

ವಿಜಯಪುರ: ಇಂದಿನ ಡಿಜಿಟಲ್ ಯುಗದಲ್ಲಿ ಹೆಚ್ಚಿನ ಮಕ್ಕಳು ರಜಾದಿನಗಳನ್ನು ಮೊಬೈಲ್ ಗೇಮ್, ಸೋಶಿಯಲ್ ಮೀಡಿಯಾ ಮತ್ತು ರೀಲ್ಸ್ ನೋಡುವುದರಲ್ಲಿ ಕಳೆಯುತ್ತಿದ್ದಾರೆ. ಆದರೆ, ವಿಜಯಪುರದ 14 ವರ್ಷದ ಬಾಲಕಿ ಮಾನ್ಯತಾ ಝಾ ಮಾತ್ರ ವಿಭಿನ್ನ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾಳೆ.
ತನ್ನ ಕಲ್ಪನೆಗಳಿಗೆ ಅಕ್ಷರ ರೂಪ ನೀಡಿ, ಕೇವಲ 14ನೇ ವಯಸ್ಸಿನಲ್ಲೇ ಲೇಖಕಿಯಾಗಿ ಗುರುತಿಸಿಕೊಂಡಿರುವ ಈ ಬಾಲಕಿ, ಈಗ ಹಲವರಿಗೆ ಪ್ರೇರಣೆಯಾಗಿದ್ದಾಳೆ.
10ನೇ ತರಗತಿಯಲ್ಲಿ ಓದುತ್ತಿರುವ ಮಾನ್ಯತಾ, ‘The Mystery of the Lost Bag’ ಎಂಬ ತನ್ನ ಮೊದಲ ಕಾದಂಬರಿಯನ್ನು ಪ್ರಕಟಿಸಿ ಎಲ್ಲರ ಗಮನ ಸೆಳೆದಿದ್ದಾಳೆ.
ವಿಶೇಷವೆಂದರೆ ಕಥೆ ಬರೆಯುವುದರಿಂದ ಹಿಡಿದು, ಆನ್‌ಲೈನ್‌ನಲ್ಲಿ ಪ್ರಕಾಶಕರನ್ನು ಹುಡುಕುವುದು, ಪುಸ್ತಕವನ್ನು ಪ್ರಕಟಿಸುವುದು ಹಾಗೂ ಅಮೆಜಾನ್–ಫ್ಲಿಪ್‌ಕಾರ್ಟ್ ಮುಂತಾದ ವೇದಿಕೆಗಳಿಗೆ ತಲುಪಿಸುವುದರವರೆಗೂ ಎಲ್ಲವನ್ನೂ ಆಕೆ ಸ್ವತಃ ನಿರ್ವಹಿಸಿದ್ದಾಳೆ.
ಕೋವಿಡ್ ಸಮಯದಲ್ಲಿ ಹುಟ್ಟಿದ ಕನಸು
ಮಾನ್ಯತಾಳ ಸಾಹಿತ್ಯಯಾನ ಆರಂಭವಾದದ್ದು ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ. ಶಾಲೆಗಳು ಬಂದ್ ಆಗಿದ್ದಾಹ ಸಮಯ ಕಳೆಯಲು ಪುಸ್ತಕಗಳನ್ನು ಓದಲು ಆರಂಭಿಸಿದ್ದಳು. ವಿಶೇಷವಾಗಿ ಪೌರಾಣಿಕ ಕಥೆಗಳು ಮತ್ತು ರಹಸ್ಯ ಕಥೆಗಳು ಆಕೆಯ ಮೇಲೆ ದೊಡ್ಡ ಪ್ರಭಾವ ಬೀರಿದವು.
