ಕರ್ನಾಟಕ ಬಜೆಟ್ 2026: 'ಬ್ರದರ್ಸ್ ಬಜೆಟ್.. ಅಲ್ಪಸಂಖ್ಯಾತರಿಗೆ ಬೊಕ್ಕಸದ ಪಾಲು'; ಓಲೈಕೆ ರಾಜಕಾರಣವೇ ಪರಮ ಗುರಿ: BJP ಕಿಡಿ

ಬಜೆಟ್ ಮಂಡನೆ ಮುಕ್ತಾಯವಾಗುತ್ತಲೇ ಇತ್ತ ಟ್ವೀಟ್ ಮಾಡಿರುವ ಬಿಜೆಪಿ, ಅಲ್ಪಸಂಖ್ಯಾತರಿಗೆ ಸಿದ್ದರಾಮಯ್ಯ ಬಜೆಟ್ ಘೋಷಣೆ ಮಾಡಿರುವ ಯೋಜನೆಗಳನ್ನು ಉಲ್ಲೇಖಿಸಿ ಕಿಡಿಕಾರಿದೆ.
Siddaramaiah
ಸಿದ್ದರಾಮಯ್ಯ
Updated on

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿರುವ 17 ನೇ ಬಜೆಟ್‌ ಗೆ ಬಿಜೆಪಿ ಟೀಕೆ ಮಾಡಿದ್ದು, 'ಬ್ರದರ್ಸ್ ಬಜೆಟ್.. ಓಲೈಕೆ ರಾಜಕಾರಣವೇ ಪರಮ ಗುರಿ' ಎಂದು ಸರ್ಕಾರದ ವಿರುದ್ಧ ಕಿಡಿಕಾರಿದೆ.

ಅತ್ತ ಬಜೆಟ್ ಮಂಡನೆ ಮುಕ್ತಾಯವಾಗುತ್ತಲೇ ಇತ್ತ ಟ್ವೀಟ್ ಮಾಡಿರುವ ಬಿಜೆಪಿ, ಅಲ್ಪಸಂಖ್ಯಾತರಿಗೆ ಸಿದ್ದರಾಮಯ್ಯ ಬಜೆಟ್ ಘೋಷಣೆ ಮಾಡಿರುವ ಯೋಜನೆಗಳನ್ನು ಉಲ್ಲೇಖಿಸಿ ಕಿಡಿಕಾರಿದ್ದು, ಓಲೈಕೆ ರಾಜಕಾರಣವನ್ನೇ ಪರಮ ಗುರಿಯಾಗಿಸಿಕೊಂಡಿರುವ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ರಾಜ್ಯದ ಬೊಕ್ಕಸದ ಬಹುಪಾಲನ್ನೇ ಮೀಸಲಿಟ್ಟಿರುವುದು ನಾಡಿನ ದೌರ್ಭಾಗ್ಯ ಎಂದು ಟ್ವೀಟ್ ಮಾಡಿದೆ.

ಮತ್ತೊಂದು ಟ್ವೀಟ್ ನಲ್ಲಿ, ಮಾನ್ಯ ಸಿದ್ದರಾಮಯ್ಯ ಅವರೇ ಬಜೆಟ್ ಪುಸ್ತಕದ ಪುಟಗಳಲ್ಲಿ ನೀವು ಸೃಷ್ಟಿಸಿದ ಉದ್ಯೋಗಗಳನ್ನು ಬಿಡಿ. ಡಿಗ್ರಿ ಹಿಡಿದು ಕೆಲಸವಿಲ್ಲದೆ ಅಲೆಯುತ್ತಿರುವ ನಿರುದ್ಯೋಗಿಗಳು ಮಾಡಿದ ಹೋರಾಟದ ಬಗ್ಗೆ ಮಾತನಾಡಿ...ಎಂದು ಹೇಳಿದೆ.

ಉಚಿತ ಪ್ರಯಾಣದ ಕ್ರೆಡಿಟ್ ಕಾಂಗ್ರೆಸ್ ಸರ್ಕಾರಕ್ಕೆ, ಆದರೆ ಹೊರೆ ಮಾತ್ರ ಸಾರಿಗೆ ನಿಗಮಕ್ಕೆ! ಶಕ್ತಿ ಯೋಜನೆಗಾಗಿ KSRTC ಸೇರಿದಂತೆ ಸಾರಿಗೆ ನಿಗಮಗಳಿಗೆ ಸಿದ್ದರಾಮಯ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ ಮೊತ್ತ ಬರೋಬ್ಬರಿ ₹5,313 ಕೋಟಿ! ಅನುದಾನವಿಲ್ಲದೆ ನಿಗಮಗಳು ಉಸಿರುಗಟ್ಟುತ್ತಿವೆ. ಕೊರತೆ ಬೋಗಸ್‌ ಬಜೆಟ್‌ ಮಂಡಿಸಿದ ಸಾಲರಾಮಯ್ಯನವರು ಕರ್ನಾಟಕವನ್ನು ಸಾಲದ ಕೂಪಕ್ಕೆ ದೂಡಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.

