

ಶಿವಮೊಗ್ಗ: ತಿಂಗಳಿಗೆ ಲಕ್ಷ ಲಕ್ಷ ಲಾಭದ ಆಮಿಷ ಒಡ್ಡಿ ಹೂಡಿಕೆದಾರರಿಗೆ ಬರೋಬ್ಬರಿ 11.46 ಕೋಟಿ ರೂಪಾಯಿ ವಂಚಿಸಿರುವ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ.
ಖಾಸಗಿ ಕಂಪನಿಯೊಂದರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ ಮಂಜುಳಾ ಮತ್ತು ಆಕೆಯ ಪತಿ ಅಭಿಲಾಷ್ ಎನ್.ಎಂ. ಎಂಬ ದಂಪತಿ ವಿರುದ್ಧ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ.
ಆರೋಪಿತ ದಂಪತಿಗಳು ಪ್ರತಿ ರೂ.25 ಲಕ್ಷ ಹೂಡಿಕೆಗೆ ತಿಂಗಳಿಗೆ ರೂ.1.25 ಲಕ್ಷ ಲಾಭ ನೀಡುವುದಾಗಿ ಆಮಿಷವೊಡ್ಡಿದ್ದರು ಎನ್ನಲಾಗಿದೆ.
ವೈಯಕ್ತಿಕ ಸಂಪರ್ಕಗಳ ಮೂಲಕ ಜನರನ್ನು ಸಂಪರ್ಕಿಸಿ, ವರ್ಕ್ನಾಕ್ಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡುವಂತೆ ಮನವೊಲಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಎಫ್ಐಆರ್ ಪ್ರಕಾರ, ಭದ್ರಾವತಿಯ ವೈದ್ಯಕೀಯ ಮಳಿಗೆ ಮಾಲೀಕ ಶಶಿಧರ ಬಿ.ಎಂ. ಅವರಿಗೆ ಸುಮಾರು ಒಂದು ವರ್ಷದ ಹಿಂದೆ ದಂಪತಿಯ ಪರಿಚಯವಾಗಿತ್ತು. ದಂಪತಿ ಆಗಾಗ್ಗೆ ಅವರ ವೈದ್ಯಕೀಯ ಮಳಿಗೆಗೆ ಭೇಟಿ ನೀಡಿ, ಹೂಡಿಕೆ ಅವಕಾಶಗಳ ಬಗ್ಗೆ ಮಾತನಾಡುತ್ತಿದ್ದರು. ಆಕರ್ಷಕ ಲಾಭದ ಭರವಸೆ ನೀಡಿ ಕ್ರಮೇಣ ಅವರ ವಿಶ್ವಾಸ ಗಳಿಸಿದ್ದರು ಎನ್ನಲಾಗಿದೆ.
ಸೆಪ್ಟೆಂಬರ್ 24, 2024ರಂದು ಮನೆಯ ದಾಖಲೆಗಳನ್ನು ಅಡಮಾನವಿಟ್ಟು ರೂ.25 ಲಕ್ಷ ಸಾಲ ಪಡೆದು, ಭರವಸೆ ನೀಡಿದ ಲಾಭದ ನಿರೀಕ್ಷೆಯಲ್ಲಿ ಮಂಜುಳಾ ಅವರಿಗೆ ನಗದು ರೂಪದಲ್ಲಿ ನೀಡಿದ್ದಾಗಿ ಶಶಿಧರ ದೂರಿನಲ್ಲಿ ತಿಳಿಸಿದ್ದಾರೆ. ಬಳಿಕ ಅವರು ತಮ್ಮ ಸ್ನೇಹಿತರು ಮತ್ತು ಪರಿಚಯಸ್ಥರಿಗೂ ಈ ಹೂಡಿಕೆ ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ದೂರಿನ ಪ್ರಕಾರ, ಇತರ ಹಲವರೂ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದ್ದು, ಪ್ರತಿಯೊಬ್ಬರಿಂದಲೂ ರೂ.10 ಲಕ್ಷದಿಂದ ರೂ.69 ಲಕ್ಷದವರೆಗೆ ಹಣ ಸಂಗ್ರಹಿಸಲಾಗಿದೆ. ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿರುವ ಎಚ್ಡಿಎಫ್ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ಖಾತೆಗಳ ಮೂಲಕ ಆರೋಪಿಗಳು ಹಣ ಪಡೆದಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ನಗದು ರೂಪದಲ್ಲಿಯೂ ಹಣ ಸ್ವೀಕರಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕೆಲವು ಹಣಕಾಸು ವಹಿವಾಟುಗಳನ್ನು ವರ್ಕ್ನಾಕ್ಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಖಾತೆಯ ಮೂಲಕ ನಡೆಸಲಾಗಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರಿನಲ್ಲಿರುವ ಕಂಪನಿಯ ಕಾರ್ಯಚಟುವಟಿಕೆಗಳನ್ನು ಶಿವಮೊಗ್ಗಕ್ಕೆ ಸ್ಥಳಾಂತರಿಸುವುದಾಗಿ ಹಾಗೂ ವಿದೇಶಿ ಕಂಪನಿಯೊಂದರ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಹೇಳಿ, ಹೂಡಿಕೆದಾರರನ್ನು ಮತ್ತಷ್ಟು ಹಣ ತೊಡಗಿಸುವಂತೆ ದಂಪತಿ ಪ್ರೇರೇಪಿಸಿದ್ದರು ಎಂದೂ ದೂರಿನಲ್ಲಿ ಆರೋಪಿಸಲಾಗಿದೆ.