

ತುಮಕೂರು: ಅಕ್ಕನ ಮಗನೊಂದಿಗೆ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಬೇಸತ್ತ ಗಂಡನೋರ್ವ ತನ್ನ ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರುವ ವಿದ್ರಾವಕ ಘಟನೆ ತುಮಕೂರಿನಲ್ಲಿ ನಡೆದಿದೆ.
ಹೌದು.. ತುಮಕೂರಿನ ಕುಣಿಕಲ್ ತಾಲೂಕಿನ ಆಲ್ಕೆರೆ ಗ್ರಾಮದಲ್ಲಿ ನಡೆದಿದ್ದ ಲವರ್ (Lover) ಜೊತೆ ಓಡಿ ಹೋಗಿ ಗಂಡ ಮತ್ತು ಇಬ್ಬರು ಮಕ್ಕಳನ್ನು ಬಲಿ ಪಡೆದ ಮಹಿಳೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಗಂಡನ ಅಕ್ಕನ ಮಗನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ತಿಳಿದುಬಂದಿದೆ. ಅಲ್ಲದೇ ಮನೆಯಲ್ಲಿದ್ದ ಬರೋಬ್ಬರಿ 130 ಗ್ರಾಂ ಚಿನ್ನವನ್ನು ಸಹ ಹೊತ್ತು ಪರಾರಿಯಾಗಿರುವುದು ಕೂಡ ಬೆಳಕಿಗೆ ಬಂದಿದೆ.
ಆಲ್ಕೆರೆ ಗ್ರಾಮದ ಮಲ್ಲೇಶ್ವರಸ್ವಾಮಿ ದೇಗುಲದ ಅರ್ಚಕ ಹಾಗೂ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಶಿವಣ್ಣ (40) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದು, ಸಾವಿಗೂ ಮುನ್ನ ಆತ ತನ್ನ ಮಕ್ಕಳಾದ ಜೀವನ್ (10) ಮತ್ತು ಪ್ರಾಣೇಶ್ (5) ಎಂಬುವವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಶಿವಣ್ಣ ಪತ್ನಿ ಕಾವ್ಯಾ (35) ಬೇರೊಬ್ಬರ ಜತೆಗೆ ಅಕ್ರಮ ಸಂಬಂಧ ಹೊಂದಿದ್ದರು ಎಂಬ ಕಾರಣಕ್ಕೆ ಇಬ್ಬರ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ಕಳೆದ ಕೆಲ ದಿನಗಳಿಂದ ಕಾವ್ಯಾ ಕೊತ್ತಗೆರೆ ಹೋಬಳಿಯ ಕುರುಡಿಹಳ್ಳಿಯ ತವರು ಮನೆಗೆ ಹೋಗಿದ್ದರು. ಶುಕ್ರವಾರ ಸಂಜೆ ಶಿವಣ್ಣ ಇಬ್ಬರು ಮಕ್ಕಳನ್ನು ವಾಪಸ್ ಆಲ್ಕೆರೆಗೆ ಕರೆದುಕೊಂಡು ಬಂದಿದ್ದರು. ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಿಗ್ಗೆ ಅಕ್ಕಪಕ್ಕದ ಮನೆಯವರು ಹೋಗಿ ನೋಡಿದಾಗ ಆತ್ಮಹತ್ಯೆ ವಿಚಾರ ಗೊತ್ತಾಗಿದೆ. ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಕನ ಮಗನೊಂದಿಗೇ ಅಕ್ರಮ ಸಂಬಂಧ
ಮೂಲಗಳ ಪ್ರಕಾರ ಶಿವಣ್ಣನ ಅಕ್ಕನ ಮಗ ಹೇಮಂತ್ ಎಂಬಾತನ ಜೊತೆಗೆ ಕಾವ್ಯಾ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಅಕ್ಕ ಮೃತಪಟ್ಟಬಳಿಕ ಆಕೆಯ ಮಗ ಹೇಮಂತ್ನನ್ನು ತನ್ನ ಮನೆಗೇ ಕರೆತಂದು ಶಿವಣ್ಣ ಸಾಕಿಕೊಂಡಿದ್ದ. ಆದರೆ ಈ ಹೇಮಂತ್ ಮಾವನಿಗೇ ಮೋಸ ಮಾಡಿದ್ದು, ಆತನ ಹೆಂಡತಿ ಅಂದರೆ ಅತ್ತೆಯಾದ ಕಾವ್ಯಾ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ.
ಈ ವಿಚಾರ ಗೊತ್ತಾಗಿ ಆತನನ್ನು ಶಿವಣ್ಣ ಮನೆಯಿಂದ ಹೊರಹಾಕಿದ್ದ. ಆ ಬಳಿಕ ಒಮ್ಮೆ ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದ. ಈ ವೇಳೆ ಗ್ರಾಮಸ್ಥರು ನ್ಯಾಯ ಪಂಚಾಯ್ತಿ ಮಾಡಿ ಗಂಡ ಹೆಂಡತಿ ಇಬ್ಬರೂ ಅನೋನ್ಯವಾಗಿ ಇರುವಂತೆ ಬುದ್ದಿ ಹೇಳಿದ್ದರು. ಆ ಬಳಿಕ ಕೆಲ ತಿಂಗಳು ಗಂಡ ಹೆಂಡತಿ ಚೆನ್ನಾಗಿಯೇ ಇದ್ದರು.