Siddaramaiah
ಕರ್ನಾಟಕ ಬಜೆಟ್ 2026: 'ವೈಟ್ ಟಾಪಿಂಗ್‌, ಮಳೆ ಪ್ರವಾಹ ನಿರ್ವಹಣೆ..'; ಬೆಂಗಳೂರಿಗೆ ಮಹತ್ವದ ಘೋಷಣೆಗಳು

ಅತಿಥಿ ಶಿಕ್ಷಕರ ಗೌರವಧನ ನೀಡ ಭ್ರಷ್ಟ ಸರ್ಕಾರ

ಅಂತೆಯೇ 'ರಾಜ್ಯದ ಅತಿಥಿ ಶಿಕ್ಷಕರಿಗೆ ಕಳೆದ 5 ತಿಂಗಳಿಂದ ಗೌರವ ಧನ ನೀಡದ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು, ಬಡ ಶಿಕ್ಷಕರಿಗೆ ನೀಡುವ ಒಂದು ಸಾವಿರ ನೀಡಲೂ ಸರ್ಕಾರದ ಬಳಿ ಹಣವಿಲ್ಲವೇ? ಕಳೆದ 5 ತಿಂಗಳಿನಿಂದ ಸಂಬಳವಿಲ್ಲದೆ ಶಿಕ್ಷಕರ ಜೀವನ ಬೀದಿಗೆ ಬಂದಿದೆ.

ಹಬ್ಬ-ಹರಿದಿನಗಳು ಸಾಲದ ಸುಳಿಯಲ್ಲಿ ಕಳೆದುಹೋಗಿವೆ. ವರ್ಗಾವಣೆ, ಕಮಿಷನ್ ದಂಧೆಯಲ್ಲಿ ಮುಳುಗಿರುವ ಭ್ರಷ್ಟ ಕಾಂಗ್ರೆಸ್‌ ಸರ್ಕಾರಕ್ಕೆ ಶಿಕ್ಷಣ ವ್ಯವಸ್ಥೆ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಸಿಎಂ ಅವರೇ ಕೂಡಲೇ ಬಾಕಿ ಹಣ ಬಿಡುಗಡೆ ಮಾಡಿ ನೊಂದ ಶಿಕ್ಷಕರಿಗೆ ನೆರವಾಗಿ, ಇಲ್ಲದಿದ್ದರೆ ಕುರ್ಚಿ ಖಾಲಿ ಮಾಡಿ ಹೊರಡಿ! ಎಂದು ಟ್ವೀಟ್ ಮಾಡಿದೆ.

'ಸಾಲ'ರಾಮಯ್ಯ

ಸಾಲ ಮಾಡುವುದರಲ್ಲಿ ಸಿಎಂ ಸಿದ್ದರಾಮಯ್ಯ ನಿಸ್ಸೀಮರು! ಕನ್ನಡಿಗರಿಗೆ 'ಸಾಲದ ಭಾಗ್ಯ' ನೀಡುವುದೇ ನಿಮ್ಮ ಬಜೆಟ್‌ನ ಅಸಲಿ ಸಾಧನೆಯೇ? ಅಭಿವೃದ್ಧಿಯತ್ತ ಹೆಜ್ಜೆ ಹಾಕಬೇಕಿದ್ದ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದೆ.

ಕರ್ನಾಟಕದ ಒಟ್ಟು ಸಾಲ 8.24 ಲಕ್ಷ ಕೋಟಿ ರೂಪಾಯಿಗಳಿಗೂ ಮೀರಿದ್ದು, ಪ್ರತಿ ಕನ್ನಡಿಗನ ಮೇಲೆ 1.17 ಲಕ್ಷ ರೂಪಾಯಿ ಸಾಲದ ಹೊರೆ ಹೊರಿಸಲಾಗಿದೆ. ಸಾಲ ಮಾಡುವುದರಲ್ಲಿ ನಂಬರ್ 1, ಅಭಿವೃದ್ಧಿ ಮಾತ್ರ ಶೂನ್ಯ - ಇದುವೇ ಕಾಂಗ್ರೆಸ್ ಸರ್ಕಾರದ ಸಾಧನೆ! ಎಂದು ಬಿಜೆಪಿ ಕಿಡಿಕಾರಿದೆ.

