GBA ಇ-ಖಾತಾ ಗೋಲ್‌ಮಾಲ್; 104 ಅಕ್ರಮ ಖಾತೆ ಸೃಷ್ಟಿ ಆರೋಪ, ಇಬ್ಬರು ಕಂದಾಯ ಅಧಿಕಾರಿಗಳ ಅಮಾನತು..!

ಖಾಸಗಿ ಬಿಲ್ಡರ್‌ಗಳು ಅಕ್ರಮವಾಗಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳಿಗೆ ಹೊಸ ಇ-ಖಾತಾಗಳನ್ನು ನೀಡಲು ಇ-ಆಸ್ತಿ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಮೌದ್ಗಿಲ್ ಪತ್ರದಲ್ಲಿ ಆರೋಪಿಸಿದ್ದಾರೆ.
E-Khata
ಇ-ಖಾತಾonline desk
Updated on: 

ಬೆಂಗಳೂರು: ಇಬ್ಬರು ಅಧಿಕಾರಿಗಳ ಅಮಾನತು ಖಂಡಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನೌಕರರ ಸಂಘ ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದ್ದು, ಇದರ ಬೆನ್ನಲ್ಲೇ ಜಿಬಿಎ ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್ ಅವರು ಐದು ನಗರ ಪಾಲಿಕೆಗಳ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಅಕ್ರಮವಾಗಿ ಮತ್ತು ಅನರ್ಹವಾಗಿ ಹೊಸ ಇ-ಖಾತಾಗಳನ್ನು ಸೃಷ್ಟಿಸಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ಪೂರ್ವ ನಗರ ಪಾಲಿಕೆಯ ಕೆ.ಆರ್.ಪುರ ವಿಭಾಗದ ಪ್ರಭಾರ ಕಂದಾಯ ಅಧಿಕಾರಿ ಬಸವರಾಜ್ ಮಾಘಿ ಅವರನ್ನು ನವೆಂಬರ್ 3ರಂದು ಅಮಾನತುಗೊಳಿಸಲಾಗಿದೆ. ಅದೇ ರೀತಿ, ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಕೆಂಗೇರಿ ವಿಭಾಗದ ಸಹಾಯಕ ಆಯುಕ್ತ ಹಾಗೂ ಪ್ರಭಾರ ಕಂದಾಯ ಅಧಿಕಾರಿ ಲೋಕಮಾತಾ ಡಿ.ಎಸ್. ಅವರನ್ನು ನವೆಂಬರ್ 4ರಂದು ಅಮಾನತುಗೊಳಿಸಲಾಗಿದೆ.

ಖಾಸಗಿ ಬಿಲ್ಡರ್‌ಗಳು ಅಕ್ರಮವಾಗಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳಿಗೆ ಹೊಸ ಇ-ಖಾತಾಗಳನ್ನು ನೀಡಲು ಇ-ಆಸ್ತಿ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಮೌದ್ಗಿಲ್ ಪತ್ರದಲ್ಲಿ ಆರೋಪಿಸಿದ್ದಾರೆ.

ಸಾಲ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಆಸ್ತಿಗಳನ್ನು ಹರಾಜು ಹಾಕುವ ಸಂದರ್ಭದಲ್ಲಿ ಬ್ಯಾಂಕ್‌ಗಳ ಹೆಸರಿನಲ್ಲಿ ಇ-ಖಾತಾ ನೀಡಲು ಈ ವ್ಯವಸ್ಥೆಯನ್ನು ರೂಪಿಸಲಾಗಿತ್ತು. ಆದರೆ, ಈ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಖಾಸಗಿ ಬಿಲ್ಡರ್‌ಗಳ ಹೆಸರಿನಲ್ಲಿ ಹೊಸ ಇ-ಖಾತಾಗಳನ್ನು ನೀಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಬ್ಯಾಂಕ್‌ಗಳ ಯಾವುದೇ ಅನುಮತಿ ಅಥವಾ ಬ್ಯಾಂಕ್ ಪ್ರತಿನಿಧಿಗಳ ಉಪಸ್ಥಿತಿಯೂ ಇರಲಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

E-Khata
ಬೆಂಗಳೂರು: ವಿಡಿಯೋ Upload ನಂತರ ಎಚ್ಚೆತ್ತ ಜಿಬಿಎ; ಇಂದಿರಾನಗರದ ಫುಟ್ ಪಾತ್ ಸರಿಪಡಿಸಲು ಕೆನಡಾ ಪ್ರಜೆಯೇ ಬರಬೇಕಿತ್ತು!

ನಿಯಮಗಳ ದುರ್ಬಳಕೆ ಮತ್ತು ಪ್ರಕ್ರಿಯೆಯಲ್ಲಿನ ಲೋಪಗಳ ಬಗ್ಗೆ ಕಂದಾಯ ನಿರೀಕ್ಷಕರು ವರದಿ ಮೂಲಕ ಎಚ್ಚರಿಕೆ ನೀಡಿದ್ದರೂ, ಅಮಾನತುಗೊಂಡ ಅಧಿಕಾರಿಗಳು ತಮ್ಮ ನಿರ್ಧಾರವನ್ನು ಮುಂದುವರಿಸಿದ್ದರು ಎನ್ನಲಾಗಿದೆ.

ಸೆಪ್ಟೆಂಬರ್ 10ರಂದು ಮೌದ್ಗಿಲ್ ಸಲ್ಲಿಸಿದ್ದ ವರದಿಯಲ್ಲಿ ಬಸವರಾಜ್ ಮಾಘಿ ಮತ್ತು ಲೋಕಮಾತಾ ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿತ್ತು. ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಬಸವರಾಜ್ ಮಾಘಿ ಅವರು 98 ಪ್ರಕರಣಗಳಲ್ಲಿ ಅಕ್ರಮ ಹಾಗೂ ಅನರ್ಹ ಹೊಸ ಇ-ಖಾತಾಗಳನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಅದೇ ರೀತಿ, ಲೋಕಮಾತಾ ಅವರು ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಆರು ಪ್ರಕರಣಗಳಲ್ಲಿ ಅಕ್ರಮ ಹಾಗೂ ಅನರ್ಹ ಇ-ಖಾತಾಗಳನ್ನು ಸೃಷ್ಟಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಈ ಕೃತ್ಯಗಳು ಗಂಭೀರ ದುರ್ನಡತೆ, ವಂಚನೆ ಸೇರಿದಂತೆ ಇತರ ಅಪರಾಧಗಳ ವ್ಯಾಪ್ತಿಗೆ ಬರುತ್ತವೆ ಎಂದು ವರದಿ ತಿಳಿಸಿದ್ದು, ಇದೇ ಕಾರಣಕ್ಕೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X