

ಬೆಂಗಳೂರು: ರೈಲ್ವೆ ಇಲಾಖೆಯ ಗೂಡ್ಸ್ ಮ್ಯಾನೇಜರ್ ಮತ್ತು ಎಲ್ ಡಿಸಿ ಹುದ್ದೆಗಳಿಗಾಗಿ ಮಂಗಳವಾರ ನಡೆಸಬೇಕಿದ್ದ ಮುಂಬಡ್ತಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶ ನೀಡದ್ದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ನಡೆಸಿದ್ದರಿಂದ ರೈಲ್ವೆ ಇಲಾಖೆಯು ಇದೀಗ ಪರೀಕ್ಷೆಯನ್ನು ಮುಂದೂಡಿದೆ.
ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಮಾತ್ರ ಪರೀಕ್ಷೆ: 194 ಗೂಡ್ಸ್ ರೈಲು ಮ್ಯಾನೇಜರ್ ಹುದ್ದೆಗಳು ಹಾಗೂ ಹುಬ್ಬಳ್ಳಿ ವಿಭಾಗದಲ್ಲಿ ಎಲ್‌ಡಿಸಿಇ 101 ಹುದ್ದೆಗಳಿಗೆ ಮುಂಬಡ್ತಿ ನೀಡುವ ಸಂಬಂಧ ಇಂದು ನಡೆಯಬೇಕಿದ್ದ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ನೀಡದೆ ಕೇವಲ ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಮಾತ್ರ ಪರೀಕ್ಷೆ ನಡೆಸಲು ನೈರುತ್ಯ ರೈಲ್ವೇ ಇಲಾಖೆ ಮುಂದಾಗಿತ್ತು.
ಪರೀಕ್ಷೆ ಮುಂದೂಡಿಕೆ: ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು 'ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ವಿಭಾಗೀಯ ಕಚೇರಿ, ಹುಬ್ಬಳ್ಳಿ ಮತ್ತು ಬೆಂಗಳೂರು ಪರೀಕ್ಷಾ ಕೇಂದ್ರಗಳ ಬಳಿ ಪ್ರತಿಭಟನೆ ನಡೆಸಿದ್ದರಿಂದ ರೈಲ್ವೇ ಇಲಾಖೆಯು ದಿಢೀರನೇ ಪರೀಕ್ಷೆಯನ್ನು ರದ್ದುಪಡಿಸಿದೆ. ಈ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಖಂಡನೆ: ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದಿರುವ ಬಗ್ಗೆ ಈ ಮೊದಲೇ ಸಾವಿರಾರು ಕನ್ನಡಿಗ ಉದ್ಯೋಗಿಗಳು ಧ್ವನಿಯೆತ್ತಿದ್ದರು. ಶಾಂತ ರೀತಿಯ ಪ್ರತಿಭಟನೆಯನ್ನು, ಪ್ರತಿರೋಧವನ್ನು ನಿರ್ಲಕ್ಷಿಸುತ್ತಾ ಬಂದ ರೈಲ್ವೆ ಇಲಾಖೆ ಪರೀಕ್ಷೆ ಆರಂಭವಾಗುವ ಕೊನೆ ಕ್ಷಣದಲ್ಲಿ ರದ್ದುಮಾಡಿರುವುದು ಈಗಿನ ಗೊಂದಲಕ್ಕೆ ಕಾರಣವಾಗಿದೆ. ಪ್ರಾರಂಭದಲ್ಲಿಯೇ ರೈಲ್ವೆ ಇಲಾಖೆ ಎಚ್ಚೆತ್ತುಕೊಂಡು ತನ್ನ ತಪ್ಪನ್ನು ತಿದ್ದಿಕೊಂಡು ಕನ್ನಡದಲ್ಲಿ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟಿದ್ದರೆ ಈಗಿನ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದಿದ್ದಾರೆ.
ಸೋಮಣ್ಣ ಮಾತು ಕಡಿಮೆ ಮಾಡಿ ರಾಜ್ಯಕ್ಕೆ ಕೆಲಸ ಮಾಡಲಿ:
ಕನ್ನಡಿಗರಿಗೆ ಕೇಂದ್ರ ಸರ್ಕಾರದ ಪರೀಕ್ಷೆಗಳಲ್ಲಿ ಅನ್ಯಾಯವಾಗುತ್ತಿರುವುದು ಇದು ಮೊದಲ ಬಾರಿ ಅಲ್ಲ ಬಹುಷಃ ಕೊನೆಯದ್ದೂ ಅಲ್ಲ. ಕೇಂದ್ರದ ವಿವಿಧ ಇಲಾಖೆಗಳ ಉದ್ಯೋಗ ಭರ್ತಿಯಲ್ಲಿ ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ಕುಟಿಲತನದಿಂದಾಗಿ ಕನ್ನಡಿಗ ಉದ್ಯೋಗಾಕಾಂಕ್ಷಿಗಳು ಮೊದಲಿಂದಲೂ ಅನ್ಯಾಯಕ್ಕೆ ತುತ್ತಾಗುತ್ತಾ ಬಂದಿದ್ದಾರೆ.