

ಬೆಂಗಳೂರು: ಭಾರತದ ಆಧ್ಯಾತ್ಮಿಕ ಪರಂಪರೆ ಮತ್ತು ನಾಗರಿಕತೆಯ ಜ್ಞಾನವು ಹೆಚ್ಚು ಕರುಣೆಯುತ ಹಾಗೂ ಜಾಗೃತ ವಿಶ್ವ ನಿರ್ಮಾಣಕ್ಕೆ ಪ್ರೇರಣೆ ನೀಡುತ್ತಿದೆ ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹೇಳಿದ್ದಾರೆ.
ಆರ್ಟ್ ಆಫ್ ಲಿವಿಂಗ್ ಫೌಂಡೇಷನ್ ಸಂಸ್ಥೆಯ (The Art of Living Foundation) 45ನೇ ವರ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಶ್ವದಾದ್ಯಂತ ಶಾಂತಿ, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳನ್ನು ಹರಡುತ್ತಿರುವ ರವಿಶಂಕರ್ ಗುರೂಜಿ (Sri Sri Ravi Shankar) ಅವರ ಸೇವೆಯನ್ನು ಶ್ಲಾಘಿಸಿದರು.
“ಸಂಘರ್ಷ ಮತ್ತು ಅನಿಶ್ಚಿತತೆಯಿಂದ ಕೂಡಿದ ಜಗತ್ತಿನಲ್ಲಿ ಬದುಕನ್ನೇ ಒಂದು ಕಲೆಯಾಗಿ ರೂಪಿಸಬೇಕು. ಭಾರತದ “ವಸುದೈವ ಕುಟುಂಬಕಂ” ತತ್ವವನ್ನು ಉಲ್ಲೇಖಿಸಿದ ರಾಧಾಕೃಷ್ಣನ್, ಇಡೀ ಜಗತ್ತನ್ನೇ ಒಂದು ಕುಟುಂಬವಾಗಿ ನೋಡುವ ಭಾರತೀಯ ಚಿಂತನೆ ಇಂದು ವಿಶ್ವಕ್ಕೆ ದಾರಿ ತೋರಿಸುತ್ತಿದೆ. ಧ್ಯಾನ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಪರಿಸರ ಸಂರಕ್ಷಣೆ ಮತ್ತು ಮಾನವೀಯ ಸೇವೆಗಳ ಮೂಲಕ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಸಮಾಜದ ಉನ್ನತಿಗೆ ಮಹತ್ವದ ಕೊಡುಗೆ ನೀಡಿದೆ ಎಂದು ಅವರು ಅಭಿಪ್ರಾಯಪಟ್ಟರು.
ಆರ್ಟ್ ಆಫ್ ಲಿವಿಂಗ್ ಚಳವಳಿ ಇಂದು ಜಾಗತಿಕ ಮಾನವೀಯ ಹಾಗೂ ಆಧ್ಯಾತ್ಮಿಕ ಶಕ್ತಿಯಾಗಿ ಬೆಳೆದಿದ್ದು, ಕರುಣೆ, ಸಹಿಷ್ಣುತೆ, ಸ್ಪಷ್ಟತೆ ಮತ್ತು ಸಂತೋಷವನ್ನು ಉತ್ತೇಜಿಸುತ್ತಿದೆ. ಯುವಕರು ಮಾದಕವಸ್ತುಗಳಿಂದ ದೂರವಿರಬೇಕು ಎಂದು ಕರೆ ನೀಡಿದ ಉಪರಾಷ್ಟ್ರಪತಿ, “ನಿಮ್ಮ ಮನಸ್ಸನ್ನು ನೀವು ನಿಯಂತ್ರಿಸಬೇಕು, ಬೇರೆ ಯಾವುದೂ ನಿಮ್ಮ ಮನಸ್ಸನ್ನು ನಿಯಂತ್ರಿಸಬಾರದು ಎಂದರು. ಈ ಸಂದರ್ಭದಲ್ಲಿ ಅವರು ಸಂಸ್ಥೆಯ 45 ವರ್ಷಗಳ ಸೇವೆಯನ್ನು ಸ್ಮರಿಸುವ ವಿಶೇಷ ಅಂಚೆ ಚೀಟಿಯನ್ನು ಅನಾವರಣಗೊಳಿಸಿದರು. ಅಲ್ಲದೆ ವ್ಯಕ್ತಿಗತ ಕಲ್ಯಾಣ, ಸಾಮಾಜಿಕ ಪರಿವರ್ತನೆ ಮತ್ತು ಜಾಗತಿಕ ಶಾಂತಿಗೆ ಸಂಸ್ಥೆ ನೀಡಿದ ಕೊಡುಗೆಯನ್ನು ಅವರು ಪ್ರಶಂಸಿಸಿದರು.
