೆಂಗಳೂರಿನ ವಿವಿಧೆಡೆ ಕೆಂಪೇಗೌಡರ ಪುತ್ತಳಿಗಳನ್ನು ನಿರ್ಮಿಸುವುದಕ್ಕೂ ಯೋಜನೆ ರೂಪಿಸಲಾಗುತ್ತಿದೆ. ಈ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಗಮನ ಹರಿಸುವರು ಎಂದು ಮುಖ್ಯಮಂತ್ರಿ ತಿಳಿಸಿದರು.

ಮೆಟ್ರೋ ವಿಸ್ತರಣೆಗೆ ಒತ್ತು

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೆಟ್ರೋ ವಿಸ್ತರಣೆ ಬಗ್ಗೆಯೂ ಮಾಹಿತಿ ನೀಡಿದರು. ಇನ್ನುಳಿದ ಎರಡು ವರ್ಷಗಳಲ್ಲಿ ಮೆಟ್ರೋ ವ್ಯವಸ್ಥೆಯನ್ನು ವಿಸ್ತರಿಸಲು ಸರ್ಕಾರ ಗಮನ ಹರಿಸುತ್ತಿದೆ. ಸುಮಾರು 500 ಕಿಲೋಮೀಟರ್ ಮೆಟ್ರೋ ಮಾರ್ಗಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಈ ಅವಧಿಯಲ್ಲೇ ಈ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಪ್ರಯತ್ನ ಮಾಡುವುದಾಗಿ ಹೇಳಿದರು.

ಕೆಂಪೇಗೌಡರು ಬೆಂಗಳೂರಿನ ರಾಜಧಾನಿಯನ್ನು ಸ್ಥಾಪಿಸಿದ ಮಹಾನ್ ವ್ಯಕ್ತಿ. ಅವರ ಸೇವೆಯನ್ನು ಜನರು ಮರೆಯುವಂತಿಲ್ಲ. ಅವರ ಹೆಸರನ್ನು ಉಳಿಸುವುದಕ್ಕಾಗಿ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಯೋಜಿಸುತ್ತಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com