ಇದರ ವಿರುದ್ಧ ಕನ್ನಡಿಗರು ನ್ಯಾಯಕ್ಕಾಗಿ ಧ್ವನಿಯೆತ್ತುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಕನ್ನಡಿಗರಾದ ವಿ.ಸೋಮಣ್ಣನವರು ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿರುವಾಗಲೇ ರೈಲ್ವೆ ಇಲಾಖೆ ಕನ್ನಡ ವಿರೋಧಿ ನಿಲುವು ತಳೆದು ಕನ್ನಡ, ಕರ್ನಾಟಕ ಮತ್ತು ಕನ್ನಡಿಗರಿಗೆ ಅನ್ಯಾಯ ಮಾಡಿರುವುದು ಅತ್ಯಂತ ದುರದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮಣ್ಣನವರು ಕನ್ನಡಿಗರ ಪರವಾಗಿ ನಿಂತು ಅನ್ಯಾಯವನ್ನು ಸರಿಪಡಿಸುತ್ತಾರೆ ಎಂಬ ಭರವಸೆಯನ್ನು ಇಟ್ಟುಕೊಂಡಿದ್ದೆ, ಆ ನಂಬಿಕೆ ಹುಸಿಯಾಗಿದೆ. ಸೋಮಣ್ಣನವರು ಮಾತನಾಡಲು ಶುರು ಮಾಡಿದರೆ ರೈಲ್ವೆ ಇಲಾಖೆ ಇರುವುದೇ ಕರ್ನಾಟಕಕ್ಕಾಗಿ ಎನ್ನುವಂತೆ ಮಾತಿನ ಅರಮನೆ ಕಟ್ಟುತ್ತಾರೆ. ಅವರು ಮಾತು ಸ್ವಲ್ಪ ಕಡಿಮೆಮಾಡಿ ಕರ್ನಾಟಕಕ್ಕಾಗಿ ಮಾಡಬೇಕಾದ ಕೆಲಸವನ್ನು ನಿಷ್ಠೆಯಿಂದ ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಭಾಷಾ ದಬ್ಬಾಳಿಕೆ ಸಹಿಸುವುದಿಲ್ಲ:
ಕೇಂದ್ರ ಸರ್ಕಾರಕ್ಕೆ ಹಿಂದಿ ಭಾಷೆ ಮೇಲೆ ಇರುವ ಪ್ರೀತಿ ಮತ್ತು ಕನ್ನಡವೂ ಸೇರಿದಂತೆ ರಾಜ್ಯಭಾಷೆಗಳ ಮೇಲೆ ಇರುವ ತಾತ್ಸಾರ ಮನೋಭಾವದ ದುಷ್ಪರಿಣಾಮವನ್ನು ಕನ್ನಡಿಗರು ಈಗಾಗಲೇ ಅನುಭವಿಸಿದ್ದಾರೆ. ಉತ್ತರ ಭಾರತದ ಹಿಂದಿ ಭಾಷಿಗರಿಗೆ ನೆರವಾಗಬೇಕೆಂಬ ಏಕೈಕ ಉದ್ದೇಶದಿಂದ ಕೇಂದ್ರದ ಪರೀಕ್ಷೆಗಳಲ್ಲಿ ಹಿಂದಿ ಮತ್ತು ಇಂಗ್ಲೀಷ್ ಗೆ ಮಾತ್ರ ಅವಕಾಶ ನೀಡುವ ಕೇಂದ್ರದ ಭಾಷಾ ದಬ್ಬಾಳಿಕೆಯನ್ನು ಸಹಿಸಲು ಸಾಧ್ಯವೇ ಇಲ್ಲ. ನಾವು ಹಿಂದಿಯನ್ನು ಭಾಷೆಯಾಗಿ ವಿರೋಧಿಸುವುದಿಲ್ಲ, ಹಿಂದಿಯನ್ನು ಕನ್ನಡದ ಮೇಲೆ ಹೇರುವುದನ್ನು ಮಾತ್ರ ಖಂಡಿತ ಸಹಿಸುವುದಿಲ್ಲ. ಆಳುವ ಪಕ್ಷದ ಸಂಸದರು ಪಕ್ಷದ ಮುಲಾಜಿಗೆ ಬಿದ್ದು ಕನ್ನಡಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತದೆ ಬಾಯಿ ಮುಚ್ಚಿಕೊಂಡಿರಬಹುದು, ಆದರೆ ಕನ್ನಡಿಗರು ಜಾಗೃತರಾಗಿದ್ದಾರೆ ಎಂದಿದ್ದಾರೆ.
ಕನ್ನಡಿಗರು ಉದ್ಯೋಗಕ್ಕಾಗಿ, ಭಡ್ತಿಗಾಗಿ ಕೇಂದ್ರದ ಮುಂದೆ ಭಿಕ್ಷೆಗೆ ನಿಂತಿಲ್ಲ, ತಾವು ಶಿಕ್ಷಣ ಪಡೆದ ಭಾಷೆಯಲ್ಲೇ ತಮ್ಮ ಹಕ್ಕಿನ ಉದ್ಯೋಗ ಭಡ್ತಿಯನ್ನು ಕೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕನ್ನಡ ಭಾಷಿಗರಿಗೆ ಭಾಷೆಯ ಹೆಸರಲ್ಲಿ ಅನ್ಯಾಯವಾಗದಂತೆ ಕೇಂದ್ರ ಸರ್ಕಾರ ನೋಡಿಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಅವರೇ ಮಧ್ಯೆಪ್ರವೇಶಿಸಿ ಸಂಬಂಧಿತ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ರದ್ದುಪಡಿಸಲಾದ ರೈಲ್ವೆ ಇಲಾಖೆಯ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯಲು ಅವಕಾಶ ಕಲ್ಪಿಸಿ ಶೀಘ್ರದಲ್ಲಿಯೇ ನಡೆಸಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
Advertisement