ಚೌಡಾಪುರ (ಕಲಬುರಗಿ): ಕಲಬುರಗಿ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಮತ್ತು ಕಬ್ಬಿನ ಬೆಲೆ ನಿಗದಿಗೆ ಸಂಬಂಧಿಸಿದಂತೆ ಮಾಶ್ಯಾಳ ಮಠದ ಮರುಳರಾಧ್ಯ ಸ್ವಾಮೀಜಿ ಅವರು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಏಕವಚನದಲ್ಲಿ ಆಕ್ಷೇಪಾರ್ಹ ಪದ ಬಳಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಬ್ಬು ಬೆಳೆಗಾರರ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸ್ವಾಮೀಜಿಯವರ, ರಾಜ್ಯಾದ್ಯಂತ ರೈತರು ಕಬ್ಬಿನ ಬೆಲೆ ನಿಗದಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಕನಿಷ್ಠ ಒಂದು ಸಭೆಯನ್ನೂ ನಡೆಸದ ಖರ್ಗೆಯನ್ನು "ಬೇರೆ ವಿಷಯಗಳಿದ್ದರೆ ತಕ್ಷಣ ಪ್ರತಿಕ್ರಿಯೆ ನೀಡುವ ಅವರು, ರೈತರ ವಿಚಾರ ಬಂದಾಗ ಊಟ ಮಾಡಿ ಮಲಗಿದ್ದಾರಾ? ರೈತರ ಸಮಸ್ಯೆ ಬಗೆಹರಿಸಲು ಅಥವಾ ಸಭೆ ನಡೆಸಲು ಅವರಿಗೆ ಧಮ್ ಇಲ್ಲವೇ?" ಎಂದು ಸ್ವಾಮೀಜಿ ಆಕ್ಷೇಪಾರ್ಹ ಏಕವಚನದ ಪದ ಬಳಸಿ ಪ್ರಶ್ನಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಸಭೆ ನಡೆಸಲು ಧಮ್ ಇಲ್ಲವೇ?
ಅಫಜಲಪುರ ತಾಲೂಕಿನ ಚೌಡಾಪುರದಲ್ಲಿ ನಡೆದ ಕಬ್ಬು ಬೆಳೆಗಾರರ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಶ್ಯಾಳ ಮಠದ ಮರುಳರಾಧ್ಯ ಸ್ವಾಮೀಜಿ ಅವರು, "ರಾಜ್ಯಾದ್ಯಂತ ರೈತರು ಕಬ್ಬಿನ ಬೆಲೆ ನಿಗದಿಗೆ ಆಗ್ರಹಿಸಿ ಊಟ, ನಿದ್ದೆ ಬಿಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ. ಇಷ್ಟಾದರೂ ಕಲಬುರಗಿಯಲ್ಲಿ ಈವರೆಗೆ ಒಂದೇ ಒಂದು ಸಭೆ ನಡೆಸಿಲ್ಲ ಎಂದರೆ ಏನರ್ಥ? ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಎಲ್ಲರೂ ಡಿಸಿ, ಶಾಸಕರ ಹೆಸರು ಹೇಳುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರೇನು ಕೇವಲ ಉಂಡು ಮಲಗೋಕೆ ಇದ್ದಾರಾ? ರೈತರ ಸಮಸ್ಯೆ ಬಗೆಹರಿಸಲು, ಸಭೆ ಮಾಡೋಕೆ ನಿಮ್ಮ ಕು... ಡ್ಯಾಗ್ ಧಮ್ ಇಲ್ಲೇನು?" ಎಂದು ತೀವ್ರ ಧಾಟಿಯಲ್ಲಿ ಪ್ರಶ್ನಿಸಿದ್ದಾರೆ.
ಅವರಿವರಿಗೆ ಬೈಯುವುದನ್ನು ಬಿಡಿ
"ದೊಡ್ಡ ಸ್ಥಾನದಲ್ಲಿದ್ದುಕೊಂಡು ರೈತರಿಗೆ ಮತ್ತು ಸಾರ್ವಜನಿಕರಿಗೆ ಉಪಯೋಗವಾಗುವಂತಹ ಕೆಲಸ ಮಾಡುವುದನ್ನು ಬಿಟ್ಟು, ದಿನ ಬೆಳಗಾದರೆ ಅವರಿವರಿಗೆ ಬೈಯುತ್ತಾ ಕೂರುವುದನ್ನು ಸಚಿವರು ಬಿಡಬೇಕು. ಕೆಲಸಕ್ಕೆ ಬಾರದ ಮಾತುಗಳನ್ನು ಆಡುವ ಬದಲು ರೈತರ ಸಮಸ್ಯೆ ಎದುರಾದಾಗ ತಮ್ಮ ಧಮ್ ತೋರಿಸಲಿ" ಎಂದು ಸ್ವಾಮೀಜಿ ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.
ಮುಂದುವರೆದು, ಜಿಲ್ಲೆಯಲ್ಲಿ ಕಬ್ಬಿಗೆ ಸೂಕ್ತ ಬೆಲೆ ಸಿಗದೆ ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರಿಂದ ರೈತರಿಗೆ ಅನ್ಯಾಯವಾಗುತ್ತಿರುವುದನ್ನು ಖಂಡಿಸಿ ಚೌಡಾಪುರ ಭಾಗದಲ್ಲಿ ರೈತರು ನಡೆಸುತ್ತಿದ್ದ ಬೃಹತ್ ಧರಣಿ ಸತ್ಯಾಗ್ರಹದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.