ಬಸ್ ಪ್ರಯಾಣ ದರ ಏರಿಕೆ ಸಾರ್ವಜನಿಕ ಸಾರಿಗೆ ನೀತಿಗೆ ವಿರುದ್ಧವಾಗಿದೆಯೇ: ತಜ್ಞರು ಏನಂತಾರೆ?

ಡೀಸೆಲ್, ನೌಕರರ ವೇತನ, ನಿರ್ವಹಣೆ ಮತ್ತು ಬಿಡಿಭಾಗಗಳ ವೆಚ್ಚ ಹೆಚ್ಚಳ ಹಾಗೂ ಸಂಚಿತ ನಷ್ಟಗಳು ದರ ಏರಿಕೆಗೆ ಪ್ರಮುಖ ಕಾರಣಗಳಾಗಿರಬಹುದು. ಆದರೆ, ಸಾರ್ವಜನಿಕ ಸೇವೆಯೇ ಸಾರಿಗೆ ನಿಗಮಗಳ ಪ್ರಮುಖ ಉದ್ದೇಶವಾಗಿರಬೇಕು.
Representational image
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ ಪ್ರಯಾಣ ದರವನ್ನು ಶೇ.35ರವರೆಗೆ ಹಾಗೂ ಇತರ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್ ದರವನ್ನು ಶೇ.23ರಷ್ಟು ಹೆಚ್ಚಿಸುವ ರಾಜ್ಯ ಸರ್ಕಾರದ ನಿರ್ಧಾರವು ಸಂಚಾರ ದಟ್ಟಣೆ ಕಡಿಮೆ ಮಾಡುವುದು ಮತ್ತು ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸುವ ನೀತಿಗೆ ವಿರುದ್ಧವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಡೀಸೆಲ್, ನೌಕರರ ವೇತನ, ನಿರ್ವಹಣೆ ಮತ್ತು ಬಿಡಿಭಾಗಗಳ ವೆಚ್ಚ ಹೆಚ್ಚಳ ಹಾಗೂ ಸಂಚಿತ ನಷ್ಟಗಳು ದರ ಏರಿಕೆಗೆ ಪ್ರಮುಖ ಕಾರಣಗಳಾಗಿರಬಹುದು. ಆದರೆ, ಸಾರ್ವಜನಿಕ ಸೇವೆಯೇ ಸಾರಿಗೆ ನಿಗಮಗಳ ಪ್ರಮುಖ ಉದ್ದೇಶವಾಗಿರಬೇಕು.

ಈ ಕಾರಣಗಳನ್ನು ಮಾತ್ರ ಮುಂದಿಟ್ಟುಕೊಂಡು ದರ ಪರಿಷ್ಕರಣೆಯನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆಯ (ISEC) ಪ್ರಾಧ್ಯಾಪಕ ಹಾಗೂ ರಾಜ್ಯ ಸಂಪನ್ಮೂಲ ಕ್ರೋಢೀಕರಣ ತಜ್ಞರ ಸಮಿತಿ ಸದಸ್ಯ ಕೃಷ್ಣ ರಾಜ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ(The New Indian Express) ಪ್ರತಿನಿಧಿಗೆ ಹೇಳಿದ್ದಾರೆ.

ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಮತ್ತು ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಯು ಸಂಚಾರ ದಟ್ಟಣೆ ಕಡಿಮೆ ಮಾಡುವುದು ಹಾಗೂ ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಿಸುವ ಸರ್ಕಾರದ ನೀತಿಗಳಿಗೆ ಹೊಂದಿಕೆಯಾಗುವುದಿಲ್ಲ. ಸಾರ್ವಜನಿಕ ಸಾರಿಗೆ ಬಳಸುವಂತೆ ಜನರನ್ನು ಪ್ರೋತ್ಸಾಹಿಸಲು ಬಯಸುವ ಸರ್ಕಾರ ಅದೇ ಸೇವೆಯನ್ನು ದುಬಾರಿಗೊಳಿಸುತ್ತಿರುವುದು ವಿಪರ್ಯಾಸ. ಒಟ್ಟಾರೆ ಪರಿಸ್ಥಿತಿಯನ್ನು ಗಮನಿಸುವ ಬದಲು ವಿವಿಧ ಇಲಾಖೆಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳುತ್ತಾರೆ.