ಹೇಮಂತ್ ಜೊತೆ ಕಾವ್ಯಾ ಪರಾರಿ
ಆದರೆ ಕಳೆದ ಒಂದು ವಾರದ ಹಿಂದೆ ಗಂಡ ಶಿವಣ್ಣ ಮತ್ತು ಮಕ್ಕಳನ್ನು ಬಿಟ್ಟು ಹೇಮಂತ್ ಜೊತೆ ಕಾವ್ಯಾ ಓಡಿಹೋಗಿದ್ದಳು. ಈ ಬಗ್ಗೆ ಕುಣಿಗಲ್ ಪೊಲೀಸ್ ಠಾಣೆಗೆ ಶಿವಣ್ಣ ದೂರು ನೀಡಿದ್ದು, ಮತ್ತೆ ಈ ರೀತಿ ಕೆಲಸ ಮಾಡಲ್ಲ ಎಂದು ಠಾಣೆಯಲ್ಲಿಯೇ ಕ್ಷಮೆ ಕೇಳಿ ಗಂಡನ ಮನೆಗೆ ವಾಪಸ್ ಬಂದಿದ್ದಳು ಎನ್ನಲಾಗಿದೆ.
ಪೊಲೀಸ್ ವರದಿ
'ಕುಣಿಗಲ್ ಪೊಲೀಸ್ ಠಾಣೆಯಿಂದ ನಮಗೆ ಮಾಹಿತಿ ಬಂದಿದ್ದು, ಆಲ್ಕೆರೆಯ ಗ್ರಾಮದಲ್ಲಿ 3 ಜನರು ತಮ್ಮ ನಿವಾಸದಲ್ಲಿ ಮೃತಪಟ್ಟಿರುವುದು ಪತ್ತೆಯಾಗಿದೆ. ಸ್ಥಳಕ್ಕೆ ತಲುಪಿದ ನಂತರ, ಶಿವಣ್ಣ ತನ್ನ ಇಬ್ಬರು ಪುತ್ರರಾದ ಪ್ರಾಣೇಶ್ ಮತ್ತು ಜೀವನ್ ಅವರನ್ನು ಕೊಂದು, ನಂತರ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಜಾನ್ಸನ್ ಟೈಲ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಸುಮಾರು 40 ವರ್ಷ ವಯಸ್ಸಿನ ಲಿಂಗಾಯತ ಸಮುದಾಯದ ಶಿವಣ್ಣ, ತನ್ನ ಪತ್ನಿ ಕಾವ್ಯಾ ಹೇಮಂತ್ ಎಂಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆಂದು ಕಂಡುಕೊಂಡರು. ಆ ಕಾರಣದಿಂದಾಗಿ, ಅವರ ಕುಟುಂಬದಲ್ಲಿ ತೊಂದರೆ ಉಂಟಾಗಿತ್ತು, ಮತ್ತು ಈಗಾಗಲೇ ಪೊಲೀಸರ ಮೂಲಕ ಮತ್ತು ಸ್ಥಳೀಯರ ಮೂಲಕ ಒಂದು ಕೌನ್ಸೆಲಿಂಗ್ ಅಧಿವೇಶನ ನಡೆದಿತ್ತು.
ಆದರೆ ಅದರ ಹೊರತಾಗಿಯೂ, ಅವಳು ತನ್ನ ಅಕ್ರಮ ಸಂಬಂಧವನ್ನು ಮುಂದುವರೆಸಿದಳು, ಇದರಿಂದಾಗಿ ಅವನು ಅಸಮಾಧಾನಗೊಂಡನು. ಅವರ ಹತ್ತಿರದ ಸಂಬಂಧಿ ನೀಡಿದ ದೂರಿನ ಆಧಾರದ ಮೇಲೆ, ಆ ಮಕ್ಕಳನ್ನು ಕೊಂದಿದ್ದಕ್ಕಾಗಿ ಶಿವಣ್ಣ ಅವರ ವಿರುದ್ಧವೇ ಒಂದು ಕೊಲೆ ಪ್ರಕರಣವನ್ನು ದಾಖಲಿಸಿದ್ದೇವೆ ಮತ್ತು ಕಾವ್ಯಾ ಮತ್ತು ಹೇಮಂತ್ ವಿರುದ್ಧ ಒಂದು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣವನ್ನು ದಾಖಲಿಸಲಾಗಿದೆ.
ಆದ್ದರಿಂದ, ಇನ್ನೂ ಬಂಧನಗಳು ನಡೆದಿಲ್ಲ. ನಾವು ಆರೋಪಿಗಳಿಬ್ಬರನ್ನೂ ಬಂಧಿಸುತ್ತೇವೆ ಮತ್ತು ವಿಚಾರಣೆ ನಡೆಸುತ್ತೇವೆ. ಹೆಚ್ಚಿನ ತನಿಖೆ ನಡೆಸಿ ಸಾಧ್ಯವಾದಷ್ಟು ಬೇಗ ಆರೋಪಪಟ್ಟಿ ಸಲ್ಲಿಸಬೇಕು' ಎಂದು ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವೆಂಕಟ್ ಹೇಳಿದ್ದಾರೆ.
Advertisement