

ಮಂಡ್ಯ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗಿರಿಯರಹಳ್ಳಿ ಸಮೀಪದ ಕೃಷ್ಣರಾಜ ಸಾಗರ ಹಿನ್ನೀರಿನಲ್ಲಿ ನಡೆದ ದುರಂತದಲ್ಲಿ ವೃದ್ಧ ದಂಪತಿ ನೀರು ಮುಳುಗಿ ಮೃತಪಟ್ಟಿದ್ದಾರೆ.
ಮೃತರನ್ನು ಬೆಂಗಳೂರಿನ ವರ್ತೂರು ನಿವಾಸಿಗಳಾದ ವಿ. ಮಂಜುನಾಥ್ (72) ಮತ್ತು ಅವರ ಪತ್ನಿ ಜಸ್ಸಿ (70) ಎಂದು ಗುರುತಿಸಲಾಗಿದೆ.
ವೃದ್ದ ದಂಪತಿಗಳು ತಮ್ಮ ಪುತ್ರಿ, ಅಳಿಯ ಮತ್ತು ಮೊಮ್ಮಗನೊಂದಿಗೆ ಶುಕ್ರವಾರ ಸಂಜೆ ಬೋಟಿಂಗ್‌ಗೆ ತೆರಳಿದ್ದರು. ಗಿರಿಯರಹಳ್ಳಿ ಸಮೀಪ ಖಾಸಗಿ ನೌಕಾಯಾನ ಸಂಸ್ಥೆ ‘RMSC’ ಆಯೋಜಿಸಿದ್ದ ಈ ಪ್ರವಾಸದ ವೇಳೆ, ಆಕಸ್ಮಿಕವಾಗಿ ಬೀಸಿದ ಬಲವಾದ ಗಾಳಿಯಿಂದ ದೋಣಿ ಪಲ್ಟಿಯಾಗಿದೆ.
ಅಪಘಾತದ ವೇಳೆ ದೋಣಿಯಲ್ಲಿದ್ದ ಐವರೂ ನೀರಿಗೆ ಬಿದ್ದಿದ್ದು, ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಎಲ್ಲರನ್ನು ಹೊರತಂದಿದ್ದಾರೆ. ಆದರೆ, ವೃದ್ಧ ದಂಪತಿ ಆಳಕ್ಕೆ ಹೋಗಿದ್ದರಿಂದ ವೈದ್ಯರು ಚಿಕಿತ್ಸೆ ನೀಡಿದರೂ ಜೀವ ಉಳಿಸಲು ಸಾಧ್ಯವಾಗಿಲ್ಲ.
ಇದೇ ಪ್ರದೇಶದಲ್ಲಿ ನಡೆದ ಮತ್ತೊಂದು ಘಟನೆದಲ್ಲಿ, ಗಿರಿಯರಹಳ್ಳಿ ನಿವಾಸಿ ಮಧು (26) ಮೀನುಗಾರಿಕೆ ವೇಳೆ ನೀರಿನ ಹರಿವಿನಲ್ಲಿ ಕೊಚ್ಚಿಕೊಂಡು ಹೋಗಿ ಕಾಣೆಯಾಗಿದ್ದಾರೆ.
ಶುಕ್ರವಾರ ಸಂಜೆ ಈ ಘಟನೆ ಸಂಭವಿಸಿದ್ದು, ಶನಿವಾರ ಬೆಳಗ್ಗಿನಿಂದ ಅಗ್ನಿಶಾಮಕ ದಳ, ಸ್ಥಳೀಯ ಮೀನುಗಾರರು, ತಜ್ಞ ಈಜುಗಾರರು ಹಾಗೂ RMSC ತಂಡದ ಸಹಾಯದಿಂದ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಆದರೆ, ಇನ್ನೂ ಅವರ ಸುಳಿವು ಸಿಕ್ಕಿಲ್ಲ.
Advertisement