

ಹಾಸನ: ದೇವಸ್ಥಾನದ ಬಳಿ ಪ್ರೀ ವೆಡ್ಡಿಂಗ್ ಶೂಟಿಂಗ್ ನಡೆಸುತ್ತಿದ್ದ ಫೋಟೋಗ್ರಾಫರ್‌ಗಳ ಮೇಲೆ ಸ್ಥಳೀಯ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಸಕಲೇಶಪುರದ ಬೆಟ್ಟದ ಬೈರವೇಶ್ವರ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ದೇವಾಲಯದ ಆವರಣದಲ್ಲಿ ನಿಯಮ ಉಲ್ಲಂಘಿಸಿ ಚಪ್ಪಲಿ, ಶೂಧರಿಸಿ ಫೋಟೋಶೂಟ್ ಮಾಡಿದ್ದೇ ಸ್ಥಳೀಯರ ಆಕ್ರೋಶಕ್ಕೆ ಕಾರಣ ಎಂದು ಹೇಳಲಾಗಿದೆ.
ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕೇಂದ್ರವಾದ ಸಕಲೇಶಪುರದ ಬೆಟ್ಟದ ಭೈರವೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟ್‌ಗಾಗಿ ಬಂದಿದ್ದ ತಂಡದ ಮೇಲೆ ಸ್ಥಳೀಯ ಯುವಕರು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ವರದಿಗಳ ಪ್ರಕಾರ ಫೋಟೋಗ್ರಾಫರ್‌ಗಳ ತಂಡವು ಮುಂಜಾನೆಯೇ ಇಲ್ಲಿನ ಬೆಟ್ಟದ ಭೈರವೇಶ್ವರ ದೇವಸ್ಥಾನಕ್ಕೆ ಆಗಮಿಸಿ ಚಿತ್ರೀಕರಣದಲ್ಲಿ ತೊಡಗಿತ್ತು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಸ್ಥಳೀಯ ಯುವಕರ ಗುಂಪೊಂದು, "ಇಲ್ಲಿ ಚಿತ್ರೀಕರಣ ಮಾಡಲು ನಿಮಗೆ ಯಾರು ಅನುಮತಿ ನೀಡಿದ್ದಾರೆ?" ಎಂದು ಪ್ರಶ್ನಿಸಿದೆ.
ತಾವು ಪ್ರವಾಸಿಗರಾಗಿದ್ದು, ಸಾರ್ವಜನಿಕ ದೇವಸ್ಥಾನದ ಆವರಣದಲ್ಲಿ ಫೋಟೋ ತೆಗೆಯಲು ವಿಶೇಷ ಅನುಮತಿಯ ಅಗತ್ಯವಿಲ್ಲ ಎಂದು ಫೋಟೋಗ್ರಾಫರ್‌ಗಳು ಸಮರ್ಥಿಸಿಕೊಂಡಿದ್ದಾರೆ. ಈ ವೇಳೆ ಆರಂಭವಾದ ಮಾತಿನ ಚಕಮಕಿ ನೋಡನೋಡುತ್ತಿದ್ದಂತೆಯೇ ವಿಕೋಪಕ್ಕೆ ತಿರುಗಿದೆ.
ಸ್ಥಳೀಯರು ಎಂದು ಹೇಳಿಕೊಂಡ ಗುಂಪು ಫೋಟೋಗ್ರಾಫರ್‌ಗಳ ಮೇಲೆ ಏಕಾಏಕಿ ಹಲ್ಲೆ ನಡೆಸಲು ಮುಂದಾಗಿದೆ. 'ಯಾಕಪ್ಪ ಹೊಡಿತಾ ಇದ್ದೀರಿ? ನಮ್ಮ ತಪ್ಪೇನಿದೆ?' ಎಂದು ಫೋಟೋಗ್ರಾಫರ್‌ಗಳು ಅಸಹಾಯಕತೆಯಿಂದ ಪ್ರಶ್ನಿಸಿದರೂ ಕೇಳದ ಉದ್ರಿಕ್ತ ಗುಂಪು, ಗೂಂಡಾಗಿರಿ ಪ್ರದರ್ಶಿಸಿ ಅವರ ಮೇಲೆ ಹಿಗ್ಗಾಮುಗ್ಗಾ ಕೈ ಮಾಡಿದೆ ಎನ್ನಲಾಗಿದೆ.
ಪರಸ್ಪರ ಪೊಲೀಸ್ ದೂರು
ಹಲ್ಲೆಯ ಬಳಿಕ ಎರಡೂ ಕಡೆಯವರು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಧಾವಿಸಿದ್ದು, ಪರಸ್ಪರ ದೂರು ನೀಡಿದ್ದಾರೆ. ಫೋಟೋಗ್ರಾಫರ್‌ಗಳು ತಮಗೆ ಅನ್ಯಾಯವಾಗಿ ಹೊಡೆದಿದ್ದಾರೆ ಎಂದು ದೂರಿದ್ದಾರೆ. ಆದರೆ, ಸ್ಥಳೀಯರು ತಾವು ಹಲ್ಲೆ ಮಾಡುವುದಕ್ಕೆ ಕಾರಣವೇನು ಎಂದು ರಿವೀಲ್ ಮಾಡಿದ್ದಾರೆ.
ಈ ಪ್ರಸಿದ್ಧ ದೇವಸ್ಥಾನದ ಬಳಿ ನಿಯಮ ಎಲ್ಲಿಂದಲೋ ಬರುವ ಫೋಟೋ ಶೂಟ್ ಮಾಡಿಸಿಕೊಳ್ಳುವವರು ಇಲ್ಲಿನ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಇನ್ನು ಫೋಟೋಗ್ರಾಫರ್‌ಗಳಿಗೆ ನಿಯಮ ಪಾಲನೆಗೆ ಹೇಳಿದರೂ ಕೇಳದೆ ಪುನಃ ಹೊಸ ಆರ್ಡರ್‌ಗಳನ್ನು ತೆಗೆದುಕೊಂಡು ವಾಪಸ್ ಇಲ್ಲಿಗೇ ಬರುತ್ತಾರೆ ಎಂದು ಆರೋಪಿಸಿದ್ದಾರೆ.
ದೇಗುಲದಲ್ಲಿ ಚಪ್ಪಲಿ ಧರಿಸಿ ಪ್ರವೇಶ
ಹಲ್ಲೆಗೆ ಒಳಗಾದ ಫೋಟೋಗ್ರಾಫರ್‌ಗಳು ಹೊಸ ಜೋಡಿಗಳಿಗೆ ದೇವಾಲಯ ಆವರಣದಲ್ಲಿ ಚಪ್ಪಲಿ ಹಾಗೂ ಶೂ ಹಾಕಿಕೊಂಡು ಫೋಟೋ ಶೂಟಿಂಗ್ ಮಾಡಿಸುತ್ತಿದ್ದರು ಎಂದು ಆರೋಪಿಸಿದ್ದಾರೆ. ಹೀಗಾಗಿ, ಹಲ್ಲೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
Advertisement