

ಶಿರಸಿ (ಉತ್ತರ ಕನ್ನಡ): ಆಟವಾಡುತ್ತಿದ್ದ ಎರಡು ವರ್ಷದ ಪುಟ್ಟ ಮಗುವೊಂದು ಆಕಸ್ಮಿಕವಾಗಿ 50 ಅಡಿ ಆಳದ ಬಾವಿಗೆ ಬಿದ್ದಿದ್ದು, ಈ ವೇಳೆ ಸ್ಥಳೀಯ ವ್ಯಕ್ತಿಯೊಬ್ಬರು ಜೀವದ ಹಂಗು ತೊರೆದು ಮಗುವನ್ನು ರಕ್ಷಣೆ ಮಾಡಿದ್ದಾರೆ.
ಭುವಿ (2) ಎಂಬ ಬಾಲಕಿ ಮನೆಯ ಬಳಿ ಆಟವಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಬಾವಿಗೆ ಬಿದ್ದಿದ್ದಾಳೆ. ಮನೆಯವರೆಲ್ಲರೂ ಕೆಲಸದಲ್ಲಿ ಮಗ್ನರಾಗಿದ್ದಾಗ, ಮಗು ಆಟವಾಡುತ್ತಾ ಮುಂಭಾಗದಲ್ಲಿದ್ದ ತೆರೆದ ಬಾವಿಗೆ ಬಿದ್ದಿದೆ. ಮಧ್ಯಾಹ್ನ ಊಟದ ಸಮಯದಲ್ಲಿ ಮಗು ಕಾಣದಿದ್ದಾಗ ಆತಂಕಗೊಂಡ ಮನೆಯವರು ಸುತ್ತಮುತ್ತ ಹುಡುಕಾಡಿದ್ದಾರೆ. ಬಾವಿಯಲ್ಲಿ ಮಗುವಿನ ಅಳುವಿನ ಶಬ್ದ ಕೇಳಿಬಂದಾಗ ಮನೆಯವರ ಎದೆಬಡಿತ ಜೋರಾಗಿದೆ.
ಮಗು ಬಾವಿಗೆ ಬಿದ್ದ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ನಿವಾಸಿ ಹಾಗೂ ಸಮಾಜ ಸೇವಕರಾಗಿ ಗುರುತಿಸಿಕೊಂಡಿರುವ ಪಯ್ಯು ಚವಟಿ ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಸುಮಾರು 50 ಅಡಿ ಆಳವಿದ್ದ ಕಗ್ಗತ್ತಲ ಬಾವಿಗೆ ಹಗ್ಗದ ಸಹಾಯದಿಂದ ಪ್ರಾಣದ ಹಂಗು ತೊರೆದು ಇಳಿದಿದ್ದಾರೆ.
ಬಾವಿಯ ಒಳಗಿದ್ದ ಮೋಟಾರ್ ಪೈಪ್‌ಗೆ ಮಗುವಿನ ಬಟ್ಟೆ ಸಿಲುಕಿಕೊಂಡಿದ್ದರಿಂದ, ಮಗು ನೀರಿನಲ್ಲಿ ಮುಳುಗದೇ ಪೈಪ್ ಆಸರೆಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಸಾವಿನೊಂದಿಗೆ ಹೋರಾಡುತ್ತಿತ್ತು. ಪಯ್ಯ ಅವರು ಜಾಗರೂಕತೆಯಿಂದ ಮಗುವನ್ನು ಎತ್ತಿಕೊಂಡು ಸುರಕ್ಷಿತವಾಗಿ ಹೊರಬಂದಿದ್ದಾರೆ.
ಅಷ್ಟು ಎತ್ತರದಿಂದ ಬಿದ್ದಿದ್ದರೂ ಮಗುವಿಗೆ ಸಣ್ಣ ಗಾಯವೂ ಆಗದಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಮಗು ಸುರಕ್ಷಿತವಾಗಿ ಮೇಲೆ ಬರುತ್ತಿದ್ದಂತೆಯೇ ಅಜ್ಜಿ ಜಯಮ್ಮ ಹಾಗೂ ಕುಟುಂಬಸ್ಥರು ಭಾವುಕರಾಗಿ ಕಣ್ಣೀರು ಹಾಕಿದರು. ಈ ನಡುವೆ ಮಗುವನ್ನು ರಕ್ಷಿಸಿದ ಪಯ್ಯು ಚವಟಿ ಅವರ ಸಾಹಸಕ್ಕೆ ಇಡೀ ನಗರದಾದ್ಯಂತ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.
“ನಾನು ಬೆಂಗಳೂರಿಗೆ ಹೋಗಲು ಸಿದ್ಧವಾಗುತ್ತಿದ್ದೆ. ಮಹಿಳೆಯರ ಕಿರುಚಾಟ ಕೇಳಿ ಸ್ಥಳಕ್ಕೆ ಹೋದೆ. ಒಂದು ಕ್ಷಣವೂ ಯೋಚಿಸದೆ ಬಾವಿಗೆ ಇಳಿದೆ. ಏನಾದರೂ ಅನಾಹುತವಾಗಿದ್ದರೆ ನನ್ನನ್ನು ನಾನೇ ಕ್ಷಮಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಪಯ್ಯು ಚವಟಿಯವರು ಹೇಳಿದ್ದಾರೆ.
ಈ ಸಾಹಸ ಕಾರ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚವಟಿ ಅವರ ಧೈರ್ಯ ಮತ್ತು ಮಾನವೀಯತೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
ಚವಟಿ ಅವರು ‘ಸರಿಕಾ ಸೇವಾ ಸಮಿತಿ’ ಎಂಬ ಸಂಸ್ಥೆಯ ಮೂಲಕ ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದು, ಈ ಘಟನೆ ಅವರ ಸೇವಾ ಮನೋಭಾವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
Advertisement