ಬದುಕು ಒಂದು ಕಲೆಯಾಗಬೇಕು. ಸಂಘರ್ಷ ಮತ್ತು ಅನಿಶ್ಚಿತತೆಯಿಂದ ಕೂಡಿದ ಈ ಜಗತ್ತಿನಲ್ಲಿ ಪ್ರತಿದಿನ ಬದುಕನ್ನು ಆನಂದಿಸಬೇಕು. ಶ್ರೀ ಶ್ರೀ ರವಿಶಂಕರ್ ಅವರು ಜ್ಞಾನ, ಜಾಗೃತಿ, ಶಾಂತಿ ಮತ್ತು ಸೌಹಾರ್ದತೆಯ ಮೌಲ್ಯಗಳ ಮೂಲಕ ಮಾನವಕುಲಕ್ಕೆ ನಿರಂತರ ಪ್ರೇರಣೆ ನೀಡುತ್ತಿದ್ದಾರೆ ಹಾಗೂ ವಿಭಿನ್ನ ಸಂದರ್ಭಗಳಲ್ಲಿ ಜನರಿಗೆ ಮನಶಾಂತಿ ನೀಡುತ್ತಿದ್ದಾರೆ ಎಂದರು.
ಭಕ್ತಿ ಅಂದರೆ ದೇವರ ಪೂಜೆ ಮಾತ್ರವಲ್ಲ
ಭಕ್ತಿಯ ಅರ್ಥವನ್ನು ವಿವರಿಸಿದ ರಾಧಾಕೃಷ್ಣನ್ ಅವರು, “ಭಕ್ತಿ ಅಂದರೆ ದೇವರ ಪೂಜೆ ಮಾತ್ರವಲ್ಲ. ಅದು ಆತ್ಮಸಾಕ್ಷಾತ್ಕಾರವನ್ನು ಪಡೆಯುವ ದಾರಿ. ಭಕ್ತಿ ಅಂದರೆ ಸಮರ್ಪಣೆ. ನಾವು ನಮ್ಮತ್ತ, ಕುಟುಂಬದತ್ತ, ಸಮಾಜದತ್ತ, ರಾಷ್ಟ್ರದತ್ತ ಹಾಗೂ ಮಾನವಕುಲದತ್ತ ಸಮರ್ಪಿತರಾಗಿರಬೇಕು” ಎಂದು ಹೇಳಿದರು.
181 ದೇಶಗಳಲ್ಲಿ ಆರ್ಟ್ ಆಫ್ ಲಿವಿಂಗ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುವುದನ್ನು ತಿಳಿದು ತಮಗೆ ಆಶ್ಚರ್ಯವಾಯಿತು. ಈ ಚಳವಳಿ ಖಂಡಗಳು, ಸಂಸ್ಕೃತಿಗಳು, ಭಾಷೆಗಳು ಮತ್ತು ಪೀಳಿಗೆಗಳನ್ನು ಮೀರಿ ಲಕ್ಷಾಂತರ ಜನರ ಬದುಕಿಗೆ ಸ್ಪೂರ್ತಿ ನೀಡಿದೆ. 45 ವರ್ಷಗಳ ಹಿಂದೆ ಒಳಗಿನ ಶಾಂತಿಯೇ ಹೊರಗಿನ ಸೌಹಾರ್ದತೆಯ ಮೂಲ ಎಂಬ ಸರಳ ಆದರೆ ಆಳವಾದ ಕಲ್ಪನೆಯೊಂದಿಗೆ ಈ ಚಳವಳಿ ಆರಂಭವಾಯಿತು” ಎಂದು ಅವರು ನೆನಪಿಸಿಕೊಂಡರು.
