ಜೀವನಾಂಶ ಸ್ವಯಂಚಾಲಿತ ಹಕ್ಕಲ್ಲ: ಪತ್ನಿ ಆರ್ಥಿಕವಾಗಿ ಸ್ವತಂತ್ರಳಾಗಿದ್ದರೆ ಪತಿಯಿಂದ ಜೀವನಾಂಶ ಪಡೆಯುವಂತಿಲ್ಲ; ಹೈಕೋರ್ಟ್ ಮಹತ್ವದ ತೀರ್ಪು

ಪತ್ನಿ ಉತ್ತಮ ಶಿಕ್ಷಣ ಪಡೆದಿದ್ದು, ಉದ್ಯೋಗದಲ್ಲಿದ್ದು, ತನ್ನ ಜೀವನ ನಿರ್ವಹಣೆಗೆ ಸಾಕಾಗುವಷ್ಟು ಆದಾಯ ಗಳಿಸುತ್ತಿದ್ದರೆ ಆಕೆಯನ್ನು ಪತಿಯ ಮೇಲೆ ಅವಲಂಬಿತಳು ಎಂದು ಪರಿಗಣಿಸಲಾಗದು.
AI Image
ಎಐ ಸೃಷ್ಟಿತ ಚಿತ್ರ
Updated on: 

ಬೆಂಗಳೂರು: ಪತ್ನಿಯು ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದು, ಗೌರವಯುತ ಜೀವನ ನಡೆಸಲು ಸಾಕಾಗುವಷ್ಟು ಗಳಿಸುತ್ತಿದ್ದರೆ, ಅಂತಹ ಸಂದರ್ಭದಲ್ಲಿ ಆಕೆಗೆ ಜೀವನಾಂಶ ನೀಡಬೇಕಾದ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಯ ಸೆಕ್ಷನ್ 144 ಅನ್ನು ಉಲ್ಲೇಖಿಸಿ ತೀರ್ಪು ನೀಡಿರುವ ನ್ಯಾಯಮೂರ್ತಿ ಚಿಲ್ಲಾಕೂರ್ ಸುಮಲತಾ ಅವರ ಪೀಠವು, "ತನ್ನನ್ನು ತಾನು ಸಾಕಿಕೊಳ್ಳಲು ಅಸಮರ್ಥಳಾಗಿರುವುದು" ಪತ್ನಿಯು ಜೀವನಾಂಶ ಪಡೆಯಲು ಕಾನೂನಿನಲ್ಲಿ ಇರುವ ಅತ್ಯಗತ್ಯವಾದ ಮೊದಲ ಶರತ್ತಾಗಿದೆ. ಎಲ್ಲ ಸಂದರ್ಭಗಳಲ್ಲೂ ಪತಿಯಾದವನು ಪತ್ನಿಯನ್ನು ಪೋಷಿಸಲೇಬೇಕು ಎಂದು ಕಾನೂನು ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಪತ್ನಿ ಉತ್ತಮ ಶಿಕ್ಷಣ ಪಡೆದಿದ್ದು, ಉದ್ಯೋಗದಲ್ಲಿದ್ದು, ತನ್ನ ಜೀವನ ನಿರ್ವಹಣೆಗೆ ಸಾಕಾಗುವಷ್ಟು ಆದಾಯ ಗಳಿಸುತ್ತಿದ್ದರೆ ಆಕೆಯನ್ನು ಪತಿಯ ಮೇಲೆ ಅವಲಂಬಿತಳು ಎಂದು ಪರಿಗಣಿಸಲಾಗದು. ಉದ್ಯೋಗ, ಆರ್ಥಿಕ ಸ್ವಾವಲಂಬನೆ ಮತ್ತು ಸ್ವತಂತ್ರವಾಗಿ ಜೀವನ ನಡೆಸುವ ಸಾಮರ್ಥ್ಯವು ಪತ್ನಿಯ ಜೀವನಾಂಶದ ಬೇಡಿಕೆಯನ್ನು ತಿರಸ್ಕರಿಸಲು ಸೂಕ್ತ ಆಧಾರಗಳಾಗಿವೆ ಎಂದು ಅಭಿಪ್ರಾಯಪಟ್ಟಿದೆ.

ಇದೇ ವೇಳೆ ಪತ್ನಿಗೆ ಮಾಸಿಕ 20 ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಗೊಳಿಸಿದೆ.

ಪತಿಯ ಆದಾಯ ಪತ್ನಿಗಿಂತ ಹೆಚ್ಚಿದೆ ಎಂಬುದು ನಿಜ. ಆದರೆ, ಪತ್ನಿಯ ಆದಾಯ ಆಕೆಯ ಜೀವನ ನಿರ್ವಹಣೆಗೆ ಸಾಕಾಗದಷ್ಟು ಕಡಿಮೆ ಇದ್ದರೆ ಅಂತಹ ಪತ್ನಿಗೆ ಪತಿ ಜೀವನಾಂಶ ನೀಡುವುದು ಅನಿವಾರ್ಯವಾಗುತ್ತದೆ. ಆದರೆ, ಪತ್ನಿಯೇ ಹೇಳಿಕೊಂಡಿರುವ ಪ್ರಕಾರ, ತನ್ನ ಆದಾಯದಿಂದ ತಂದೆ-ತಾಯಿಯನ್ನು ನೋಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಆಕೆಯನ್ನು ಪತಿಯ ಮೇಲೆ ಅವಲಂಬಿತಳಾಗಿದ್ದಾಳೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಬೆಂಗಳೂರಿನಲ್ಲಿ ವಾಸವಾಗಿರುವ 36 ವರ್ಷದ ಪತಿ, ತನಗೆ 31 ವರ್ಷದ ಪತ್ನಿಗೆ ಮಾಸಿಕ 20 ಸಾವಿರ ರೂಪಾಯಿ ಜೀವನಾಂಶ ನೀಡುವಂತೆ 2025ರ ಜುಲೈ 4ರಂದು ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಪತ್ನಿ ಮಾಸಿಕ 85 ಸಾವಿರ ರೂಪಾಯಿ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದರು.

