LET ಉಗ್ರನ ಬಿಡಿಸಲು ಸಂಚು: ಗ್ರೆನೇಡ್ ಸಂಗ್ರಹಿಸಿ ದಾಳಿಗೆ ಯೋಜನೆ, ಆರೋಪಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ..!

ಬಿಹಾರದ ಬೇಗೂಸರಾಯ್ ಮೂಲದ ವಿಕ್ರಂ ಕುಮಾರ್, ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಕೊಲೆ ಪ್ರಕರಣ ಸಂಬಂಧ ಬಂಧಿತರಾಗಿದ್ದ ವೇಳೆ ನಾಸೀರ್‌ನ ಸಂಪರ್ಕಕ್ಕೆ ಬಂದಿದ್ದ. ಜೈಲಿನಲ್ಲಿದ್ದ ಅವಧಿಯಲ್ಲಿ ನಾಸೀರ್‌ನ ಪ್ರಭಾವಕ್ಕೆ ಒಳಗಾಗಿ ಇಸ್ಲಾಂ ಧರ್ಮ ಸ್ವೀಕರಿಸಿ ತನ್ನ ಹೆಸರನ್ನು ಉಸ್ಮಾನ್ ಎಂದು ಬದಲಿಸಿಕೊಂಡಿದ್ದ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಬೆಂಗಳೂರು ಸರಣಿ ಸ್ಫೋಟಗಳ ಹಿಂದಿರುವ ಕೇರಳ ಮೂಲದ ಮಾಸ್ಟರ್ ಮೈಂಡ್ ಮತ್ತು ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಭಯೋತ್ಪಾದಕ ಟಿ. ನಸೀರ್'ನನ್ನು ಜೈಲಿನಿಂದ ಪರಾರಿಯಾಗಲು ಸಂಚು ರೂಪಿಸಿದ ಪ್ರಕರಣದಲ್ಲಿ 9ನೇ ಆರೋಪಿಯಾಗಿರುವ ವಿಕ್ರಮ್ ಕುಮಾರ್ ಅಲಿಯಾಸ್ ಛೋಟಾ ಉಸ್ಮಾನ್‌ಗೆ ಬೆಂಗಳೂರಿನ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯವು ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 30 ಸಾವಿರರೂ. ದಂಡ ವಿಧಿಸಿ ಶನಿವಾರ ಆದೇಶಿಸಿದೆ.

ಈ ಹಿಂದೆ ಇದೇ ಪ್ರಕರಣದಲ್ಲಿ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಉಗ್ರ ಟಿ.ನಾಸೀರ್, ಆತನ ಸಹಚರರಾದ ಸಯ್ಯದ್ ಸುಹೇಲ್, ಮೊಹಮ್ಮದ್ ಉಮರ್‌, ಜಾಹೀದ್ ತಬ್ರೇಜ್, ಸೈಯದ್‌ ಮುದಾಸೀರ್‌ಪಾಷಾ, ಮೊಹಮ್ಮದ್ ಫೈಜಲ್ ರಬಾನಿ, ಸನ್ಮಾನ್ ಖಾನ್‌ಗೆ ನ್ಯಾಯಾಲಯ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತ್ತು.

ನ್ಯಾಯಾಂಗ ಬಂಧನದಲ್ಲೇ ಇರುವ ಪ್ರಕರಣದ ಇತರೆ ಮೂವರು ಆರೋಪಿಗಳಾದ ಸಿಎಆರ್ ಎಎಸ್‌ಐ ಚಾಂದ್‌ ಆತನಪಾಷಾ, ಜೈಲಿನ ವೈದ್ಯ ನಾಗರಾಜ್ ಮತ್ತು ಜುನೈದ್ ಅಹ್ಮದ್ ತಾಯಿ ಅನೀಸ್ ಫಾತೀಮಾ ವಿರುದ್ಧ ಆರೋಪಗಳ ಸಂಬಂಧ ವಿಚಾರಣೆ ಮುಂದುವರೆದಿದೆ. ಪ್ರಕರಣದ 2ನೇ ಆರೋಪಿ ಜುನೈದ್ ಅಹಮ್ಮದ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಎನ್‌ಐಎ ಅಧಿಕಾರಿಗಳು ಪ್ರಯತ್ನ ಮುಂದುವರೆಸಿದ್ದಾರೆ.

ಬಿಹಾರದ ಬೇಗೂಸರಾಯ್ ಮೂಲದ ವಿಕ್ರಂ ಕುಮಾರ್, ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಕೊಲೆ ಪ್ರಕರಣ ಸಂಬಂಧ ಬಂಧಿತರಾಗಿದ್ದ ವೇಳೆ ನಾಸೀರ್‌ನ ಸಂಪರ್ಕಕ್ಕೆ ಬಂದಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಜೈಲಿನಲ್ಲಿದ್ದ ಅವಧಿಯಲ್ಲಿ ನಾಸೀರ್‌ನ ಪ್ರಭಾವಕ್ಕೆ ಒಳಗಾಗಿ ಇಸ್ಲಾಂ ಧರ್ಮ ಸ್ವೀಕರಿಸಿ ತನ್ನ ಹೆಸರನ್ನು ಉಸ್ಮಾನ್ ಎಂದು ಬದಲಿಸಿಕೊಂಡಿದ್ದ.