ಧ್ಯಾನ, ಸೇವೆ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಪರಿಸರ ಸಂರಕ್ಷಣೆ ಮತ್ತು ಅಂತರಧರ್ಮ ಸಂವಾದಗಳ ಮೂಲಕ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿದೆ. ಸಮಾಜದ ಉನ್ನತಿಗೆ ಆಧ್ಯಾತ್ಮಿಕತೆ ದೊಡ್ಡ ಪಾತ್ರ ವಹಿಸುತ್ತದೆ ಎಂಬುದನ್ನು ಆರ್ಟ್ ಆಫ್ ಲಿವಿಂಗ್ ತೋರಿಸಿದೆ ಎಂದರು.
ಭಾರತ ಇಂದು ಆತ್ಮವಿಶ್ವಾಸಭರಿತ ಆಶಯಗಳೊಂದಿಗೆ ಜಾಗತಿಕ ವೇದಿಕೆಯಲ್ಲಿ ಪ್ರಮುಖ ಸ್ಥಾನ ಪಡೆಯುತ್ತಿರುವ ಐತಿಹಾಸಿಕ ಘಟ್ಟದಲ್ಲಿದೆ ಎಂದು ಅವರು ಹೇಳಿದರು. ನರೇಂದ್ರ ಮೋದಿ ಅವರ ನಾಗರಿಕತೆಯ ಜ್ಞಾನ, ಯೋಗ, ಆರೋಗ್ಯ ಮತ್ತು ಸ್ಥಿರತೆಯ ಮೇಲಿನ ಒತ್ತು ಇದೇ ದಿಕ್ಕನ್ನು ಪ್ರತಿಬಿಂಬಿಸುತ್ತದೆ ಎಂದರು.
ಭಾರತದ ಆಧ್ಯಾತ್ಮಿಕ ಪರಂಪರೆ ಹೆಚ್ಚು ಜಾಗೃತ ವಿಶ್ವ ನಿರ್ಮಿಸುತ್ತಿದೆ
ಭಾರತದ ಜಾಗತಿಕ ಪಾತ್ರದ ಕುರಿತು ಮಾತನಾಡಿದ ಅವರು, ದೇಶದ ಆಧ್ಯಾತ್ಮಿಕ ಪರಂಪರೆ ಮತ್ತು ಆಧುನಿಕ ನಾಯಕತ್ವವು ಸೇರಿ ಹೆಚ್ಚು ಕರುಣೆಯುತ ವಿಶ್ವಕ್ಕೆ ಪ್ರೇರಣೆ ನೀಡುತ್ತಿದೆ ಎಂದು ಹೇಳಿದರು. “ಗ್ರಾಮಗಳಿಂದ ನಗರಗಳವರೆಗೆ, ಸಂಘರ್ಷ ಪೀಡಿತ ಪ್ರದೇಶಗಳಿಂದ ತರಗತಿಗಳವರೆಗೆ, ವಿಪತ್ತು ಪೀಡಿತ ಸಮುದಾಯಗಳಿಂದ ಶಿಕ್ಷಣ ಕೇಂದ್ರಗಳವರೆಗೆ ಭಾರತ ಆಧ್ಯಾತ್ಮಿಕ ಪರಂಪರೆ ಮತ್ತು ಆಧುನಿಕ ಜಾಗತಿಕ ನಾಯಕತ್ವ ಒಟ್ಟಾಗಿ ಹೆಚ್ಚು ಜಾಗೃತ ಮತ್ತು ಕರುಣೆಯುತ ವಿಶ್ವವನ್ನು ನಿರ್ಮಿಸುತ್ತಿರುವುದನ್ನು ನೋಡುವುದು ಸಂತೋಷಕರ” ಎಂದರು.