“ನಾನು ಓದುತ್ತಿದ್ದ ಕಥೆಗಳು ನನಗೂ ಬರೆಯಬೇಕೆಂಬ ಆಸೆ ಹುಟ್ಟಿಸಿತು. ಮೊದಲಿಗೆ ಚಿಕ್ಕ ಕಥೆಗಳನ್ನು ಬರೆಯಲು ಆರಂಭಿಸಿದೆ, ನಾನು ಓದಿದ್ದ ಕಿರು ಕಥೆ ‘A Wired Road’ ತಿಳಿಯದೆ ನಿಗೂಢ ಗುಹೆಯನ್ನು ಪ್ರವೇಶಿಸುವ ಮತ್ತು ವಿಚಿತ್ರ ಘಟನೆಗಳನ್ನು ಅನುಭವಿಸುತ್ತಾರೆ. ಆಕೆ ಎದ್ದಾಗ ಅದು ಕನಸು ಎಂಬುದು ಆಕೆಗೆ ಅರಿವಾಗುತ್ತದೆ. ಈ ಕಥೆ ನನ್ನನ್ನು ಪ್ರೇರೇಪಿಸಿತ್ತು. ಬಳಿಕ ನಾನು ಸಣ್ಣ ಕಥೆಗಳನ್ನು ಬರೆಯಲು ಪ್ರಾರಂಭಿಸಿದ್ದೆ ಎಂದು ಮಾನ್ಯತಾ ಝಾ ಹೇಳಿದ್ದಾರೆ.
ರೈಲು ನಿಲ್ದಾಣದಿಂದ ಹುಟ್ಟಿದ ಕಥೆ
ರೈಲ್ವೆ ಉದ್ಯೋಗಿಯಾಗಿರುವ ಮಾನ್ಯತಾ ಅವರ ತಂದೆ ಚಂದನ್ ಕುಮಾರ್ ಝಾ, ರೈಲ್ವೆ ಕಾಲೋನಿಯಲ್ಲಿ ಬೆಳೆದಿದ್ದು, ಈ ಅನುಭವವೇ ಮೊದಲ ಕಾದಂಬರಿಗೆ ಸ್ಪೂರ್ತಿಯಾಯಿತು.
ಪ್ರತಿದಿನ ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ತಮ್ಮ ಬ್ಯಾಗ್‌ಗಳೊಂದಿಗೆ ಓಡಾಡುವುದನ್ನು ಗಮನಿಸುತ್ತಿದ್ದ ಮಾನ್ಯತಾ, “ಒಬ್ಬ ಹುಡುಗಿ ನಿಲ್ದಾಣದಲ್ಲಿ ತನ್ನ ಬ್ಯಾಗ್ ಕಳೆದುಕೊಂಡರೆ ಏನಾಗಬಹುದು?” ಎಂಬ ಕಲ್ಪನೆಯಿಂದ ಕಥೆಯನ್ನು ಕಟ್ಟಲು ಆರಂಭಿಸಿದಳು. ಆ ಕಲ್ಪನೆ ಮುಂದೆ ‘The Mystery of the Lost Bag’ ಎಂಬ ಕಾದಂಬರಿಯಾಗಿ ರೂಪುಗೊಂಡಿತು.
ಕುಟುಂಬದ ಬೆಂಬಲವೇ ಶಕ್ತಿ
ಮಾನ್ಯತಾಳ ತಾಯಿ ಮಗಳು ಬರೆದ ಪ್ರತಿಯೊಂದು ಕಥೆಯನ್ನೂ ಓದಿ, ತಪ್ಪುಗಳನ್ನು ತಿದ್ದುವ ಸಲಹೆ ನೀಡುತ್ತಿದ್ದರು. ಸ್ನೇಹಿತರೂ ಕಥೆಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡು ಉತ್ತೇಜನ ನೀಡಿದರು.
ನನ್ನ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ನಾನು ಬರೆದ ಕಥೆಗಳನ್ನು ಓದಿದರು. ನನ್ನನ್ನು ಪ್ರೋತ್ಸಾಹಿಸಿದರು ಮತ್ತು ಕಥೆಗಳನ್ನು ಸುಧಾರಿಸಲು ಅಥವಾ ಹೊಸ ಅಂಶಗಳನ್ನು ಸೇರಿಸಲು ಸಲಹೆಗಳನ್ನು ನೀಡಿದರು. ಅವರ ಬೆಂಬಲವು ನನ್ನ ಬರವಣಿಗೆಯ ಕೌಶಲ್ಯವನ್ನು ಸುಧಾರಿಸಲು ಸಹಾಯ ಮಾಡಿತು.
ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇರುವುದರಿಂದ ಓದಿಗೆ ಹೆಚ್ಚು ಸಮಯ ಕೊಡಬೇಕಿದೆ ಎಂದು ತಿಳಿದಿದ್ದರೂ, ಮಾನ್ಯತಾ ಅವರು ತಮ್ಮ ಕನಸಾಗಿರುವ ಬರವಣಿಗೆಯನ್ನು ಮಾತ್ರ ಬಿಡುವ ಕುರಿತು ಚಿಂತಿಸುತ್ತಿಲ್ಲ.
“ಬರವಣಿಗೆ ನನ್ನ ಹವ್ಯಾಸ ಮಾತ್ರವಲ್ಲ, ಅದು ನನ್ನ ಆಸಕ್ತಿ. ಓದಿನ ಜೊತೆಗೆ ಬರವಣಿಗೆಯನ್ನೂ ಮುಂದುವರಿಸುತ್ತೇನೆ ಎಂದು ಮಾನ್ಯತಾ ಹೇಳಿದ್ದಾರೆ. ಇದೇ ವೇಳೆ ಮೊಬೈಲ್ ಬಳಕೆಯ ಬಗ್ಗೆ ಇಂದಿನ ಯುವಕರಿಗೆ ಮಾನ್ಯತಾ ವಿಶೇಷ ಸಂದೇಶವನ್ನೂ ನೀಡಿದ್ದಾಳೆ.
“ಮೊಬೈಲ್ ಫೋನ್‌ಗಳು ಅಗತ್ಯ. ಆದರೆ ಅವುಗಳಿಗೆ ಅತಿಯಾಗಿ ಅಂಟಿಕೊಂಡರೆ ವಿದ್ಯಾರ್ಥಿಗಳು ತಮ್ಮ ಸಮಯ ಮತ್ತು ಗಮನ ಕಳೆದುಕೊಳ್ಳುತ್ತಾರೆ. ಮೊಬೈಲ್‌ನ್ನು ಹೊಸ ವಿಷಯ ಕಲಿಯಲು, ಜ್ಞಾನ ಹೆಚ್ಚಿಸಿಕೊಳ್ಳಲು ಬಳಸಬೇಕು ಎಂದು ಸಲಹೆ ನೀಡಿದ್ದಾಳೆ.
ಹೆಣ್ಣುಮಕ್ಕಳಿಗೆ ಪ್ರೇರಣೆ
ಮಾನ್ಯತಾಳ ಕಥೆಗಳ ಕೇಂದ್ರಬಿಂದುವೇ ಹೆಣ್ಣುಮಕ್ಕಳ ಹೋರಾಟ ಮತ್ತು ಆತ್ಮವಿಶ್ವಾಸ. “ಹೆಣ್ಣುಮಕ್ಕಳು ದುರ್ಬಲರಲ್ಲ. ಅವರು ಯಾವ ಸವಾಲನ್ನೂ ಎದುರಿಸಿ ಗೆಲ್ಲಬಲ್ಲರು ಎಂಬುದನ್ನು ನನ್ನ ಕಥೆಗಳ ಮೂಲಕ ತೋರಿಸಲು ಬಯಸುತ್ತೇನೆ ಎಂದು ಹೇಳುವ ಈ ಬಾಲ ಲೇಖಕಿ ಈಗ ಇನ್ನಷ್ಟು ಪುಸ್ತಕಗಳನ್ನು ಬರೆಯುವ ಕನಸಿನ್ನು ವ್ಯಕ್ತಪಡಿಸಿದ್ದಾಳೆ.
ಮೊಬೈಲ್‌ಗೆ ಸೀಮಿತವಾಗುತ್ತಿರುವ ಇಂದಿನ ಪೀಳಿಗೆಗೆ, ಪುಸ್ತಕಗಳ ಮೂಲಕ ಹೊಸ ಲೋಕ ಕಟ್ಟುತ್ತಿರುವ ವಿಜಯಪುರದ ಈ ಬಾಲಕಿ ನಿಜಕ್ಕೂ ಸ್ಪೂರ್ತಿದಾಯಕಳಾಗಿದ್ದಾಳೆ.
Advertisement