

ಬೆಂಗಳೂರು: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನವ ವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ನಗರದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಶಾರದಾ (39) ಎಂದು ಗುರ್ತಿಸಲಾಗಿದೆ. ಮಂಗಳವಾರ ರಾತ್ರಿ ತಮ್ಮ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಅವರ ಪತಿ ಮಹೇಶ್ ಅವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಶಾರದಾ ಮತ್ತು ಮಹೇಶ್ ಅವರು 2025ರ ಜುಲೈ 31ರಂದು ವಿವಾಹವಾಗಿದ್ದರು. ವಿವಾಹದ ನಂತರ ವರದಕ್ಷಿಣೆಗಾಗಿ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಕಿರುಕುಳ ಹಿನ್ನೆಲೆಯಲ್ಲಿ ಶಾರದಾ ಅವರು ತಮ್ಮ ಫಿಕ್ಸ್ಡ್ ಡಿಪಾಸಿಟ್‌ನಿಂದ ಪತಿಗೆ ರೂ.2 ಲಕ್ಷ ನೀಡಿದ್ದರು ಎಂದು ತಿಳಿದುಬಂದಿದೆ.
ಮೃತಳ ಸಹೋದರ ಅರುಣ್ ಅವರು ಮಾತನಾಡಿ, ಶಾರದಾ ಒಟ್ಟು ಸುಮಾರು ರೂ.5 ಲಕ್ಷ ಹಣವನ್ನು ಪತಿಗೆ ನೀಡಿದ್ದರು. ಆತ್ಮಹತ್ಯೆಗೆ ಮೊದಲು ಶಾರದಾ ಪತಿಗೆ ಹಲವಾರು ಬಾರಿ ಕರೆ ಮಾಡಿದ್ದಾಳೆ. ಆತ ಮನೆಯಲ್ಲಿದ್ದರೂ ರೂಂಗೆ ಲಾಕ್ ಮಾಡಿಕೊಂಡು ಕರೆಗಳಿಗೆ ಉತ್ತರ ನೀಡಿರಲಿಲ್ಲ. ಬಳಿಕ ಶಾರದಾ ಫೋಟೋಗಳ ಮೂಲಕ ಆತ್ಮಹತ್ಯೆ ಸೂಚನೆ ನೀಡಿದರೂ ಪ್ರತಿಕ್ರಿಯೆ ನೀಡಿಲ್ಲ. ಬಳಿಕ ಆತ್ಮಹತ್ಯೆಗೆ ಶರಣಾಳಾಗಿದ್ದಾಳೆಂದು ಹೇಳಿದ್ದಾರೆ.
ಏತನ್ಮಧ್ಯೆ ಮೃತ ಮಹಿಳೆಯ ಕುಟುಂಬಸ್ಥರು ಗೃಹ ಸಚಿವ ಪರಮೇಶ್ವರನ್ನು ಅವರನ್ನು ಭೇಟಿ ಮಾಡಿ, ಸರಿಯಾದ ತನಿಖೆ ನಡೆಯುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ಮಹಿಳೆಯ ಪತಿಯನ್ನು ಬಂಧನಕ್ಕೊಳಪಡಿಸಲಾಗಿದೆ. ಆತನ ತಾಯಿ ಪಾತ್ರದ ಕುರಿತಂತೆಯೂ ತನಿಖೆ ನಡೆಸುತ್ತಿದ್ದೇವೆ. ಶಾರದಾ ಅವರ ಡೈರಿ ವಶಪಡಿಸಿಕೊಳ್ಳಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿ ವಿರುದ್ಧ ವರದಕ್ಷಿಣೆ ಕಿರುಕುಳ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
Advertisement