

ಬೆಂಗಳೂರು: ದೇಶದ ರೈಲ್ವೆ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲೊಂದು ದಾಖಲಾಗಿದೆ. ಭಾರತದ ಮೊದಲ ಸ್ವದೇಶಿ ನಿರ್ಮಿತ ಹೈ-ಸ್ಪೀಡ್ ಬುಲೆಟ್ ಟ್ರೈನ್ 'B28' (ಭಾರತ್ 28), ಬೆಂಗಳೂರಿನ ಬಿಇಎಂಎಲ್ (BEML) ಘಟಕದಲ್ಲಿ ಅತ್ಯಂತ ನಿರ್ಣಾಯಕವಾದ 'ಸ್ಕ್ವೀಜ್ ಟೆಸ್ಟ್' (Squeeze Test) ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ನೇರ ಸಮ್ಮುಖದಲ್ಲಿ ಈ ಸುರಕ್ಷತಾ ಪರೀಕ್ಷೆ ನಡೆದಿದ್ದು, ರೈಲಿನ ಅಧಿಕೃತ ನಿರ್ಮಾಣ ಹಂತಕ್ಕೆ ಹಸಿರು ನಿಶಾನೆ ಸಿಕ್ಕಂತಾಗಿದೆ.
ಈ ಕುರಿತು ಭಾನುವಾರ ಮಾಹಿತಿ ಹಂಚಿಕೊಂಡ ರೈಲ್ವೆ ಸಚಿವಾಲಯ, ಭಾರತದಲ್ಲೇ ತಯಾರಾಗುತ್ತಿರುವ ಬುಲೆಟ್ ರೈಲಿನೊಂದಿಗೆ ದೇಶವು ಸ್ವದೇಶಿ ಅತಿವೇಗದ ರೈಲು ತಂತ್ರಜ್ಞಾನದತ್ತ ಮಹತ್ವದ ಹೆಜ್ಜೆ ಇಡುತ್ತಿದೆ. ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಕಾರಿಡಾರ್‌ಗಾಗಿ ಈ ರೈಲನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದೆ.
ಜಪಾನ್‌ನ ಶಿಂಕನ್ಸೆನ್ ರೈಲುಗಳಿಗಿಂತ ಭಾರತದ ಬುಲೆಟ್ ರೈಲಿನ ವೆಚ್ಚ ಕಡಿಮೆಯಾಗಿರಲಿದೆ ಎಂದು ಮೂಲಗಳು ತಿಳಿಸಿವೆ.
ಭಾರತವು ಇ5 ಶಿಂಕನ್ಸೆನ್ ರೈಲು ಸೆಟ್‌ಗಳನ್ನು ಖರೀದಿಸಲು ಉದ್ದೇಶಿಸಿತ್ತು. ಆದರೆ, ಜಪಾನ್ ನೀಡಿದ ಹೆಚ್ಚಿನ ಬೆಲೆಯ ಪ್ರಸ್ತಾವನೆ ಮತ್ತು ವಿಳಂಬದ ಸಾಧ್ಯತೆ ಹಿನ್ನೆಲೆಯಲ್ಲಿ ಸರ್ಕಾರ ಸ್ವಾವಲಂಬಿ ಮಾರ್ಗವನ್ನು ಆಯ್ಕೆ ಮಾಡಿಕೊಂಡಿತು. ಪರೀಕ್ಷೆಗಾಗಿ ಜಪಾನ್ ಎರಡು ಶಿಂಕನ್ಸೆನ್ ರೈಲು ಸೆಟ್‌ಗಳನ್ನು (E5 ಮತ್ತು E3) ಉಚಿತವಾಗಿ ನೀಡಲಿದೆ ಎಂದು ಮೂಲಗಳು ಹೇಳಿವೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಭಾನುವಾರ ಬಿಇಎಂಎಲ್ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ರೈಲಿನ ‘ಸ್ಕ್ವೀಝ್ ಟೆಸ್ಟ್’ ವೀಕ್ಷಿಸಿದರು.
ಇದು ರೈಲಿನ ಸುರಕ್ಷತೆಯನ್ನು ಪರೀಕ್ಷಿಸುವ ಪ್ರಮುಖ ಪ್ರಕ್ರಿಯೆಯಾಗಿದ್ದು, ರೈಲಿನ ಬೋಗಿಯ ರಚನಾತ್ಮಕ ಬಲ, ದೃಢತೆ ಮತ್ತು ಆಯಾಮಗಳ ಸ್ಥಿರತೆಯನ್ನು ಪರಿಶೀಲಿಸಲು ನಿಯಂತ್ರಿತ ಒತ್ತಡ ಹಾಗೂ ಎಳೆತದ ಬಲವನ್ನು ಪ್ರಯೋಗಿಸಲಾಗುತ್ತದೆ.
ಬಿ28 ರೈಲಿನ ಗರಿಷ್ಠ ಪರೀಕ್ಷಾ ವೇಗ ಗಂಟೆಗೆ 280 ಕಿ.ಮೀ. ಆಗಿರಲಿದೆ. ಈ ರೈಲು ಈ ವರ್ಷದ ಅಂತ್ಯದ ವೇಳೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ನಿರ್ಮಾಣ ಘಟಕದಿಂದ ಹೊರಬರುವ ನಿರೀಕ್ಷೆಯಿದೆ. 2027ರ ಆಗಸ್ಟ್ 15ರಂದು ಸೂರತ್-ವಾಪಿ ನಡುವಿನ 97 ಕಿ.ಮೀ. ಮಾರ್ಗದಲ್ಲಿ ಪ್ರಾಯೋಗಿಕ ಉದ್ಘಾಟನಾ ಸಂಚಾರ ನಡೆಸಲು ತಾತ್ಕಾಲಿಕವಾಗಿ ನಿರ್ಧರಿಸಲಾಗಿದೆ.
ಮುಂಬೈ-ಅಹಮದಾಬಾದ್ ಸಂಪೂರ್ಣ ಅತಿವೇಗದ ರೈಲು ಕಾರಿಡಾರ್ ಕಾಮಗಾರಿ 2029-30ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಮುಂದಿನ ಯೋಜನೆ ಬೆಂಗಳೂರು-ಪುಣೆ ಕಾರಿಡಾರ್?
ಬೆಂಗಳೂರು-ಪುಣೆ ನಡುವೆ ಪ್ರಸ್ತಾಪಿಸಲಾಗಿರುವ ಬುಲೆಟ್ ರೈಲು ಕಾರಿಡಾರ್ ಮುಂದಿನ ಅತಿವೇಗದ ರೈಲು ಯೋಜನೆಗಳ ಪೈಕಿ ಒಂದಾಗಿರಬಹುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಸುಳಿವು ನೀಡಿದ್ದಾರೆ.