

ಬೆಂಗಳೂರು: ಬ್ರಿಗೇಡ್ ಉಟೋಪಿಯಾ ಅಪಾರ್ಟ್‌ಮೆಂಟ್‌ನಲ್ಲಿ ನಾಯಿ ಮೂತ್ರವಿಸರ್ಜನೆ ಮಾಡಿದ ವಿಚಾರಕ್ಕೆ ಹಿರಿಯ ನಾಗರಿಕರು ಮತ್ತು ನಾಯಿ ಮಾಲೀಕನ ನಡುವೆ ಜಗಳ ಆರಂಭವಾಗಿ ವಿಕೋಪಕ್ಕೆ ತಿರುಗಿದ ಘಟನೆ ನಿನ್ನೆ ಸಾಯಂಕಾಲ ನಡೆದಿದ್ದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಎರಡೂ ಕಡೆಯವರು ನಂತರ ಪೊಲೀಸರಿಗೆ ದೂರು ಸಲ್ಲಿಸಿದ ಪ್ರಸಂಗ ನಡೆಯಿತು.
ವರ್ತೂರಿನಲ್ಲಿರುವ Brigade Utopia ಅಪಾರ್ಟ್ ಮೆಂಟಿನಲ್ಲಿ ತರುಣ್ ಅರೋರ ತಮ್ಮ ನಾಯಿಯನ್ನು ಹಿರಿಯ ನಾಗರಿಕರಿಗೆ ಮೀಸಲಾದ ಪಾದಚಾರಿಗಳ ದಾರಿಯ ಬಳಿ ನಡೆಸಿಕೊಂಡು ಹೋಗಿದ್ದರು. ಈ ವೇಳೆ ನಾಯಿ ಸಮೀಪದಲ್ಲೇ ಮೂತ್ರವಿಸರ್ಜನೆ ಮಾಡಿದುದರಿಂದ ಕೆಲವು ಹಿರಿಯ ನಾಗರಿಕರು ಅವರನ್ನು ಪ್ರಶ್ನಿಸಿದರು.
ಮಾತಿನ ಚಕಮಕಿ ತಕ್ಷಣವೇ ತಳ್ಳಾಟ, ನೂಕಾಟ ನಡೆದು ಹಲ್ಲೆಯೂ ನಡೆಯಿತು. ಸುಮಾರು 43 ಸೆಕೆಂಡ್‌ಗಳ ಸಿಸಿಟಿವಿ ದೃಶ್ಯದಲ್ಲಿ, ತರುಣ್ ಅರೋರಾ ಮತ್ತು ಮಹಿಳೆಯೊಬ್ಬರು ನೆಲಕ್ಕುರುಳಿರುವ ದೃಶ್ಯವೂ ಕಾಣಿಸುತ್ತದೆ.
ನಂತರ ತರುಣ್ ಅವರು ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಹಿರಿಯ ನಾಗರಿಕರು ತಮ್ಮ ಮೇಲೆ ದಾಳಿ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಮಹಿಳೆಯೂ ಪ್ರತಿದೂರು ನೀಡಿದ್ದು, ನಾಯಿಯ ವಿಚಾರವಾಗಿ ಪ್ರಶ್ನಿಸಿದಾಗ ತರುಣ್ ಅವರೇ ತಮ್ಮ ಮೇಲೆ ದಾಳಿ ನಡೆಸಿದರು ಎಂದು ಆರೋಪಿಸಿದ್ದಾರೆ.
ನಿಮಗೆ ಒಂದು ಗತಿ ಕಾಣಿಸುತ್ತೇನೆ, ನಿಮ್ಮನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಹೇಳಿ, ತಮ್ಮ ಜೀವಕ್ಕೆ ಭಯವಿದೆ ಎಂದು ಪೊಲೀಸ್ ರಕ್ಷಣೆ ಕೋರಿದ್ದಾರೆ.
ಅಪಾರ್ಟ್‌ಮೆಂಟ್‌ನಲ್ಲಿ ಆ ಪ್ರದೇಶವನ್ನು ಹಿರಿಯ ನಾಗರಿಕರಿಗೆ ಮಾತ್ರ ಮೀಸಲು ಮಾಡಲಾಗಿದೆ ಎಂಬ ನಿಯಮ ಇರುವ ಹಿನ್ನೆಲೆಯಲ್ಲಿ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.
ಈ ಘಟನೆ ಹೈರೈಸ್ ಅಪಾರ್ಟ್‌ಮೆಂಟ್‌ಗಳಲ್ಲಿ ಸಾಕು ಪ್ರಾಣಿಗಳು ಮತ್ತು ಹಂಚಿಕೆ ಬಳಕೆಯ ಸ್ಥಳಗಳ ಕುರಿತು ಉಂಟಾಗುವ ಉದ್ವಿಗ್ನತೆಗಳನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ.
Advertisement