ಮಹಿಳೆಗೆ ಚಾಕು ತೋರಿಸಿ, ಒತ್ತೆಯಾಳಾಗಿಸಿಕೊಂಡು ದರೋಡೆಗೆ ಯತ್ನ; ಮಂಗಳಸೂತ್ರ ಕಿತ್ತುಕೊಂಡ ದುಷ್ಕರ್ಮಿಗೆ 'ಧರ್ಮದೇಟು'! Video

ಹೆಲ್ಮೆಟ್ ಮತ್ತು ಕೈಗವಸು ಧರಿಸಿ ಅಂಗಡಿಯೊಳಗೆ ನುಗ್ಗಿದ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಹಲ್ಲೆ ನಡೆಸಿ, ಕುತ್ತಿಗೆಗೆ ಚಾಕು ಹಿಡಿದು ಬೆದರಿಸಿದ್ದಾನೆ. ಬಳಿಕ ಆಕೆಯ 4.50 ಲಕ್ಷ ರೂಪಾಯಿ ಮೌಲ್ಯದ ಮಂಗಳಸೂತ್ರ ಕಿತ್ತುಕೊಂಡು ಪರಾರಿ..
Man attacks woman, holds her hostage before attempting to flee with chain
ಬೆಂಗಳೂರಿನಲ್ಲಿ ದುಷ್ಕರ್ಮಿ ಹೈಡ್ರಾಮಾ, ಚಾಕು ತೋರಿಸಿ ದರೋಡೆ ಯತ್ನ
Updated on: 

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ಮಹಿಳೆಯೊಬ್ಬರನ್ನು ಒತ್ತೆಯಾಳಾಗಿಸಿಕೊಂಡು ಚಿನ್ನದ ಸರ ದೋಚಲು ಯತ್ನಿಸಿದ ಘಟನೆ ಇಂದಿರಾನಗರದಲ್ಲಿ ನಡೆದಿದೆ.

ಹೆಲ್ಮೆಟ್ ಮತ್ತು ಕೈಗವಸು ಧರಿಸಿ ಅಂಗಡಿಯೊಳಗೆ ನುಗ್ಗಿದ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಹಲ್ಲೆ ನಡೆಸಿ, ಕುತ್ತಿಗೆಗೆ ಚಾಕು ಹಿಡಿದು ಬೆದರಿಸಿದ್ದಾನೆ. ಬಳಿಕ ಆಕೆಯ 4.50 ಲಕ್ಷ ರೂಪಾಯಿ ಮೌಲ್ಯದ ಮಂಗಳಸೂತ್ರ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಸ್ಥಳೀಯರು ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಂಧಿತನನ್ನು 40 ವರ್ಷದ ಪ್ರಭುರಾಜ್ ಎಂದು ಗುರುತಿಸಲಾಗಿದೆ. ಆರೋಪಿ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ಖಿನ್ನತೆಯಿಂದ ಬಳಲುತ್ತಿರುವ ಸಾಧ್ಯತೆಯಿರುವುದರಿಂದ ಆತನ ಹಿನ್ನೆಲೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಅಮಟೆ ತಿಳಿಸಿದ್ದಾರೆ.

ಅಕ್ಟೋಬರ್ 31ರಂದು ಬೆಳಗ್ಗೆ 11.45ರಿಂದ ಮಧ್ಯಾಹ್ನ 12.15ರ ನಡುವೆ ಇಂದಿರಾನಗರದ 100 ಅಡಿ ರಸ್ತೆಯಲ್ಲಿರುವ ಪ್ರೀಮಿಯಂ ಶೂ ಆ್ಯಂಡ್ ಬ್ಯಾಗ್ ರಿಪೇರಿ ಅಂಗಡಿಯಲ್ಲಿ ಈ ಘಟನೆ ನಡೆದಿದೆ. 23 ವರ್ಷದ ಯುವತಿ ಈ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

Man attacks woman, holds her hostage before attempting to flee with chain
ಸ್ವಾತಂತ್ರ್ಯ ಬಂದು 80 ವರ್ಷವಾಯ್ತು; ಬೆಳಗಾವಿಯ ಈ ಕುಗ್ರಾಮದ ಜನತೆ ಬದುಕಿನಲ್ಲಿ ಇನ್ನೂ ಕತ್ತಲು !