“ವಸುದೈವ ಕುಟುಂಬಕಂ” ಎಂಬ ಭಾರತೀಯ ತತ್ವವನ್ನು ಉಲ್ಲೇಖಿಸಿದ ಅವರು, ಇಡೀ ಜಗತ್ತನ್ನೇ ಒಂದು ಕುಟುಂಬವಾಗಿ ನೋಡುವ ಮಹಾನ್ ಚಿಂತನೆ ಇದಾಗಿದೆ. ಗುರುದೇವಜಿ ಹಾಗೂ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಈ ಸಂದೇಶವನ್ನು ದೇಶದಷ್ಟೇ ಅಲ್ಲ, ಇಡೀ ವಿಶ್ವದಾದ್ಯಂತ ಹರಡುತ್ತಿದೆ ಎಂದರು. ಅಂತೆಯೇ ಸ್ವಂತ ಬೇರುಗಳು ಮತ್ತು ಸಂಪ್ರದಾಯಗಳನ್ನು ಮರೆಯಬಾರದು ಎಂದು ಒತ್ತಿ ಹೇಳಿದ ಅವರು, “ಯಾರೂ ತಮ್ಮ ಬೇರುಗಳನ್ನು ಮರೆಯಬಾರದು. ತಮ್ಮ ಊರನ್ನು ಮರೆಯಬಾರದು. ತಮ್ಮ ಕುಲದೇವತೆಯನ್ನು ಮರೆಯಬಾರದು” ಎಂದು ಹೇಳಿದರು.
ಧ್ಯಾನ ಮತ್ತು ಏಕಾಗ್ರತೆಯ ಮಹತ್ವವನ್ನು ವಿವರಿಸುವ ವೇಳೆ ಅವರು ಗಣಿತಜ್ಞ ಶ್ರೀನಿವಾಸ ರಾಮಾನುಜನ್ (Srinivasa Ramanujan) ಅವರನ್ನು ಉದಾಹರಣೆಯಾಗಿ ಉಲ್ಲೇಖಿಸಿದರು. 'ಅವರು ಎಷ್ಟು ಕಷ್ಟಪಟ್ಟರು, ಎಷ್ಟು ಸಾಧಿಸಿದರು... ಮುಖ್ಯವಾದದ್ದು ಅವರ ಏಕಾಗ್ರತೆ. ಆಧುನಿಕತೆ ಮತ್ತು ಪ್ರಾಚೀನ ಪರಂಪರೆ ಪರಸ್ಪರ ವಿರೋಧಿಯಲ್ಲ, ಬದಲಿಗೆ ಪರಸ್ಪರ ಪೂರಕವೆಂದು ಆರ್ಟ್ ಆಫ್ ಲಿವಿಂಗ್ ತೋರಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.
“ಆಧುನಿಕ ಅಭಿವೃದ್ಧಿ ಬೇಕೆಂದರೆ ಸಾಂಪ್ರದಾಯಿಕ ಮೌಲ್ಯಗಳನ್ನು ತ್ಯಜಿಸಬೇಕು ಎಂದಲ್ಲ. ಬದಲಾವಣೆ ಮಾತ್ರ ಶಾಶ್ವತ. ಆದರೆ ಉತ್ತಮ ಬದಲಾವಣೆಗಳನ್ನು ಸ್ವೀಕರಿಸಬೇಕು. ಜೊತೆಗೆ ಒಳ್ಳೆಯ ಸಾಂಪ್ರದಾಯಿಕ ಮೌಲ್ಯಗಳನ್ನು ಬಿಡಬಾರದು. ಆಯುರ್ವೇದ, ನೈಸರ್ಗಿಕ ಕೃಷಿ, ನದಿ ಪುನಶ್ಚೇತನ, ವೃಕ್ಷಾರೋಪಣ ಹಾಗೂ ಮಾದಕವಸ್ತು ಮುಕ್ತ ಭಾರತ ಅಭಿಯಾನಗಳಲ್ಲಿ ಸಂಸ್ಥೆ ಕೈಗೊಂಡಿರುವ ಕಾರ್ಯಗಳನ್ನು ಉಪರಾಷ್ಟ್ರಪತಿಗಳು ಶ್ಲಾಘಿಸಿದರು.