File photo
ಪಾಕ್‌ನಲ್ಲಿ ಧುರಂಧರರ ಆರ್ಭಟ: ಮೊನ್ನೆ ಜೈಶ್ ಉಗ್ರ, ನಿನ್ನೆ ಹಿಜ್ಬುಲ್ ಟಾಪ್ ಕಮಾಂಡರ್‌ಗೆ ಗುಂಡಿಟ್ಟು ಹತ್ಯೆ!

ಜೈಲಿನಿಂದ ಬಿಡುಗಡೆ ಬಳಿಕವೂ ಆತ ನಾಸೀರ್ ಹಾಗೂ ಇತರ ಉಗ್ರ ಸಂಘಟನೆಗಳ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದನು ಎಂದು ಎನ್ಐಎ ತಿಳಿಸಿದೆ.

ಪೊಲೀಸ್ ಭದ್ರತೆಯಲ್ಲಿ ನಾಸೀರ್‌ನ್ನು ಕೋರ್ಟ್ ಅಥವಾ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾಳಿ ನಡೆಸಿ, ಪೊಲೀಸರನ್ನು ಕೊಂದು ಆತ ಪರಾರಿಯಾಗುವಂತ ಮಾಡುವ ಸಂಚನ್ನೂ ರೂಪಿಸಿದ್ದ ಎಂದು ತಿಳಿದುಬಂದಿದೆ.

ಈ ಯೋಜನೆಗೆ ಸಂಬಂಧಿಸಿದಂತೆ ಶಂಕಿತ ಉಗ್ರ ಜುನೈದ್‌ ಅಹ್ಮಮದ್‌ ಸೂಚನೆ ಮೇರೆಗೆ 2023ರ ಮೇನಲ್ಲಿ ವಿಕ್ರಮ್ ಕುಮಾರ್, ಹರಿಯಾಣದ ಅಂಬಾಲಕ್ಕೆ ಹೋಗಿ ಹ್ಯಾಂಡ್‌ ಗ್ರೆನೇಡ್ ಮತ್ತು ವಾಕಿ-ಟಾಕಿಗಳಿರುವ ಪಾರ್ಸೆಲ್ ತೆಗೆದುಕೊಂಡು ಬೆಂಗಳೂರಿಗೆ ಬಂದಿದ್ದ. ಬಳಿಕ ಸೈಯದ್ ಸುಹೇಲ್ ಖಾನ್ ಮನೆಯಲ್ಲಿ ಉಳಿದುಕೊಂಡು ಜುನೈದ್ ಅಹ್ಮಮದ್ ತಂದೆ ಅಬ್ದುಲ್ ಬಶೀರ್ ಮತ್ತ ಜಾಹಿದ್ ತಬ್ರೇಜ್‌ಗೆ ಆ ಹ್ಯಾಂಡ್ ಗ್ರೆನೇಡ್ ಮತ್ತು ವಾಕಿಟಾಕಿಗಳನ್ನು ಹಸ್ತಾಂತರಿಸಿದ್ದ.

ಉಗ್ರ ಟಿ.ನಾಸೀರ್‌ನನ್ನು ಜೈಲಿನಿಂದ ನ್ಯಾಯಾಲಯಕ್ಕೆ ಕರೆತರುವಾಗ ಮಾರ್ಗ ಮಧ್ಯೆ ಹ್ಯಾಂಡ್ ಗ್ರೆನೇಡ್ ಸ್ಫೋಟಿಸಿ ತಪ್ಪಿಸಿಕೊಳ್ಳಲು ಸಂಚು ರೂಪಿಸಲಾಗಿತ್ತು. ಈ ಸಂಚು ಕಾರ್ಯರೂಪಕ್ಕೆ ತರಲು ಜುನೈದ್ ಅಹ್ಮದ್, ಮೊಹಮ್ಮದ್ ಉಮರ್, ಜಾಹೀದ್ ತಬ್ರೇಜ್ ಹಾಗೂ ಇತರರು ವಿಕ್ರಮ್ ಕುಮಾರ್ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿರುವುದು ಎನ್‌ಐಎ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ಜನವರಿ 2025 ರಲ್ಲಿ ಎನ್ಐಎ ವಿಕ್ರಮ್ ಕುಮಾರ್ ಅಲಿಯಾಸ್ ಛೋಟಾ ಉಸ್ಮಾನ್‌ ವಿರುದ್ಧ ಐಪಿಸಿ ಸೆಕ್ಷನ್ 120B, ಯುಎಪಿಎ ಸೆಕ್ಷನ್ 17, 18, 20, 23, ಮತ್ತು 39 ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ 6 ರೊಂದಿಗೆ ಸೆಕ್ಷನ್ 120B ಅಡಿಯಲ್ಲಿ ಚಾರ್ಜ್‌ಶೀಟ್ ಸಲ್ಲಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com