AI Image
ಭಾರತ ಒಂದು ಜಾತ್ಯತೀತ ರಾಷ್ಟ್ರ; ಪರಿಸರ ಕಾಳಜಿಗೆ ಧರ್ಮದ ಬಣ್ಣ ಬೇಡ ಎಂದ ಹೈಕೋರ್ಟ್: ದಿಯಾ ಮಿರ್ಜಾ ವಿಡಿಯೋ ರೀ-ಅಪ್‌ಲೋಡ್ ಮಾಡಲು ಆದೇಶ

ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯ, ಆಕೆ ಮಾಸಿಕ 54,700 ರೂಪಾಯಿ ಆದಾಯ ಗಳಿಸುತ್ತಿದ್ದರೂ ಪತಿಯ ಆದಾಯ ಹೆಚ್ಚಿರುವ ಕಾರಣ ಆಕೆಗೆ ಜೀವನಾಂಶ ನೀಡಬೇಕು ಎಂದು ತೀರ್ಪು ನೀಡಿತ್ತು. ಅದರಂತೆ ಪತಿ ಪ್ರತಿ ತಿಂಗಳು 20 ಸಾವಿರ ರೂಪಾಯಿ ಪಾವತಿಸಬೇಕೆಂದು ಆದೇಶಿಸಿತ್ತು.

ಪತ್ನಿಯ ಆರ್ಥಿಕ ಸ್ಥಿತಿಯ ಕುರಿತು ವಿಚಾರಣೆ ವೇಳೆ, ಪತಿ ಎಂಜಿನಿಯರ್ ಆಗಿದ್ದು ವಾರ್ಷಿಕ 40 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ ಎಂದು ಪತ್ನಿ ವಾದಿಸಿದ್ದರು. ಮತ್ತೊಂದೆಡೆ, ಪತ್ನಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದು, ವಾರ್ಷಿಕ 10 ಲಕ್ಷ ರೂಪಾಯಿ ಆದಾಯ ಹೊಂದಿದ್ದಾರೆ ಎಂದು ಪತಿ ನ್ಯಾಯಾಲಯಕ್ಕೆ ತಿಳಿಸಿದ್ದರು.

ಪತ್ನಿ ಮಾಸಿಕ 54,700 ರೂಪಾಯಿ ಆದಾಯ ಗಳಿಸುತ್ತಿರುವುದನ್ನು ಉಲ್ಲೇಖಿಸಿದ ಹೈಕೋರ್ಟ್, ಆಕೆ ತನ್ನ ಅವಲಂಬಿತರ ನಿರ್ವಹಣೆಗೆ ಪ್ರತಿ ತಿಂಗಳು ಸುಮಾರು 35 ಸಾವಿರ ರೂಪಾಯಿ ಖರ್ಚು ಮಾಡುತ್ತಿರುವುದಾಗಿ ಸ್ವತಃ ಹೇಳಿಕೊಂಡಿದ್ದಾರೆ ಎಂದು ಗಮನಿಸಿತು.

ತನ್ನ ತಂದೆ-ತಾಯಿ ತನ್ನನ್ನೇ ಅವಲಂಬಿಸಿದ್ದಾರೆ ಮತ್ತು ಅವರ ನಿರ್ವಹಣೆಗೆ ಮಾಸಿಕ 35 ಸಾವಿರ ರೂಪಾಯಿ ಖರ್ಚು ಮಾಡುತ್ತಿದ್ದೇನೆ ಎಂದು ಪತ್ನಿಯೇ ಹೇಳಿರುವಾಗ, ಮತ್ತೊಂದೆಡೆ ತಾನು ಪತಿಯ ಮೇಲೆ ಅವಲಂಬಿತಳಾಗಿದ್ದೇನೆ ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ. ಆಕೆಗೆ ಜೀವನಾಂಶ ನೀಡುವಂತೆ ಪತಿಗೆ ನಿರ್ದೇಶಿಸುವುದೂ ಸಮಂಜಸವಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪತಿಯ ಆರ್ಥಿಕ ಸ್ಥಿತಿ ಪತ್ನಿಗಿಂತ ಉತ್ತಮವಾಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದೂ ನ್ಯಾಯಾಲಯ ಹೇಳಿದೆ.

ಅಲ್ಲದೆ, ದಂಪತಿ ನಡುವಿನ ಸಂಬಂಧ ಮತ್ತಷ್ಟು ಹದಗೆಡುವುದನ್ನು ತಪ್ಪಿಸಿ, ಪರಸ್ಪರ ಸಂಧಾನಕ್ಕೆ ಅವಕಾಶ ಮುಕ್ತವಾಗಿಡುವ ಉದ್ದೇಶದಿಂದ, ಈವರೆಗೆ ಪತ್ನಿಗೆ ಜೀವನಾಂಶದ ರೂಪದಲ್ಲಿ ಪಾವತಿಸಿರುವ ಹಣವನ್ನು ವಾಪಸ್ ಪಡೆಯಲು ಪತಿ ಯಾವುದೇ ಕಾನೂನು ಪ್ರಕ್ರಿಯೆ ಆರಂಭಿಸಬಾರದು ಎಂದು ಹೈಕೋರ್ಟ್ ಆದೇಶಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X