

ಬೆಂಗಳೂರು: ಕಡಿಮೆ ದರದಲ್ಲಿ ರಾಜಸ್ಥಾನಕ್ಕೆ ವಿಮಾನ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ ₹17 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ದೋಚಿದ ಆರೋಪದ ಮೇಲೆ ಅಸ್ಸಾಂ ಮೂಲದ ವಂಚಕನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
ಅಸ್ಸಾಂ ಮೂಲದ, ಸದ್ಯ ಬೆಂಗಳೂರಿನ ಭಟ್ಟರಹಳ್ಳಿಯಲ್ಲಿ ವಾಸವಿದ್ದ ಚನುವರ್ ಅಲಿ (36) ಬಂಧಿತ ಆರೋಪಿ. ರಾಜಸ್ಥಾನದ ಪುಷ್ಪಾ ಟಿ. (40) ವಂಚನೆಗೊಳಗಾದ ದುರ್ದೈವಿ.
ಪೊಲೀಸರ ಪ್ರಕಾರ, ರಾಜಸ್ಥಾನ ಮೂಲದ ಪುಷ್ಪಾ ಟಿ (40) ಅವರು ಬೆಂಗಳೂರಿನ ಸಿಂಗಾಪುರದಲ್ಲಿರುವ ತಮ್ಮ ಸಹೋದರಿಯ ಮನೆಗೆ ಭೇಟಿ ನೀಡಲು ಬಂದಿದ್ದರು. ಅಕ್ಟೋಬರ್ 14ರಂದು ತವರು ಊರಿಗೆ ಮರಳಲು ರೈಲು ಟಿಕೆಟ್ ಖರೀದಿಸುವ ಉದ್ದೇಶದಿಂದ ಯಶವಂತಪುರ ರೈಲು ನಿಲ್ದಾಣಕ್ಕೆ ತೆರಳಿದ್ದರು.
ಈ ವೇಳೆ ಚಾನುವರ್ ಅಲಿ ಅವರನ್ನು ಪರಿಚಯಿಸಿಕೊಂಡು, ಕಡಿಮೆ ದರದಲ್ಲಿ ವಿಮಾನ ಟಿಕೆಟ್ ವ್ಯವಸ್ಥೆ ಮಾಡಿಕೊಡುವುದಾಗಿ ನಂಬಿಸಿದ್ದಾನೆ. ಬಳಿಕ ಅವರನ್ನು ವಿಮಾನ ನಿಲ್ದಾಣದ ರಸ್ತೆಯತ್ತ ಕರೆದೊಯ್ದಿದ್ದಾನೆ. ಬಾಗಲೂರು ಸಮೀಪ ಮಹಿಳೆಯ ಚಿನ್ನಾಭರಣ ಮತ್ತು ಬೆಳ್ಳಿಯ ಕಾಲ್ಗೆಜ್ಜೆಗಳನ್ನು ಪರ್ಸ್‌ನಲ್ಲಿ ಇಡುವಂತೆ ಮನವೊಲಿಸಿದ್ದಾನೆ. ನಂತರ ಆ ಪರ್ಸ್ ಅನ್ನು ತನ್ನ ಚೀಲದೊಳಗೆ ಇಟ್ಟುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಬಾಗಲೂರು ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಹಾಗೂ ಇತರ ಸಾಕ್ಷ್ಯಗಳನ್ನು ಸಂಗ್ರಹಿಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಆರೋಪಿಯಿಂದ 117 ಗ್ರಾಂ ಚಿನ್ನಾಭರಣ ಮತ್ತು 71 ಗ್ರಾಂ ಬೆಳ್ಳಿ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.