Representational image
ಕರ್ನಾಟಕದಲ್ಲಿ ಬಸ್ ದರ ಏರಿಕೆ; 'ಲಾಭ ಗಳಿಸಲು ಅಲ್ಲ, ನಿಗಮಗಳನ್ನು ಉಳಿಸಲು ಈ ಕ್ರಮ': ಸಚಿವ ಬೈರತಿ ಸುರೇಶ್

ಸಾರಿಗೆ ನಿಗಮಗಳು ತಮ್ಮ ಜಮೀನುಗಳನ್ನು ಬಾಡಿಗೆಗೆ ನೀಡುವ ಮೂಲಕ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಬಳಸುವ ಮೂಲಕ ಪರ್ಯಾಯ ಆದಾಯದ ಮೂಲಗಳನ್ನು ಕಂಡುಕೊಳ್ಳಬೇಕು ಎಂದು ಕೃಷ್ಣ ರಾಜ್ ಸಲಹೆ ನೀಡಿದರು. ಸಾರ್ವಜನಿಕ ಸಾರಿಗೆ ನಿಗಮಗಳಿಗೆ ಸಮಾನವಾದ ದರ ವಿಧಿಸುತ್ತಿದ್ದರೂ ಖಾಸಗಿ ಬಸ್ ನಿರ್ವಾಹಕರು ಲಾಭ ಗಳಿಸುತ್ತಿದ್ದಾರೆ ಎಂದು ಗಮನ ಸೆಳೆದರು. ಸಾರ್ವಜನಿಕ ಸೇವೆಗೆ ಧಕ್ಕೆಯಾಗದಂತೆ ರಾಜ್ಯ ಸಾರಿಗೆ ನಿಗಮಗಳು ತಮ್ಮ ವ್ಯವಸ್ಥೆಯಲ್ಲಿನ ಮೂಲಭೂತ ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದರು.

ಸರ್ಕಾರ ಜನರಿಗೆ ಸಮಂಜಸವಾದ ದರದಲ್ಲಿ ಈ ಸೇವೆಗಳನ್ನು ಒದಗಿಸಬೇಕು. ಸಾರಿಗೆ ಅತ್ಯಗತ್ಯ ಸೇವೆಯಾಗಿದ್ದು, ದೈನಂದಿನ ಸಂಚಾರಕ್ಕಾಗಿ ಬಸ್‌ಗಳನ್ನು ಅವಲಂಬಿಸಿರುವ ಜನರಿಗೆ ಇದು ವಿಶೇಷವಾಗಿ ಮುಖ್ಯವಾಗಿದೆ ಎಂದು ಹೇಳಿದರು.

ಹೆಚ್ಚಿನ ಬಸ್ ಪ್ರಯಾಣ ದರವು ಬಡವರಿಗೆ ಮತ್ತಷ್ಟು ಹೊರೆಯಾಗಲಿದೆ ಎಂದು ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯ ಸದಸ್ಯ ವಿನಯ್ ಶ್ರೀನಿವಾಸ್ ಹೇಳುತ್ತಾರೆ.

Representational image
ಬಿಎಂಟಿಸಿ ಬಸ್ ದರ ಶೇ. 33-35ರಷ್ಟು; ಇತರ ಸಾರಿಗೆ ಬಸ್ ದರ ಶೇ. 23ರಷ್ಟು ಹೆಚ್ಚಳ; ನೂತನ ದರ ಇಂದು ಮಧ್ಯರಾತ್ರಿಯಿಂದ ಜಾರಿ; Video

ಹಣ ಉಳಿಸುವ ಉದ್ದೇಶದಿಂದ ಬಡವರು ಬಸ್‌ನಲ್ಲಿ ಪ್ರಯಾಣಿಸುವ ಬದಲು ಹತ್ತಿರದ ಸ್ಥಳಗಳಿಗೆ ನಡೆದುಕೊಂಡು ಹೋಗಬಹುದು. ಬಸ್ ಪ್ರಯಾಣದ ವೆಚ್ಚ ಭರಿಸಲು ಆಹಾರ ಮತ್ತು ಇತರ ಅಗತ್ಯಗಳ ಖರ್ಚಿನಲ್ಲಿ ಕಡಿತ ಮಾಡಬೇಕಾಗಬಹುದು. ಮಧ್ಯಮ ವರ್ಗದವರು ದ್ವಿಚಕ್ರ ವಾಹನಗಳತ್ತ ಮುಖ ಮಾಡಬಹುದು. ಒಟ್ಟಾರೆಯಾಗಿ ಈ ದರ ಏರಿಕೆ ಸಾರ್ವಜನಿಕ ಸಾರಿಗೆ ಬಳಕೆಯನ್ನು ನಿರುತ್ಸಾಹಗೊಳಿಸಲಿದೆ ಎಂದು ಅಭಿಪ್ರಾಯಪಟ್ಟರು.

ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಹೊಣೆ ಹೊರಬೇಕು ಎಂದು ಹೇಳಿದರು. ಡೀಸೆಲ್ ದರ ಹೆಚ್ಚಳಕ್ಕೆ ಕೇಂದ್ರ ಸರ್ಕಾರವೇ ಕಾರಣವಾಗಿದೆ. ಹೀಗಾಗಿ ಬಸ್ ಪ್ರಯಾಣ ದರ ಏರಿಕೆಗೂ ಕೇಂದ್ರ ಸರ್ಕಾರ ಹೊಣೆಯಾಗುತ್ತದೆ. ಮತ್ತೊಂದೆಡೆ, ಎಲಿವೇಟೆಡ್ ಕಾರಿಡಾರ್‌ಗಳಂತಹ ಯೋಜನೆಗಳಿಗೆ ಹಣ ವೆಚ್ಚ ಮಾಡುವ ಬದಲು ರಾಜ್ಯ ಸರ್ಕಾರ ಬಸ್ ಪ್ರಯಾಣ ದರವನ್ನು ಕಡಿಮೆ ಮಟ್ಟದಲ್ಲಿ ಇರಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಬಸ್ ಪ್ರಯಾಣ ದರದಲ್ಲಿ ಅವೈಜ್ಞಾನಿಕ ಏರಿಕೆ ಮಾಡುವುದರಿಂದ ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆಯ ಬಳಕೆ ಪ್ರಮಾಣ ಮತ್ತಷ್ಟು ಕುಸಿಯಲಿದೆ ಎಂದು ಸ್ವತಂತ್ರ ಸಾರಿಗೆ ತಜ್ಞ ಸತ್ಯ ಅರಿಕುಥರಂ ಹೇಳುತ್ತಾರೆ.

ಪ್ರಯಾಣಿಕರಿಗೆ ಸಮರ್ಥ ಸಾರ್ವಜನಿಕ ಸಾರಿಗೆ ಪರ್ಯಾಯ ಒದಗಿಸಲು ಬಸ್ ಮತ್ತು ಮೆಟ್ರೋ ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕಿತ್ತು. ಆದರೆ, ಇವೆರಡೂ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿವೆ. ವಾಸ್ತವವಾಗಿ, ಈ ದರ ಏರಿಕೆಯ ಬಳಿಕ ಹಲವು ಮಾರ್ಗಗಳಲ್ಲಿ ಬಸ್‌ಗಿಂತ ಮೆಟ್ರೋ ಪ್ರಯಾಣವೇ ಅಗ್ಗವಾಗಲಿದೆ ಎಂದು ಹೇಳಿದರು.

ಸಾರ್ವಜನಿಕ ಸಾರಿಗೆ ಪ್ರಯಾಣ ದರಗಳನ್ನು ಶಿಫಾರಸು ಮಾಡಬೇಕಾದ ಜವಾಬ್ದಾರಿ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರಕ್ಕೆ (ಬಿಎಂಎಲ್‌ಟಿಎ) ಇದೆ. ಆದರೆ, ಅದರ ಬದಲಿಗೆ ತಾತ್ಕಾಲಿಕ ಸಮಿತಿಯೊಂದನ್ನು ರಚಿಸಲಾಗಿದೆ. ಸಂಚಾರ ದಟ್ಟಣೆ ನಿವಾರಿಸುವಲ್ಲಿ ಸಾರ್ವಜನಿಕ ಸಾರಿಗೆಯ ಪಾತ್ರ ಮತ್ತು ಮಹತ್ವವನ್ನು ರಾಜ್ಯ ಸರ್ಕಾರ ಅರ್ಥಮಾಡಿಕೊಂಡಿಲ್ಲ. ಸಾರ್ವಜನಿಕ ಸಾರಿಗೆಯನ್ನು ಕೇವಲ ‘ಸಬ್ಸಿಡಿ ಆಧಾರಿತ ಸಾರಿಗೆ ವ್ಯವಸ್ಥೆ’ ಎಂದು ಪರಿಗಣಿಸುತ್ತಿದೆಯೇ ಹೊರತು, ಇದರಲ್ಲಿ ನೈಜ ಹೂಡಿಕೆ ಅಥವಾ ದೀರ್ಘಕಾಲೀನ ದೂರದೃಷ್ಟಿಯನ್ನು ಹೊಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X