ಕರ್ನಾಟಕದ ಬರ ಪರಿಸ್ಥಿತಿ ಬಗ್ಗೆ ತೀವ್ರ ಕಳವಳ: ಜಲ ಸಂರಕ್ಷಣೆ, ಬರ ನಿರ್ವಹಣೆಗೆ ಕೇಂದ್ರ-ರಾಜ್ಯ ಒಗ್ಗೂಡಿ ಕೆಲಸ ಮಾಡೋಣ: ಸಿಎಂ ಡಿಕೆಶಿಗೆ ಪ್ರಧಾನಿ ಮೋದಿ ಪತ್ರ..!

ಕರ್ನಾಟಕದ ಮಹಾನ್ ಕವಿಗಳು ಮತ್ತು ಅರಸರನ್ನು ಸ್ಮರಿಸಿರುವ ಮೋದಿ, ರಾಜ್ಯದ ಜನರು ಉದ್ಯಮಶೀಲತೆ, ನಾವೀನ್ಯತೆ, ಬೌದ್ಧಿಕ ಶ್ರೇಷ್ಠತೆ ಹಾಗೂ ಪ್ರಗತಿಪರ ಮನೋಭಾವಕ್ಕೆ ಹೆಸರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Prime Minister Modi and CM DK Shivakumar (File photo)
ಪ್ರಧಾನಿ ಮೋದಿ ಹಾಗೂ ಸಿಎಂ ಡಿಕೆ.ಶಿವಕುಮಾರ್ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ಜಲ ಸಂರಕ್ಷಣೆ, ಬರ ನಿರ್ವಹಣೆ ಮತ್ತು ನಗರಗಳ ಸ್ವಚ್ಛತೆ ಸೇರಿದಂತೆ ಹಲವು ಪ್ರಮುಖ ವಿಚಾರಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ.

ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಮೋದಿ, ರಾಜ್ಯದ ಅಭಿವೃದ್ಧಿಗೆ ಜಂಟಿ ಪ್ರಯತ್ನಗಳ ಅಗತ್ಯವನ್ನು ಒತ್ತಿಹೇಳಿದ್ದಾರೆ.

ಅಕ್ಟೋಬರ್ 31ರಂದು ಬರೆದಿರುವ ಪತ್ರದಲ್ಲಿ, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಆಚರಿಸುತ್ತಿರುವ ಮೊದಲ ಕನ್ನಡ ರಾಜ್ಯೋತ್ಸವ ಇದಾಗಿದೆ. ಜನರ ಕಲ್ಯಾಣಕ್ಕಾಗಿ ಕೈಗೊಳ್ಳುತ್ತಿರುವ ಪ್ರಯತ್ನಗಳಿಗೆ ಶುಭ ಹಾರೈಸಿದ್ದಾರೆ.

ಕರ್ನಾಟಕದ ಮಹಾನ್ ಕವಿಗಳು ಮತ್ತು ಅರಸರನ್ನು ಸ್ಮರಿಸಿರುವ ಮೋದಿ, ರಾಜ್ಯದ ಜನರು ಉದ್ಯಮಶೀಲತೆ, ನಾವೀನ್ಯತೆ, ಬೌದ್ಧಿಕ ಶ್ರೇಷ್ಠತೆ ಹಾಗೂ ಪ್ರಗತಿಪರ ಮನೋಭಾವಕ್ಕೆ ಹೆಸರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಅಂತರಿಕ್ಷಯಾನ, ಸುಧಾರಿತ ಉತ್ಪಾದನೆ, ಸಂಶೋಧನೆ ಹಾಗೂ ನವೋದ್ಯಮ ಸೇರಿದಂತೆ ಭವಿಷ್ಯದ ಪ್ರತಿಯೊಂದು ಕ್ಷೇತ್ರದಲ್ಲೂ ಕರ್ನಾಟಕ ಮಹತ್ವದ ಪಾತ್ರ ವಹಿಸುತ್ತಿದೆ. ರಾಜ್ಯದ ಪ್ರತಿಭಾವಂತರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಮಾನವಕುಲ ಎದುರಿಸುತ್ತಿರುವ ಹಲವು ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ, ವಂದೇ ಭಾರತ್ ರೈಲುಗಳು ಮತ್ತು ವಿಮಾನ ನಿಲ್ದಾಣಗಳು ಸೇರಿದಂತೆ ಹಲವು ಮೂಲಸೌಕರ್ಯ ಯೋಜನೆಗಳನ್ನು ಪತ್ರದಲ್ಲಿ ಸ್ಮರಿಸಿದ್ದಾರೆ.

