

ಬೆಂಗಳೂರು: ಸಿಎಂ ಸಿದ್ದರಾಮಯ್ಯ ದಾಖಲೆಯ 17ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದು ಮದ್ಯ ಪ್ರಿಯರಿಗೆ ಸುಂಕದ ಶಾಕ್ ನೀಡಿದ್ದಾರೆ. ಮದ್ಯದ ಮೇಲೆ ವಿಧಿಸುವ ತೆರಿಗೆಯ ಸ್ವರೂಪವನ್ನು ಬದಲಾಯಿಸುವ ಮೂಲಕ ರಾಜ್ಯದ ರಾಜಸ್ವ ಸಂಗ್ರಹವನ್ನು ಗಣನೀಯವಾಗಿ ಏರಿಕೆ ಮಾಡಲು ನಿರ್ಧರಿಸಿದ್ದಾರೆ. ಮದ್ಯದಲ್ಲಿರುವ ಆಲ್ಕೋಹಾಲ್ ಅಂಶ ಆಧರಿಸಿ ತೆರಿಗೆ ವಿಧಿಸಲಾಗುವುದು. ಎಕ್ಸ್-ಫ್ಯಾಕ್ಟರಿ ದರಪಟ್ಟಿಯ ಆಧಾರದ ಮೇಲೆ ಮದ್ಯದ ಬೆಲೆಯನ್ನು ಒಂದೇ ಬಾರಿಗೆ ಏರಿಸುವ ಬದಲು ಹಂತ ಹಂತವಾಗಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. 2026-27ರ ವೇಳೆಗೆ 45,000 ಕೋಟಿ ರೂ. ರಾಜಸ್ವ ಸಂಗ್ರಹಿಸುವ ಗುರಿ ಹೊಂದಲಾಗಿದೆ.
ಮದ್ಯಪಾನದ ದುಷ್ಪರಿಣಾಮಗಳು ಸಮಾಜದ ಮೇಲೆ ಉಂಟುಮಾಡುವ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ಮದ್ಯದ ಅಂಶಗಳನ್ನು (Alcohol-in-Beverage - AIB) ಆಧರಿಸಿದ ತೆರಿಗೆ ಪದ್ದತಿಯು gold standard ಆಗಿದೆ. ಏಪ್ರಿಲ್ 2026ರಿಂದ ಪಾನೀಯಗಳಲ್ಲಿ ಇರುವ ಮದ್ಯದ ಅಂಶವನ್ನು ಆಧಾರವಾಗಿಟ್ಟುಕೊಂಡು ಅಬಕಾರಿ ಸುಂಕ ವ್ಯವಸ್ಥೆಯನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ. ಅಬಕಾರಿ ಸುಂಕ ಏಕರೂಪವಾಗಿರಲಿದೆ. ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ, ಎಲ್ಲಾ ಪಾನೀಯಗಳ ಮೇಲೆ ಏಕರೂಪವಾಗಿ ಅನ್ವಯಿಸುವಂತೆ ಪ್ರತಿ ಲೀಟರ್‌ನಲ್ಲಿ ಮದ್ಯದ ಅಂಶವನ್ನು ಆಧರಿಸಿ ಅಬಕಾರಿ ಸುಂಕ ವಿಧಿಸುವ ಪ್ರಕ್ರಿಯೆಗೆ ಹಂತ ಹಂತವಾಗಿ ಪರಿವರ್ತನೆಗೊಳ್ಳಲಿದೆ ಎಂದು ಬಜೆಟ್ನಲ್ಲಿ ಘೋಷಿಸಲಾಗಿದೆ.
ಮಾರುಕಟ್ಟೆ ಪರಿಗಣನೆ ಆಧಾರದ ಮೇಲೆ ಮದ್ಯ ಉತ್ಪನ್ನಗಳನ್ನು ಸ್ಟ್ರಾಬ್‌ಗಳಲ್ಲಿ ಇರಿಸುವ ಅಧಿಕಾರವನ್ನು ಸಂಪೂರ್ಣವಾಗಿ ಉತ್ಪಾದಕರಿಗೆ ನೀಡಲಾಗುವುದು. ಮದ್ಯ ದರ ನಿಗದಿ ಸ್ಟ್ರಾಬ್‌ಗಳನ್ನು ತರ್ಕಬದ್ಧಗೊಳಿಸುವ ಸಲುವಾಗಿ ಪ್ರಸ್ತುತ ಇರುವ 16 ಸ್ಟ್ರಾಬ್‌ಗಳನ್ನು 8 ಫ್ಲ್ಯಾಬ್‌ಗಳಿಗೆ ಇಳಿಸಲು ತೀರ್ಮಾನಿಸಲಾಗಿದೆ. 2025-26ನೇ ಸಾಲಿನಲ್ಲಿ ಫೆಬ್ರವರಿ ತಿಂಗಳ ಅಂತ್ಯದವರೆಗೆ ಮದ್ಯದಿಂದ ಒಟ್ಟು 36,492 ಕೋಟಿ ರೂಪಾಯಿ ಸಂಗ್ರಹಿಸಿದೆ. ಕಳೆದ ಸಾಲಿಗೆ ಹೋಲಿಸಿದರೆ ಶೇ.12.7 ರಷ್ಟು ಬೆಳವಣಿಗೆಯಾಗಿದೆ. 2026-27 ಸಾಲಿಗೆ 45,000 ಕೋಟಿ ರೂ. ಸಂಗ್ರಹದ ಗುರಿ ಇಡಲಾಗಿದೆ.
ತೆರಿಗೆ ಸೋರಿಕೆಯನ್ನು ತಡೆಯಲು ತಂತ್ರಜ್ಞಾನ ಆಧಾರಿತ ಬ್ಲಾಕ್‌ಚೈನ್ ಡಿಜಿಟಲ್ ಟ್ರ್ಯಾಕಿಂಗ್ ವ್ಯವಸ್ಥೆಗಳನ್ನು ಜಾರಿಗೆ ತರಲಾಗುತ್ತದೆ. ಮದ್ಯ ರವಾನೆಗೆ ಬೆಂಗಾವಲು ವ್ಯವಸ್ಥೆಯ ಬದಲಿಗೆ ಜಿಯೋ-ಫೆನ್ಸ್ ಇ-ಲಾಕ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ಈ ಕ್ರಮಗಳು ಮೇಲ್ವಿಚಾರಣೆಗೆ ಅವಕಾಶ ಕಲ್ಪಿಸುವ ಮೂಲಕ ಪಾರದರ್ಶಕತೆಯನ್ನು ಹೆಚ್ಚಿಸಲಿದೆ.
Advertisement