

ಬೆಂಗಳೂರು: ಜೈಲು ಶಿಕ್ಷೆ ಅನುಭವಿಸುತ್ತಿರುವ ಮಹಿಳೆಯರ ಜೊತೆ ಅವರ ಪುಟ್ಟ ಮಕ್ಕಳು ಕೂಡ ಜೈಲು ಜೀವನ ನಡೆಸಬೇಕಾಗುವ ವಾಸ್ತವವನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಮಹಿಳಾ ವಿಭಾಗದೊಳಗೆ ದೇಶದ ಮೊದಲ ಸರ್ಕಾರಿ ವಿಶೇಷ ಮಕ್ಕಳ ಆರೈಕೆ ಕೇಂದ್ರವನ್ನು (GSCCI) ಸ್ಥಾಪಿಸಲಾಗಿದೆ.
ಮಹಿಳಾ ಕೈದಿಗಳ ಆರೈಕೆಯಲ್ಲಿರುವ ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಶಿಕ್ಷಣ, ಸುರಕ್ಷತೆ ಹಾಗೂ ಭಾವನಾತ್ಮಕ ಬೆಳವಣಿಗೆ ಒದಗಿಸುವ ಉದ್ದೇಶದಿಂದ ಈ ವಿಶೇಷ ಘಟಕವನ್ನು ಆರಂಭಿಸಲಾಗಿದೆ.
ಯಾವುದೇ ಅಪರಾಧ ಮಾಡದ ಈ ಮಕ್ಕಳು ತಾಯಿಯೊಂದಿಗೆ ಜೈಲು ಆವರಣದಲ್ಲಿ ಬದುಕಬೇಕಾಗುವ ಪರಿಸ್ಥಿತಿಯನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸಿ ಈ ಯೋಜನೆ ಜಾರಿಗೊಳಿಸಲಾಗಿದೆ.
ಕರ್ನಾಟಕ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕಿ ಸಿ.ವಿ. ಸ್ನೇಹಾ ಅವರು ಮಾತನಾಡಿ, ಈ ಕೇಂದ್ರದಲ್ಲಿ ಇಬ್ಬರು ಶಿಕ್ಷಕರನ್ನು ನೇಮಕ ಮಾಡಲಾಗಿದ್ದು, ಮಕ್ಕಳಿಗೆ ಅಕ್ಷರಾಭ್ಯಾಸ, ಸಂಖ್ಯೆ, ರೈಮ್ಸ್, ಚಿತ್ರಕಲೆ, ಸೃಜನಾತ್ಮಕ ಚಟುವಟಿಕೆಗಳು ಹಾಗೂ ‘ಸೇಫ್ ಟಚ್-ಅನ್‌ಸೇಫ್ ಟಚ್’ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ.
ಇದರ ಜೊತೆಗೆ ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನಕ್ಕೂ ಒತ್ತು ನೀಡಲಾಗುತ್ತಿದೆ. ಹಿರಿಯರಿಗೆ ಗೌರವ ತೋರಿಸುವುದು, ಶಿಕ್ಷಕರಿಗೆ ವಂದನೆ ಹೇಳುವುದು, ಊಟದ ಶಿಷ್ಟಾಚಾರ ಸೇರಿದಂತೆ ದಿನನಿತ್ಯದ ಉತ್ತಮ ಅಭ್ಯಾಸಗಳನ್ನು ಕಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಬೆಂಗಳೂರು ಪಶ್ಚಿಮ (ಆನೇಕಲ್) ಜಿಲ್ಲಾ ಮಕ್ಕಳ ರಕ್ಷಣಾ ಕಚೇರಿಯ ಡಿಸಿಪಿ ಅಧಿಕಾರಿ ಆಶಾ ಎಚ್‌ಕೆ ಅವರು ಮತಾನಾಡಿ, “ಸುಪ್ರೀಂ ಕೋರ್ಟ್ ಮಾರ್ಗಸೂಚಿ ಹಾಗೂ ಜೈಲು ನಿಯಮಾವಳಿಗಳ ಪ್ರಕಾರ ಆರು ವರ್ಷದೊಳಗಿನ ಮಕ್ಕಳು ತಾಯಿಯೊಂದಿಗೆ ಜೈಲಿನಲ್ಲಿ ಇರಬಹುದಾಗಿದೆ. ಈ ಅವಧಿಯಲ್ಲಿ ಅವರ ರಕ್ಷಣೆ, ಶಿಕ್ಷಣ ಹಾಗೂ ಶಾಲಾ ಸಿದ್ಧತೆಯನ್ನು ಖಚಿತಪಡಿಸುತ್ತೇವೆ” ಎಂದು ತಿಳಿಸಿದ್ದಾರೆ.
