ಸರ್ಕಾರಿ ಶಾಲೆಗಳ ಸುಧಾರಣೆಗೆ ಸರ್ಕಾರ ಕ್ರಮ: 8 ಗ್ಯಾರಂಟಿ ಘೋಷಣೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ಈ ಯೋಜನೆ ರೂಪುಗೊಂಡಿದ್ದು, ಶಿಕ್ಷಕರ ಕೊರತೆ, ಮೂಲಸೌಕರ್ಯಗಳ ಅಭಾವ ಮತ್ತು ಹಳೆಯ ಬೋಧನಾ ವಿಧಾನಗಳಂತಹ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಒತ್ತು ನೀಡಲಾಗಿದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಎಸ್‌ಎಸ್‌ಎಲ್‌ಸಿಯಲ್ಲಿ ಇತ್ತೀಚಿನ ದಾಖಲೆ ಫಲಿತಾಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ರಾಜ್ಯದ ಸರ್ಕಾರಿ ಶಾಲಾ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಸಾರ್ವಜನಿಕ ಶಿಕ್ಷಣದ ಮೇಲೆ ಜನರ ವಿಶ್ವಾಸವನ್ನು ಪುನಃಸ್ಥಾಪಿಸಲು ಉದ್ದೇಶಿಸಿ ಎಂಟು ಭರವಸೆಗಳ ಸಮಗ್ರ ಪ್ಯಾಕೇಜ್ ನ್ನು ಘೋಷಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ಈ ಯೋಜನೆ ರೂಪುಗೊಂಡಿದ್ದು, ಶಿಕ್ಷಕರ ಕೊರತೆ, ಮೂಲಸೌಕರ್ಯಗಳ ಅಭಾವ ಮತ್ತು ಹಳೆಯ ಬೋಧನಾ ವಿಧಾನಗಳಂತಹ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಒತ್ತು ನೀಡಲಾಗಿದೆ. ಸರ್ಕಾರಿ ಶಾಲೆಗಳನ್ನು ಖಾಸಗಿ ಸಂಸ್ಥೆಗಳೊಂದಿಗೆ ಸ್ಪರ್ಧಾತ್ಮಕವಾಗಿಸಲು ಇದು ಮಹತ್ವದ ಹೆಜ್ಜೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಧಾರಣೆಗಳ ಕೇಂದ್ರಬಿಂದುವಾಗಿ ಶಿಕ್ಷಕರ ಕೊರತೆಯನ್ನು ನಿವಾರಿಸುವ ದೃಢನಿಶ್ಚಯವನ್ನು ಸರ್ಕಾರ ಹೊಂದಿದೆ. ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ 5ನೇ ತರಗತಿವರೆಗೆ ಪ್ರತಿಯೊಂದು ತರಗತಿಗೆ ಒಬ್ಬ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ ಎಂದು ಸರ್ಕಾರ ಹೇಳಿದೆ. 6ನೇ ತರಗತಿಯಿಂದ ವಿಷಯವಾರು ಪರಿಣತ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ. ಇದರಿಂದ ಒಬ್ಬ ಶಿಕ್ಷಕರು ಹಲವು ತರಗತಿಗಳನ್ನು ನೋಡಿಕೊಳ್ಳುವ ಸಮಸ್ಯೆಗೆ ಪರಿಹಾರ ಸಿಗಲಿದೆ.

ಪೋಷಕರ ಬೇಡಿಕೆಗೆ ಸ್ಪಂದಿಸಿ, ಬೋಧನಾ ಮಾಧ್ಯಮದಲ್ಲಿ ಗುಣಮಟ್ಟ ಹೆಚ್ಚಿಸುವ ಭರವಸೆ ನೀಡಲಾಗಿದೆ. ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣವನ್ನು ಲಭ್ಯವಾಗುವಂತೆ ಮಾಡಲಾಗುತ್ತದೆ. ಉತ್ತಮ ಗುಣಮಟ್ಟದಲ್ಲಿ ಬೋಧನೆ ನೀಡಲು ಶಿಕ್ಷಕರಿಗೆ ವಿಶೇಷ ತರಬೇತಿಯನ್ನು ಈಗಾಗಲೇ ನೀಡಲಾಗುತ್ತಿದೆ. ಸುಮಾರು 900 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳಾಗಿ (KPS) ಮೇಲ್ದರ್ಜೆಗೆ ಏರಿಸಲಾಗುತ್ತಿದ್ದು, ಇಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬೋಧನೆ ನಡೆಯಲಿದೆ.