ಅಂಗಡಿಗೆ ನುಗ್ಗಿ ಮಹಿಳೆಗೆ ಚಾಕು ತೋರಿಸಿ ಬೆದರಿಕೆ

ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವಂತೆ, ಆರೋಪಿ ಏಕಾಏಕಿ ಅಂಗಡಿಯೊಳಗೆ ನುಗ್ಗಿ ರಿಸೆಪ್ಷನ್ ಕೌಂಟರ್ ಹಾರಿ ಮಹಿಳೆಯ ಬಳಿಗೆ ಬಂದಿದ್ದಾನೆ. ಯಾರೋ ತನ್ನನ್ನು ಕೊಲ್ಲಲು ಬರುತ್ತಿದ್ದಾರೆ ಎಂದು ಹೇಳಿಕೊಂಡು, ಕೂಗದಂತೆ ಆಕೆಗೆ ಎಚ್ಚರಿಕೆ ನೀಡಿದ್ದಾನೆ. ಈ ವೇಳೆ ಆತ ಹೆಲ್ಮೆಟ್ ಮತ್ತು ಕೈಗವಸು ಧರಿಸಿದ್ದ ಎಂದು ಸಂತ್ರಸ್ತೆ ತಿಳಿಸಿದ್ದಾರೆ.

ನಂತರ ಮಹಿಳೆಯ ಬಾಯಿಯನ್ನು ಬಲವಂತವಾಗಿ ಮುಚ್ಚಿ, ಚಾಕು ತೋರಿಸಿ ಬೆದರಿಸಿದ್ದಾನೆ. ಆಕೆಯ ಕೈಗಳನ್ನು ಮೇಜಿಗೆ ಅಂಟಿಸಲು ಅಂಟು ಬಳಸಲು ಯತ್ನಿಸಿದ್ದಾನೆ. ಮೇಜಿನ ಮೇಲಿದ್ದ ಬಟ್ಟೆಯ ತುಂಡನ್ನು ಆಕೆಯ ಬಾಯಿಗೆ ತುರುಕಿ, ಕುತ್ತಿಗೆಯಲ್ಲಿದ್ದ 35 ಗ್ರಾಂ ತೂಕದ ಮಂಗಳಸೂತ್ರವನ್ನು ಕಿತ್ತುಕೊಂಡಿದ್ದಾನೆ. ಇದರ ಮೌಲ್ಯ 4.50 ಲಕ್ಷ ರೂಪಾಯಿ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಹಾಯಕ್ಕೆ ಬಂದ ಅಂಗಡಿ ಮಾಲೀಕರ ಮೇಲೂ ಹಲ್ಲೆ

ಆರೋಪಿ ಮಹಿಳೆಯ ಕೂದಲು ಹಿಡಿದು ಎಳೆದಾಡಿದ್ದಲ್ಲದೆ, ಆಕೆಯ ಕುತ್ತಿಗೆಗೆ ಚಾಕು ಹಿಡಿದು ಬೆದರಿಸಿದ್ದಾನೆ. ಸ್ಥಳಕ್ಕೆ ಬಂದ ಸಾರ್ವಜನಿಕರ ಮೇಲೂ ಚಾಕು ಬೀಸಿದ್ದಾನೆ. ಮಹಿಳೆಯ ರಕ್ಷಣೆಗೆ ಧಾವಿಸಿದ ಅಂಗಡಿ ಮಾಲೀಕರ ಮೇಲೂ ಹಲ್ಲೆ ನಡೆಸಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.

ಧರ್ಮದೇಟು

ಮಹಿಳೆ ಕೂಗಾಟ ಕೇಳುತ್ತಲೇ ಧಾವಿಸಿದ ಸ್ಥಳೀಯರು ಮೊದಲು ಆತನನ್ನು ಸಮಾಧಾನಗೊಳಿಸಲು ಯತ್ನಿಸಿದ್ದಾರೆ. ಆದರೆ ಆತ ಕೇಳದೇ ಆಕೆಯನ್ನು ಆಟೋದಲ್ಲಿ ಅಪಹರಿಸಲು ಯತ್ನಿಸಿದಾಗ ಆತನನ್ನು ಹಿಡಿದು ಥಳಿಸಿದ್ದಾರೆ.

ಬಳಿಕ ವಿಷಯ ತಿಳಿಯುತ್ತಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸ್ಥಳೀಯರ ನೆರವಿನಿಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಂತ್ರಸ್ತೆ ಸುರಕ್ಷಿತವಾಗಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.

ಆದರೆ, ಆರೋಪಿಯೊಂದಿಗಿನ ಹೋರಾಟದ ವೇಳೆ ಮಹಿಳೆಯ ಕುತ್ತಿಗೆ ಮತ್ತು ಕೈಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಯ ವಿರುದ್ಧ ಬಿಎನ್‌ಎಸ್ ಸೆಕ್ಷನ್ 309(6) ಅಡಿಯಲ್ಲಿ ದರೋಡೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X