ನಿರಾಶಾದಾಯಕ ಬಜೆಟ್: ಬೊಮ್ಮಾಯಿ

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, "ಇದು ಅತ್ಯಂತ ನಿರಾಶಾದಾಯಕ ಬಜೆಟ್. 1,32,000 ಕೋಟಿ ಸಾಲ ಮತ್ತು 25,000 ಕೋಟಿ ಹೆಚ್ಚುವರಿ ತೆರಿಗೆ ಹೊರೆಯನ್ನು ತೆಗೆದುಕೊಂಡಿದ್ದರೂ, 32,000 ಕೋಟಿ ರೂಪಾಯಿಗಳ ಕೊರತೆಯಿದೆ. ಇದರರ್ಥ ಅಭಿವೃದ್ಧಿಗೆ ಹಣವಿಲ್ಲ, ಮತ್ತು ಬಹಳಷ್ಟು ಪಾವತಿಗಳು ಗುತ್ತಿಗೆದಾರರಿಗೆ ಬಾಕಿ ಇವೆ... ಆದ್ದರಿಂದ, ಹಣಕಾಸು ಮಂದಗತಿಯಲ್ಲಿದೆ. ಅವರು ರಾಜ್ಯವನ್ನು ಹತ್ತು ವರ್ಷಗಳ ಕಾಲ ಹಿಂದಕ್ಕೆ ಕೊಂಡೊಯ್ದಿದ್ದಾರೆ..." ಎಂದು ಕಿಡಿಕಾರದ್ದಾರೆ.

ಬೃಹತ್ ಶೂನ್ಯ ಎಂದ ಸುನೀಲ್ ಕುಮಾರ್

ಬಿಜೆಪಿ ಶಾಸಕ ಸುನೀಲ್ ಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ, 'ಇಲಾಖಾವಾರು ಬಜೆಟ್ ವಿಶ್ಲೇಷಣೆ ನಡೆಸಿದಾಗ ಇದು ಹನ್ನೊಂದು ಸುಳ್ಳು ಗಳ ಬಜೆಟ್ ಎಂದು ವಿಶ್ಲೇಷಿಸಬಹುದಾಗಿದೆ' ಎಂದು ಅವರು ಟೀಕೆ ಮಾಡಿದರು. 'ಹೊಸ ಹೊಸ ಪದಪುಂಜಗಳನ್ನು ಹೊಸೆಯುವುದಕ್ಕೆ ಸಿದ್ದರಾಮಯ್ಯನವರು ನೀಡಿದ ಆದ್ಯತೆಯನ್ನು ಹೊಸ ಹೊಸ ಯೋಜನೆಗಳ ಸೃಷ್ಟಿಗೆ ನೀಡದೇ ಇರುವುದು ರಾಜ್ಯದ ದೌರ್ಭಾಗ್ಯ. ಈ ಬಾರಿಯ ಬಜೆಟ್ ನ್ನು "11 G" ಮಾದರಿಯಲ್ಲಿ ರೂಪಿಸಲಾಗಿದೆ ಎಂದು ಸಿದ್ದರಾಮಯ್ಯನವರು ಬಜೆಟ್ ನ ಪೂರ್ವಪೀಠಿಕೆಯಲ್ಲಿ ಹೆಮ್ಮೆಯಿಂದ ಹೇಳಿದ್ದಾರೆ.

ಆದರೆ ಇಲಾಖಾವಾರು ಬಜೆಟ್ ವಿಶ್ಲೇಷಣೆ ನಡೆಸಿದಾಗ ಇದು "11G" ಬಜೆಟ್ ಬದಲಾಗಿದೆ "11 ಲೈ " ( ಹನ್ನೊಂದು ಸುಳ್ಳು ) ಗಳ ಬಜೆಟ್ ಎಂದು ವಿಶ್ಲೇಷಿಸಬಹುದಾಗಿದೆ. ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಕಾಣದಂಥ ಸಾಲದ‌ ಹೊರೆಯನ್ನು ಸಿದ್ದರಾಮಯ್ಯ ಈ ಬಜೆಟ್ ಮೂಲಕ ಹೊರಿಸಿದ್ದಾರೆ. ಬರೋಬ್ಬರಿ 1,32,000 ಕೋಟಿ ರೂ.ಸಾಲ ಮಾಡಲಾಗಿದ್ದು, ರಾಜ್ಯದ ಒಟ್ಟು ಹೊಣೆಗಾರಿಕೆ 8,24,389 ಕೋಟಿ ರೂ.ಗೆ ಏರಿಕೆಯಾಗಿರುವುದು ಕಳವಳದ ಸಂಗತಿಯಾಗಿದ್ದು, ಬಂಡವಾಳ ವೆಚ್ಚವನ್ನು 74,682 ಕೋಟಿ ರೂ.ಗೆ ಇಳಿಕೆ ಮಾಡಲಾಗಿದೆ ಎಂದು ಕಿಡಿಕಾರಿದರು.

