

ಗದಗ: ನೀರು ಕುಡಿದ ವಿಚಾರಕ್ಕೆ ಎರಡು ಸಮುದಾಯ (ವಾಲ್ಮೀಕಿ - ಎಸ್‌ಸಿ) ಗಳ ನಡುವೆ ಉದ್ಭವಿಸಿದ ವಾಗ್ವಾದ ತಾರಕಕ್ಕೇರಿ ಪರಸ್ಪರ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ನಂತರ ನಡೆದ ಕಲ್ಲು ತೂರಾಟದಲ್ಲಿ 15 ಮಂದಿ ಗಾಯಗೊಂಡಿರುವ ಘಟನೆಯೊಂದು ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ವಾಲ್ಮೀಕಿ ಸಮುದಾಯಕ್ಕೆ ಸೇರಿದ ರೈತನ ಜಮೀನಿನಲ್ಲಿ ಯುವಕನೊಬ್ಬ ನೀರು ಕುಡಿದಿದ್ದಾನೆ. ನೀರು ಕುಡಿದ ವ್ಯಕ್ತಿ ಎಸ್‌ಸಿ ಸಮುದಾಯಕ್ಕೆ ಸೇರಿದವನಾಗಿದ್ದಾನೆ ಎಂಬ ಕಾರಣಕ್ಕೆ ರೈತ ಆಕ್ಷೇಪ ವ್ಯಕ್ತಪಡಿಸಿದ್ದಾನೆ ಎನ್ನಲಾಗಿದೆ.
ಈ ವಿಚಾರ ಊರಿನಲ್ಲೆಲ್ಲ ಹರಡಿದ್ದು, ನಂತರ ಎರಡು ಸಮುದಾಯಗಳ ನಡುವೆ ತೀವ್ರ ವಾಗ್ವಾದ ಶುರುವಾಗಿದೆ. ಬಳಿಕ ಈ ವಾಗ್ವಾದ ಗಲಾಟೆಗೆ ತಿರುಗಿ, ಎರಡೂ ಗುಂಪಿನವರು ಪರಸ್ಪರ ಹೊಡೆದಾಡಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಘರ್ಷಣೆಯಲ್ಲಿ ಎರಡೂ ಸಮುದಾಯಗಳ 15 ಮಂದಿ ಗಾಯಗೊಂಡಿದ್ದು, ಗಾಯಗೊಂಡವರಲ್ಲಿ ಕೆಲವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಉಳಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಮುಂಡರಗಿ ಪೊಲೀಸರು ತಕ್ಷಣ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಂತೆ ಇದೀಗ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಂಡಿದ್ದಾರೆ.
ಈ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಮಾತನಾಡಿ, “ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದೇವೆ. ಮುಂದಿನ ಎರಡು ದಿನಗಳ ಕಾಲ ಕಟ್ಟುನಿಟ್ಟಿನ ನಿಗಾವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮತ್ತೆ ಯಾವುದೇ ಘರ್ಷಣೆ ನಡೆಯದಂತೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
Advertisement