ಈ ಸುಧಾರಣಾ ಪ್ಯಾಕೇಜ್ ವಿದ್ಯಾರ್ಥಿಗಳನ್ನು ಡಿಜಿಟಲ್ ಭವಿಷ್ಯಕ್ಕೆ ಸಿದ್ಧಪಡಿಸುವತ್ತವೂ ಗಮನ ಹರಿಸಿದೆ. 1ನೇ ತರಗತಿಯಿಂದ ಹಂತ ಹಂತವಾಗಿ ಕಂಪ್ಯೂಟರ್ ಶಿಕ್ಷಣವನ್ನು ಪರಿಚಯಿಸಲಾಗುತ್ತದೆ, 3ನೇ ತರಗತಿಯಿಂದ ಕೃತಕ ಬುದ್ಧಿಮತ್ತೆಯ ಮೂಲಭೂತ ಅರಿವು ನೀಡಲಾಗುತ್ತದೆ. ಈ ಪರಿವರ್ತನೆಗೆ ಬೆಂಬಲವಾಗಿ ಎಲ್ಲಾ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳಲ್ಲಿ ಕಂಪ್ಯೂಟರ್ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ.

ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೂ ಮಹತ್ವ ನೀಡಲಾಗಿದೆ. ದೈಹಿಕ ಶಿಕ್ಷಣ, ಕಲೆ ಮತ್ತು ಸಂಗೀತಕ್ಕೆ ವಿಶೇಷ ಶಿಕ್ಷಕರನ್ನು ಈ ವರ್ಷದಲ್ಲೇ ನೇಮಕ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ. ಶಿಕ್ಷಕರು ಸಂಪೂರ್ಣವಾಗಿ ಬೋಧನೆಗೆ ಗಮನಹರಿಸಲು ಆಡಳಿತಾತ್ಮಕ ಕಾರ್ಯಗಳನ್ನು ನೋಡಿಕೊಳ್ಳಲು ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಲಾಗುತ್ತದೆ.

ಇದಲ್ಲದೆ, ನಿರಂತರ ವಿದ್ಯಾರ್ಥಿ ಮೌಲ್ಯಮಾಪನ ಮತ್ತು ಪೋಷಕರ ಭಾಗವಹಿಸುವಿಕೆಗೆ ಒತ್ತು ನೀಡಲಾಗಿದೆ. ಬೋಧನೆ ಆಧಾರಿತ ಮೌಲ್ಯಮಾಪನ ವ್ಯವಸ್ಥೆಯ ಮೂಲಕ ವಿದ್ಯಾರ್ಥಿಗಳ ಪ್ರಗತಿಯನ್ನು ಗಮನಿಸಲಾಗುತ್ತದೆ. ಎರಡು ತಿಂಗಳಿಗೆ ಒಮ್ಮೆ ಪೋಷಕ-ಶಿಕ್ಷಕರ ಸಭೆಗಳನ್ನು ನಡೆಸಿ ನಿಯಮಿತ ಪ್ರತಿಕ್ರಿಯೆ ಪಡೆಯಲಾಗುತ್ತದೆ.

6ನೇ ತರಗತಿಯಿಂದ ಕೌಶಲ್ಯಾಧಾರಿತ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಪರಿಚಯಿಸುವ ಯೋಜನೆಯಿದ್ದು, ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣ ಮತ್ತು ಭವಿಷ್ಯದ ಉದ್ಯೋಗಗಳಿಗೆ ಸಿದ್ಧಪಡಿಸಲಾಗುತ್ತದೆ.

ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಈ ಕ್ರಮಗಳನ್ನು ಕೈಗೊಂಡಿದ್ದೇವೆ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣವನ್ನು ಒದಗಿಸುವುದು ನಮ್ಮ ಗುರಿ. ಇದು ಅಂತಿಮವಲ್ಲ; ನಮ್ಮ ಶಾಲೆಗಳನ್ನು ಪ್ರತಿದಿನವೂ ಉತ್ತಮಗೊಳಿಸಲು ನಾವು ಮುಂದುವರಿಸುತ್ತೇವೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com