Siddaramaiah
ಕರ್ನಾಟಕ ಬಜೆಟ್ 2026: ಉರ್ದು ಶಾಲೆಗಳ ಅಭಿವೃದ್ಧಿಗೆ ಬರೋಬ್ಬರಿ 400 ಕೋಟಿ ಹೆಚ್ಚುವರಿ ಅನುದಾನ; ಮೌಲಾನಾ ಆಜಾದ್ ಸ್ಕೂಲ್ ಗಳ ಉನ್ನತೀಕರಣ!

'ಅಲ್ಪಸಂಖ್ಯಾತರಿಗೆ ಮಾತ್ರ ಬೊಕ್ಕಸದ ಪಾಲು'!: ತೇಜಸ್ವಿ ಸೂರ್ಯ

ಇನ್ನು ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿ ಸಿದ್ದರಾಮಯ್ಯ ಸರ್ಕಾರದ ಬಜೆಟ್ ಕುರಿತು ವ್ಯಂಗ್ಯ ಮಾಡಿದ್ದಾರೆ. 'ಮಾನ್ಯ ಮುಖ್ಯಮಂತ್ರಿಗಳೇ, ಇದು 'ಸರ್ವರಿಗೂ ಸಮಪಾಲು' ಅಲ್ಲ, ಕೇವಲ 'ಅಲ್ಪಸಂಖ್ಯಾತರಿಗೆ ಮಾತ್ರ ಬೊಕ್ಕಸದ ಪಾಲು'! ಅಲ್ಪಸಂಖ್ಯಾತರಿಗೆ ₹1000 ಕೋಟಿ ವೆಚ್ಚದಲ್ಲಿ ಶಾಲಾ ಉನ್ನತೀಕರಣ, ಆದರೆ ಹಿಂದೂಗಳ ದೇವಸ್ಥಾನದ ದುರಸ್ತಿಗೆ ಹಣವಿಲ್ಲವೇ?

ಅಲ್ಪಸಂಖ್ಯಾತ ನಿರುದ್ಯೋಗಿಗಳಿಗೆ ₹3 ಲಕ್ಷ ಸಹಾಯಧನ, ಆದ್ರೆ ಸಾಮಾನ್ಯ ವರ್ಗದ ನಿರುದ್ಯೋಗಿಗಳಿಗೆ ಬರಿ ಭರವಸೆಯ ಹುತ್ತವೇ? ಹುಬ್ಬಳ್ಳಿ-ಕಲಬುರಗಿಯಲ್ಲಿ ಹಜ್ ಭವನ ಕಟ್ಟುವ ನಿಮಗೆ, ಹಿಂದೂ ಧಾರ್ಮಿಕ ಕೇಂದ್ರಗಳ ಮೂಲಸೌಕರ್ಯ ನೆನಪಾಗುವುದೇ ಇಲ್ಲ! ಅಲ್ಪಸಂಖ್ಯಾತರಿಗೆ ಮೃಷ್ಟಾನ್ನ ಭೋಜನ, ಬಹುಸಂಖ್ಯಾತ ಹಿಂದೂಗಳಿಗೆ ಬಜೆಟ್‌ನಲ್ಲಿ ಶೂನ್ಯ ದರ್ಶನ!

ಮಾನ್ಯ ಸಿದ್ದರಾಮಯ್ಯ ನವರೇ, ನೀವು ಕೇವಲ ಒಂದು ಸಮುದಾಯದ ಮುಖ್ಯಮಂತ್ರಿಯೇ? ಬೊಕ್ಕಸದ ಬಹುಪಾಲನ್ನು ಒಂದು ನಿರ್ದಿಷ್ಟ ಸಮುದಾಯಕ್ಕೆ ಬರೆದುಕೊಡುತ್ತಿರುವ #SalaRamaiah ಅವರೇ, ನಿಮ್ಮ ಈ ಅತಿರೇಕದ ಓಲೈಕೆ ರಾಜಕಾರಣಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com