ದೀಪಾವಳಿ ಹೆಸರಲ್ಲಿ ಬೆಂಗಳೂರಿನಲ್ಲಿ ಅಕ್ರಮ ಪೂಲ್ ಪಾರ್ಟಿ; MDMA, ಗಾಂಜಾ ಪತ್ತೆ, ಮೂವರ ಬಂಧನ

ಮಾರತ್‌ಹಳ್ಳಿಯ ಯಮಲೂರಿನ ಕಾರಿಯಮ್ಮನ ಅಗ್ರಹಾರ ರಸ್ತೆಯಲ್ಲಿರುವ ಖಾಸಗಿ ವಿಲ್ಲಾದಲ್ಲಿ ಈ ಪಾರ್ಟಿ ಆಯೋಜಿಸಲಾಗಿತ್ತು. ಅಗತ್ಯ ಅನುಮತಿ ಪಡೆಯದೆ ದೀಪಾವಳಿ ಆಚರಣೆ ಹೆಸರಿನಲ್ಲಿ ಪಾರ್ಟಿ ನಡೆಸಲಾಗುತ್ತಿತ್ತು..
Deepavali Pool Party in Marathahalli
ದೀಪಾವಳಿ ಹೆಸರಲ್ಲಿ ಮಾರತ್ ಹಳ್ಳಿಯಲ್ಲಿ ಪೂಲ್ ಪಾರ್ಟಿ
Updated on: 

ಬೆಂಗಳೂರು: ದೀಪಾವಳಿ ಸಂಭ್ರಮದ ಹೆಸರಿನಲ್ಲಿ ಖಾಸಗಿ ವಿಲ್ಲಾದಲ್ಲಿ ನಡೆಯುತ್ತಿದ್ದ ಅಕ್ರಮ ಹೈಟೆಕ್ ಪೂಲ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಕಾರ್ಯಾಚರಣೆ ವೇಳೆ ಎಂಡಿಎಂಎ, ಗಾಂಜಾ, ಮದ್ಯ ಹಾಗೂ ನಿಷೇಧಿತ ಹುಕ್ಕಾ ಬಳಕೆ ಮಾಡಿರುವುದು ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.

ಮಾರತ್‌ಹಳ್ಳಿಯ ಯಮಲೂರಿನ ಕಾರಿಯಮ್ಮನ ಅಗ್ರಹಾರ ರಸ್ತೆಯಲ್ಲಿರುವ ಖಾಸಗಿ ವಿಲ್ಲಾದಲ್ಲಿ ಈ ಪಾರ್ಟಿ ಆಯೋಜಿಸಲಾಗಿತ್ತು. ಅಗತ್ಯ ಅನುಮತಿ ಪಡೆಯದೆ ದೀಪಾವಳಿ ಆಚರಣೆ ಹೆಸರಿನಲ್ಲಿ ಪಾರ್ಟಿ ನಡೆಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಯುವಕ-ಯುವತಿಯರನ್ನು ಆಕರ್ಷಿಸಲು ಆಯೋಜಕರು ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದರು. ವಾಟ್ಸ್‌ಆ್ಯಪ್ ಮತ್ತು ಇನ್‌ಸ್ಟಾಗ್ರಾಂ ಮೂಲಕ ಪಾರ್ಟಿಯ ಪ್ರಚಾರ ಮಾಡಲಾಗಿತ್ತು. ಎಫ್‌ವಿ ಸೋಷಿಯಲ್ 404 ಮತ್ತು ಹಾಪ್‌ಝಿಕ್ಸ್ ಸೇರಿದಂತೆ ಆನ್‌ಲೈನ್ ಆ್ಯಪ್‌ಗಳನ್ನೂ ಬಳಸಿಕೊಂಡು ಯುವಕರನ್ನು ಆಹ್ವಾನಿಸಲಾಗಿತ್ತು ಎನ್ನಲಾಗಿದೆ.

Deepavali Pool Party in Marathahalli
ವಾಹನ ಸವಾರರಿಗೆ ಮತ್ತೆ ಸಿಹಿಸುದ್ದಿ: ಟ್ರಾಫಿಕ್ ದಂಡ ಪಾವತಿಗೆ ಶೇ.50ರಷ್ಟು ರಿಯಾಯಿತಿ, ನ.21ರಿಂದ ಡಿ.11ರವರೆಗೆ ಅವಕಾಶ..!

ಪುರುಷರಿಗೆ ₹1,710, ಮಹಿಳೆಯರಿಗೆ ₹1,080 ಪ್ರವೇಶ ಶುಲ್ಕ!

ಪಾರ್ಟಿಗೆ ಪ್ರವೇಶ ಪಡೆಯಲು ಪುರುಷರಿಗೆ ₹1,710, ಮಹಿಳೆಯರಿಗೆ ₹1,080 ಹಾಗೂ ಜೋಡಿಗಳಿಗೆ ₹2,400 ಶುಲ್ಕ ನಿಗದಿಪಡಿಸಲಾಗಿತ್ತು. ಮಾದಕ ವಸ್ತುಗಳು ಮತ್ತು ಇತರ ಪದಾರ್ಥಗಳಿಗೆ ಪ್ರತ್ಯೇಕ ಹಣ ವಸೂಲಿ ಮಾಡಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ಪಾರ್ಟಿ ನಡೆಯುತ್ತಿತ್ತು. ಪೊಲೀಸರ ಕಣ್ಣಿಗೆ ಬೀಳದಂತೆ ಭಾಗವಹಿಸುವವರಿಗೆ ನಿಖರ ವಿಳಾಸ ನೀಡದೆ, ಸ್ಥಳದ ಅಂದಾಜು ಮಾಹಿತಿ ಮಾತ್ರ ಕಳುಹಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ಮೂವರ ಬಂಧನ

ದಾಳಿ ನಡೆಸಿದ ಸಿಸಿಬಿ ಪೊಲೀಸರು ಅರಿಹಂತ್ ಪಾಂಡೆ, ಅಭಿನವ್ ಪಾಂಡೆ ಮತ್ತು ಪಾರ್ಥ್ ಎಂಬ ಮೂವರನ್ನು ಬಂಧಿಸಿದ್ದಾರೆ. ಪಾರ್ಟಿ ನಡೆಯುತ್ತಿದ್ದ ಸ್ಥಳದಿಂದ ಕೆಲವು ವಸ್ತುಗಳನ್ನು ವಶಪಡಿಸಿಕೊಂಡು ಪರಿಶೀಲನೆಗೆ ಕಳುಹಿಸಲಾಗಿದೆ.

ಈ ಸಂಬಂಧ ಮಾರತ್‌ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ಖಾಸಗಿ ಪೂಲ್ ಪಾರ್ಟಿ ಹೆಸರಿನಲ್ಲಿ ಅನುಮತಿಯಿಲ್ಲದೆ ನಡೆಯುತ್ತಿದ್ದ ಚಟುವಟಿಕೆಗಳು ಸಿಸಿಬಿ ದಾಳಿಯಿಂದ ಬೆಳಕಿಗೆ ಬಂದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X