ಮಗುವಿಗೆ ಆರು ವರ್ಷ ಪೂರ್ಣಗೊಂಡ ನಂತರ ಕುಟುಂಬದ ಸದಸ್ಯರ ಸಂಪರ್ಕ ಮಾಡಲಾಗುತ್ತದೆ. ಕುಟುಂಬದಿಂದ ಸ್ಪಂದನೆ ಸಿಗದಿದ್ದರೆ, ಜುವೆನೈಲ್ ಜಸ್ಟಿಸ್ ಕಾಯ್ದೆಯಡಿ ನೋಂದಾಯಿತ ಎನ್‌ಜಿಒಗಳ ಸಹಾಯದಿಂದ ಮಕ್ಕಳ ಮುಂದಿನ ಶಿಕ್ಷಣ ಮತ್ತು ಆರೈಕೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಈ ಕೇಂದ್ರದಲ್ಲಿ ಒಂಬತ್ತು ಮಕ್ಕಳ ಆರೈಕೆ ನಡೆಯುತ್ತಿದೆ. ಇವರಿಗೆ ನಿಯಮಿತ ಆರೋಗ್ಯ ತಪಾಸಣೆ, ಪೌಷ್ಟಿಕ ಆಹಾರ ಹಾಗೂ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಈ ಮಕ್ಕಳಲ್ಲಿ ಮೂವರು ವಿದೇಶಿ ಮಹಿಳಾ ಕೈದಿಗಳ ಮಕ್ಕಳೂ ಇದ್ದಾರೆ. ಆ ಮಹಿಳೆಯರು ಮಾದಕ ವಸ್ತುಗಳ ಪ್ರಕರಣಗಳಲ್ಲಿ ಬಂಧಿತರಾಗಿದ್ದು, ಮಕ್ಕಳು ಅತಿ ಚಿಕ್ಕವರಾಗಿರುವುದರಿಂದ ತಾಯಿಯೊಂದಿಗೇ ಇರಿಸಲಾಗಿದೆ.
ಮಕ್ಕಳಿಗೆ ಜೈಲು ವಾತಾವರಣದ ಭೀತಿ ಕಡಿಮೆ ಮಾಡಲು ತರಗತಿ ಕೊಠಡಿಗಳ ಗೋಡೆಗಳ ಮೇಲೆ ಬಣ್ಣ ಬಣ್ಣದ ಚಿತ್ರಗಳನ್ನು ಬಿಡಿಸಲಾಗಿದೆ. ಮಕ್ಕಳಿಗೆ ಅನುಕೂಲವಾಗುವ ಶೌಚಾಲಯ, ಕೈತೊಳೆಯುವ ವ್ಯವಸ್ಥೆ ಹಾಗೂ ಆಟ-ಪಾಠ ಕಲಿಕೆ ಸ್ಥಳಗಳನ್ನು ನಿರ್ಮಿಸಲಾಗಿದೆ. ಮಕ್ಕಳ ರಕ್ಷಣಾ ನಿರ್ದೇಶನಾಲಯ ಬಿಡುಗಡೆ ಮಾಡಿದ ಅನುದಾನದಿಂದ ಈ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಯೋಜನೆ ಕೇಂದ್ರ ಸರ್ಕಾರದ ‘ಮಿಷನ್ ವಾತ್ಸಲ್ಯ’, ಜುವೆನೈಲ್ ಜಸ್ಟಿಸ್ (ಕೇರ್ ಅಂಡ್ ಪ್ರೊಟೆಕ್ಷನ್ ಆಫ್ ಚಿಲ್ಡ್ರನ್) ಕಾಯ್ದೆ-2025 ಹಾಗೂ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಪ್ಪಂದ (UNCRC) ಮಾರ್ಗಸೂಚಿಗಳ ಆಧಾರದ ಮೇಲೆ ರೂಪಿಸಲಾಗಿದ್ದು, ಮುಂದಿನ ಹಂತದಲ್ಲಿ ಮಕ್ಕಳಿಗೆ ಹೆಚ್ಚಿನ ಪೌಷ್ಟಿಕ ಆಹಾರ, ಆರೋಗ್ಯ ಪೂರಕಗಳು ಹಾಗೂ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರಲು ಯೋಜನೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Advertisement