ಬೆಂಗಳೂರಿಗರಿಗೆ ಗುಡ್ ನ್ಯೂಸ್: ನೀರಿನ ಬಿಲ್ ಬಾಕಿ ಪಾವತಿಗೆ ಸುವರ್ಣಾವಕಾಶ, BWSSBಯಿಂದ OTS ಯೋಜನೆ ಜಾರಿ..!
ಬೆಂಗಳೂರು: ಬೆಂಗಳೂರಿಗರಿಗೆ ಬೆಂಗಳೂರು ಜಲಮಂಡಳಿ ಸಿಹಿ ಸುದ್ದಿಯೊಂದನ್ನು ನೀಡಿದೆ. ದೀರ್ಘಕಾಲದಿಂದ ನೀರಿನ ಬಿಲ್ ಬಾಕಿ (Bengaluru Water Bill Relief) ಉಳಿಸಿಕೊಂಡಿರುವ ಗ್ರಾಹಕರಿಗೆ ಅನುಕೂಲ ಕಲ್ಪಿಸಲು, ಒನ್ ಟೈಮ್ ಸೆಟಲ್‌ಮೆಂಟ್ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ.
ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಈ ಬಗ್ಗೆ ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.
ಬೆಂಗಳೂರು ನಗರದ ಜನರಿಗೆ ಅನುಕೂಲ ಮಾಡಿಕೊಡಲು ಬಾಕಿ ಉಳಿಸಿಕೊಂಡಿರುವ ಬಿಲ್ ನ ಅಸಲು ಪಾವತಿಸಿದಲ್ಲಿ ಬಡ್ಡಿಯನ್ನು ಮನ್ನಾ ಮಾಡಲಾಗುವುದು ಎಂದು ಹೇಳಿದ್ದಾರೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯಾಪ್ತಿಯಲ್ಲಿರುವ ಸುಮಾರು 11 ಲಕ್ಷ ನೀರಿನ ಸಂಪರ್ಕಗಳ ಪೈಕಿ, 5.11 ಲಕ್ಷ ಗ್ರಾಹಕರು ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. 2026ರ ಫೆಬ್ರವರಿ ಅಂತ್ಯದ ಮಾಹಿತಿಯಂತೆ, ಒಟ್ಟು ಬಾಕಿ ಮೊತ್ತ ರೂ. 851.33 ಕೋಟಿಗಳಾಗಿದ್ದು, ಇದರಲ್ಲಿ ಅಸಲು ಮೊತ್ತ ರೂ. 539.43 ಕೋಟಿ ಹಾಗೂ ಬಡ್ಡಿ ರೂ. 311.90 ಕೋಟಿ ಸೇರಿದೆ.
ಬಾಕಿಯನ್ನು ಸುಲಭವಾಗಿ ಪಾವತಿಸಲು ಹಾಗೂ ಗ್ರಾಹಕರ ಮೇಲಿನ ಆರ್ಥಿಕ ಹೊರೆ ತಗ್ಗಿಸಲು, ಏಪ್ರಿಲ್ 2026 ರಿಂದ ಜೂನ್ 2026 ರವರೆಗೆ (3 ತಿಂಗಳ ಅವಧಿ) ಈ ಒಟಿಎಸ್ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಯೋಜನೆಯು ಗೃಹ, ವಾಣಿಜ್ಯ, ಕೈಗಾರಿಕಾ ವಲಯ ಸೇರಿದಂತೆ ಜಲಮಂಡಳಿಯ ಎಲ್ಲ ವರ್ಗದ ಗ್ರಾಹಕರಿಗೂ ಅನ್ವಯವಾಗಲಿದೆ. ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳ ಬಾಕಿಗಳಿಗೂ ಲೆಕ್ಕಪತ್ರ ಸಮನ್ವಯದ ಮೂಲಕ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಹೇಳಿದ್ದಾರೆ.
ಗ್ರಾಹಕರಿಗೆ ಮಾಹಿತಿ ಒದಗಿಸುವ ಹಾಗೂ ಪಾವತಿ ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸುವ ನಿಟ್ಟಿನಲ್ಲಿ, ಜಲಮಂಡಳಿ ವತಿಯಿಂದ ಪ್ರತಿ ಬಾಕಿದಾರರಿಗೆ ಅವರ ಆರ್'ಆರ್ ಸಂಖ್ಯೆ, ಅಸಲು ಮೊತ್ತ, ಮನ್ನಾ ಆಗುವ ಬಡ್ಡಿ ಮೊತ್ತ ಹಾಗೂ ಪಾವತಿಸಬೇಕಾದ ಅಂತಿಮ ಮೊತ್ತದ ವಿವರಗಳನ್ನು ಒದಗಿಸಲಾಗುವುದು. ಗ್ರಾಹಕರು ಬಿಡಬ್ಲ್ಯೂಎಸ್ಎಸ್ಬಿ ಕಿಯೋಸ್ಕ್, ಆನ್‌ಲೈನ್ ಪೋರ್ಟಲ್ ಹಾಗೂ ವಿವಿಧ ಡಿಜಿಟಲ್ ಪಾವತಿ ವಿಧಾನಗಳ ಮೂಲಕ ಸುಲಭವಾಗಿ ಹಣ ಪಾವತಿಸಬಹುದು.
ನಗರದ 5.11 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಆರ್ಥಿಕ ನೆರವು ನೀಡುವ ಹಾಗೂ ಮಂಡಳಿಯ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ದ್ವಿಮುಖ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಸಾರ್ವಜನಿಕರು ಮುಂಬರುವ 3 ತಿಂಗಳ ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಡಿ.ಕೆ. ಶಿವಕುಮಾರ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