ಮಾದಕವಸ್ತುಗಳಿಂದ ದೂರವಿರಿ
“ನಿಮ್ಮ ಮನಸ್ಸನ್ನು ನೀವು ನಿಯಂತ್ರಿಸಬೇಕು. ಬೇರೆ ಯಾವುದೂ ನಿಮ್ಮ ಮನಸ್ಸನ್ನು ನಿಯಂತ್ರಿಸಬಾರದು,” ಎಂದು ಯುವಜನತೆಗೆ ಮಾದಕವಸ್ತುಗಳಿಂದ ದೂರವಿರಲು ಕರೆ ನೀಡಿದರು. ಸಂಸ್ಥೆಯ ಸ್ವಯಂಸೇವಕರನ್ನು “ಮೌನ ಸೇವಾ ಶಿಲ್ಪಿಗಳು” ಎಂದು ಕರೆಯುತ್ತಾ ಅವರು ಪ್ರಶಂಸಿಸಿದರು. ಒಬ್ಬ ವ್ಯಕ್ತಿಯ ಜೀವನದಲ್ಲಿ ಪರಿವರ್ತನೆ ತಂದರೂ ಅದು ಒಂದು ಕುಟುಂಬವನ್ನು ಸಬಲಗೊಳಿಸುವಂತೆಯೇ. ಸಬಲ ಕುಟುಂಬಗಳು ಸಮಾಜವನ್ನು, ರಾಜ್ಯವನ್ನು, ರಾಷ್ಟ್ರವನ್ನು ಹಾಗೂ ಇಡೀ ವಿಶ್ವವನ್ನು ಬಲಪಡಿಸುತ್ತವೆ” ಎಂದು ಹೇಳಿದರು.
ಸಿದ್ದರಾಮಯ್ಯರಿಗೆ ಧನ್ಯವಾದ ಸಲ್ಲಿಸಿದ ಉಪರಾಷ್ಟ್ರಪತಿ
ಇದೇ ವೇಳೆ, ಕರ್ನಾಟಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯಕ್ಕೆ ನೀಡಿದ ಸೇವೆಗೆ ಉಪರಾಷ್ಟ್ರಪತಿ ಧನ್ಯವಾದ ಸಲ್ಲಿಸಿದರು. ಜೊತೆಗೆ ಹೊಸ ಮುಖ್ಯಮಂತ್ರಿ ರಾಜ್ಯದ ಅಭಿವೃದ್ಧಿಯತ್ತ ಗಮನಹರಿಸಲಿ ಎಂದು ಆಶಿಸಿದರು. ಇದು ದಾವಣಗೆರೆಯ ವಿಶ್ವವಿದ್ಯಾಲಯ BDT ಎಂಜಿನಿಯರಿಂಗ್ ಕಾಲೇಜಿನ 75ನೇ ಪ್ಲಾಟಿನಂ ಜುಬಿಲಿ ಸಮಾರಂಭದಲ್ಲಿ ಮಾತನಾಡುವ ವೇಳೆ ನಡೆದಿದೆ. ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೂಟ್ (Thaawarchand Gehlot) ಕೂಡ ಉಪಸ್ಥಿತರಿದ್ದರು.
“ರಾಜ್ಯದಲ್ಲಿ ನಾಯಕತ್ವ ಬದಲಾವಣೆ ನಡೆದಿದೆ. ವೈಯಕ್ತಿಕವಾಗಿ ನಾನು ಹೊರಹೋಗುತ್ತಿರುವ ಮುಖ್ಯಮಂತ್ರಿಗೆ ರಾಜ್ಯಕ್ಕೆ ನೀಡಿದ ಮಹತ್ತರ ಸೇವೆಗೆ ಧನ್ಯವಾದ ಹೇಳುತ್ತೇನೆ. ಹೊಸ ಮುಖ್ಯಮಂತ್ರಿ ಕರ್ನಾಟಕ ಜನರ ಆಶಯಗಳನ್ನು ಈಡೇರಿಸುವತ್ತ ಹಾಗೂ ರಾಜ್ಯದ ಅಭಿವೃದ್ಧಿಯತ್ತ ಗಮನಹರಿಸಲಿ ಎಂದು ನಾವು ಆಶಿಸುತ್ತೇವೆ,” ಎಂದು ರಾಧಾಕೃಷ್ಣನ್ ಹೇಳಿದರು.
Advertisement