

ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮಕ್ಕೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ಪಟಾಕಿ ಸಿಡಿಸುವಾಗ ಎಚ್ಚರಿಕೆ ವಹಿಸುವಂತೆ ಆಸ್ಪತ್ರೆಗಳು ಮತ್ತು ಕಣ್ಣಿನ ತಜ್ಞರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
ಪಟಾಕಿ ಅವಘಡಗಳಿಂದ ಕಣ್ಣಿಗೆ ಗಂಭೀರ ಗಾಯಗಳಾಗುವ ಸಾಧ್ಯತೆಯಿದ್ದು, ಕೆಲವೊಮ್ಮೆ ಶಾಶ್ವತವಾಗಿ ದೃಷ್ಟಿಯನ್ನೇ ಕಳೆದುಕೊಳ್ಳುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ. ಮಕ್ಕಳು, ವೃದ್ಧರು ಮತ್ತು ಪ್ರಾಣಿಗಳ ಸುರಕ್ಷತೆಯ ಬಗ್ಗೆಯೂ ವಿಶೇಷ ಕಾಳಜಿ ವಹಿಸುವಂತೆ ಸೂಚಿಸಿದ್ದಾರೆ.
ಪಟಾಕಿಗಳನ್ನು ಜನವಸತಿ ಪ್ರದೇಶಗಳಿಂದ ದೂರವಿರುವ ತೆರೆದ ಜಾಗಗಳಲ್ಲಿ ಮಾತ್ರ ಸಿಡಿಸಬೇಕು. ಸುರಕ್ಷಿತ ಅಂತರ ಕಾಯ್ದುಕೊಳ್ಳುವುದರ ಜತೆಗೆ ರಕ್ಷಣಾತ್ಮಕ ಕನ್ನಡಕ ಧರಿಸುವುದು ಅಗತ್ಯ. ಮಕ್ಕಳು ದೊಡ್ಡವರ ಮೇಲ್ವಿಚಾರಣೆಯಲ್ಲೇ ಪಟಾಕಿ ಸಿಡಿಸಬೇಕು. ಉದ್ದನೆಯ ಊದುಬತ್ತಿ ಬಳಸಿ ಪಟಾಕಿ ಹಚ್ಚುವುದು, ಹಚ್ಚಿದ ತಕ್ಷಣ ದೂರ ಸರಿಯುವುದು ಹಾಗೂ ಸಿಡಿಯದೆ ಉಳಿದ ಪಟಾಕಿಯನ್ನು ಮತ್ತೆ ಹಚ್ಚಲು ಪ್ರಯತ್ನಿಸದಿರುವುದು ಸೇರಿದಂತೆ ಹಲವು ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ನೇತ್ರ ಕಣ್ಣಿನ ಆಸ್ಪತ್ರೆಯ ಡಾ. ಶ್ರೀಭಾರ್ಗವ ನಟೇಶ್ ಮಾತನಾಡಿ, ಪಟಾಕಿಯಿಂದ ಉಂಟಾಗುವ ಕಣ್ಣಿನ ಗಾಯಗಳು ಕೆಲವೊಮ್ಮೆ ಶಾಶ್ವತ ದೃಷ್ಟಿಹೀನತೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.
ಮಕ್ಕಳು ಪಟಾಕಿ ಸಿಡಿಸುವಾಗ ರಕ್ಷಣಾತ್ಮಕ ಕನ್ನಡಕ ಧರಿಸುವಂತೆ ಮತ್ತು ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಪೋಷಕರು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಕಣ್ಣಿಗೆ ಆಗುವ ಗಾಯಗಳು ಮೇಲ್ನೋಟಕ್ಕೆ ಸಣ್ಣದಾಗಿ ಕಂಡರೂ, ಕಣ್ಣಿನ ಒಳಭಾಗದ ಸೂಕ್ಷ್ಮ ಅಂಗಾಂಶಗಳಿಗೂ ಹಾನಿ ಉಂಟುಮಾಡಬಹುದು ಎಂದು ಡಾ. ಅಗರ್ವಾಲ್ ಕಣ್ಣಿನ ಆಸ್ಪತ್ರೆಯ ವೈದ್ಯಕೀಯ ಸೇವೆಗಳ ವಿಭಾಗದ ಮುಖ್ಯಸ್ಥ ಡಾ. ಅಮೋದ್ ನಾಯಕ್ ತಿಳಿಸಿದ್ದಾರೆ.
ಪಟಾಕಿಯಿಂದ ಕಣ್ಣಿಗೆ ಗಾಯವಾದರೆ ಕಣ್ಣನ್ನು ಉಜ್ಜಬಾರದು ಅಥವಾ ಒತ್ತಡ ಹಾಕಬಾರದು. ಕಣ್ಣಿನೊಳಗೆ ಸಿಲುಕಿರುವ ಹೊರಗಿನ ವಸ್ತುಗಳನ್ನು ಸ್ವತಃ ತೆಗೆಯಲು ಪ್ರಯತ್ನಿಸಬಾರದು. ರಾಸಾಯನಿಕ ವಸ್ತುಗಳು ಕಣ್ಣಿಗೆ ಬಿದ್ದರೆ ಐದರಿಂದ ಹತ್ತು ನಿಮಿಷಗಳ ಕಾಲ ಶುದ್ಧ ನೀರಿನಿಂದ ತೊಳೆಯಬೇಕು. ಆದರೆ, ಕಣ್ಣಿಗೆ ವಸ್ತು ಚುಚ್ಚಿಕೊಂಡಿರುವ ಅಥವಾ ಆಳವಾದ ಗಾಯವಾಗಿರುವ ಅನುಮಾನವಿದ್ದರೆ ನೀರಿನಿಂದ ತೊಳೆಯಬಾರದು, ಒತ್ತಡವನ್ನೂ ಹಾಕಬಾರದು. ಬದಲಾಗಿ ಯಾವುದೇ ಒತ್ತಡ ಹೇರದೆ ಗಟ್ಟಿಯಾದ ರಕ್ಷಣಾತ್ಮಕ ಕವಚ ಅಥವಾ ಮೃದುವಾದ ಹೊದಿಕೆಯಿಂದ ಕಣ್ಣನ್ನು ಮುಚ್ಚಿ ತಕ್ಷಣ ಹತ್ತಿರದ ಕಣ್ಣಿನ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ನಾರಾಯಣ ನೇತ್ರಾಲಯದ ಡಾ. ಜ್ಯೋತಿ ಮಟಾಲಿಯಾ ಮಾತನಾಡಿ, ಮಕ್ಕಳ ಕಣ್ಣುಗಳು ಪಟಾಕಿ ಅವಘಡಗಳಿಗೆ ಹೆಚ್ಚು ಸುಲಭವಾಗಿ ತುತ್ತಾಗುವ ಸಾಧ್ಯತೆಯಿದೆ. ಇಂತಹ ಗಾಯಗಳು ಶಾಶ್ವತ ದೃಷ್ಟಿ ನಷ್ಟಕ್ಕೂ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.
ಪಟಾಕಿಗಳ ಸದ್ದು ಮತ್ತು ಅವುಗಳಿಂದ ಉಂಟಾಗುವ ಅಪಾಯಗಳಿಂದ ಪ್ರಾಣಿಗಳನ್ನು ರಕ್ಷಿಸುವ ಅಗತ್ಯವನ್ನೂ ವೈದ್ಯರು ಒತ್ತಿಹೇಳಿದ್ದಾರೆ. ದೀಪಾವಳಿ ಸಂಭ್ರಮದ ವೇಳೆ ಪ್ರಾಣಿಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.