Prime Minister Modi and CM DK Shivakumar (File photo)
CM ಡಿಕೆ ಶಿವಕುಮಾರ್ ವ್ಯಕ್ತಿತ್ವ ವಜ್ರಕ್ಕಿಂತ ಕಠಿಣ, ಆದ್ರೆ ಹೃದಯ ಮೃದು: ನೂಣನವಿನಕೆರೆ ಶ್ರೀ ಅಚ್ಚರಿ ಹೇಳಿಕೆ

ಬೆಂಗಳೂರಿನ ಮೆಟ್ರೋ ವಿಸ್ತರಣೆ ಹಾಗೂ ಇತರ ನಗರ ಮೂಲಸೌಕರ್ಯ ಯೋಜನೆಗಳು ಆಧುನಿಕ, ದಕ್ಷ ಮತ್ತು ಸುಸ್ಥಿರ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಒದಗಿಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ ಎಂದು ತಿಳಿಸಿದ್ದಾರೆ.

ಉತ್ತಮ ಸಂಪರ್ಕ ವ್ಯವಸ್ಥೆಯಿಂದ ಲಕ್ಷಾಂತರ ಜನರ ದೈನಂದಿನ ಬದುಕು ಸುಧಾರಿಸುವುದರ ಜತೆಗೆ, ಜಾಗತಿಕ ತಂತ್ರಜ್ಞಾನ ಮತ್ತು ಉದ್ಯಮ ಕೇಂದ್ರವಾಗಿ ಬೆಂಗಳೂರಿನ ಸ್ಥಾನ ಮತ್ತಷ್ಟು ಬಲಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ಪ್ರಸ್ತಾಪಿಸಿರುವ ಮೋದಿ, ಜನರ ಬದುಕಿನಲ್ಲಿ ಅರ್ಥಪೂರ್ಣ ಹಾಗೂ ದೀರ್ಘಕಾಲೀನ ಬದಲಾವಣೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬಹುದಾದ ಹಲವು ಕ್ಷೇತ್ರಗಳಿವೆ ಎಂದು ಹೇಳಿದ್ದಾರೆ.

ಅವುಗಳಲ್ಲಿ ಜಲ ಸಂರಕ್ಷಣೆಗೆ ಪ್ರಮುಖ ಆದ್ಯತೆ ನೀಡಬೇಕು ಎಂದು ಒತ್ತಿಹೇಳಿದ್ದಾರೆ. ಕರ್ನಾಟಕವು ನದಿಗಳು, ಕೆರೆಗಳು ಮತ್ತು ಸಾಂಪ್ರದಾಯಿಕ ಜಲಮೂಲಗಳಿಂದ ಸಮೃದ್ಧವಾಗಿದೆ. ಮುಂದಿನ ಪೀಳಿಗೆಗಾಗಿ ಈ ಅಮೂಲ್ಯ ಸಂಪನ್ಮೂಲಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.

ವಿಶೇಷವಾಗಿ ರಾಜ್ಯದ ಉತ್ತರ ಭಾಗಗಳಲ್ಲಿ ಬರದ ಸವಾಲು ತೀವ್ರವಾಗಿದೆ. ಈ ವಿಚಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಅತ್ಯಂತ ಮಹತ್ವದ್ದಾಗಿದೆ ಎಂಬುದು ತಮಗೆ ತಿಳಿದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದರ ಜತೆಗೆ ನಗರಗಳ ಸ್ವಚ್ಛತೆಗೂ ಹೆಚ್ಚಿನ ಗಮನ ನೀಡುವ ಅಗತ್ಯವಿದೆ ಎಂದು ಪ್ರತಿಪಾದಿಸಿರುವ ಅವರು, ಕರ್ನಾಟಕದ ನಗರ ಪ್ರದೇಶಗಳು ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ, ಸ್ವಚ್ಛ ಸಾರ್ವಜನಿಕ ಸ್ಥಳಗಳು ಮತ್ತು ಸುಸ್ಥಿರ ನಗರಾಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಆದ್ಯತೆ ನೀಡಬೇಕು ಎಂದು ಕರೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X