

ಬೆಂಗಳೂರು: ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದ್ದು, ಇ-ಕೆವೈಸಿ (e-KYC) ಮಾಡಿಸಲು ನೀಡಲಾಗಿದ್ದ ಗಡುವನ್ನು ನವೆಂಬರ್ 30ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.
ಈ ಹಿಂದೆ ನವೆಂಬರ್ 10 ಕೊನೆಯ ದಿನವಾಗಿತ್ತು. ಫಲಾನುಭವಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಗಡುವು ವಿಸ್ತರಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಇ-ಕೆವೈಸಿ ಮಾಡಿಸಲು ಫಲಾನುಭವಿಗಳಿಗೆ ಎರಡು ಆಯ್ಕೆಗಳಿವೆ. ಮನೆಯಲ್ಲೇ ಕುಳಿತು ಅನ್ನಸೇವೆ ಆ್ಯಪ್ ಮೂಲಕ ಮೊಬೈಲ್‌ನಲ್ಲೇ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಇಲ್ಲವೇ ಸಮೀಪದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು. ನಿಗದಿತ ಗಡುವಿನೊಳಗೆ ಎಲ್ಲರೂ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಇಲಾಖೆ ಮನವಿ ಮಾಡಿದೆ.
ನ್ಯಾಯಬೆಲೆ ಅಂಗಡಿಗಳ ಮುಂದೆ ಸರದಿಯಲ್ಲಿ ನಿಲ್ಲುವುದನ್ನು ತಪ್ಪಿಸುವ ಉದ್ದೇಶದಿಂದ ಆಹಾರ ಇಲಾಖೆ ಅನ್ನಸೇವೆ ಆ್ಯಪ್ ಸೌಲಭ್ಯವನ್ನು ರಾಜ್ಯದ ಎಲ್ಲ 31 ಜಿಲ್ಲೆಗಳಿಗೂ ವಿಸ್ತರಿಸಿದೆ. ಕೇಂದ್ರ ಸರ್ಕಾರದ ನಿಯಮದಂತೆ ಪ್ರತಿ ಐದು ವರ್ಷಕ್ಕೊಮ್ಮೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.
ಹಿರಿಯ ನಾಗರಿಕರು ಮತ್ತು ಮಕ್ಕಳ ಅನುಕೂಲಕ್ಕಾಗಿ ಮುಖ ಗುರುತಿಸುವಿಕೆ ಮೂಲಕ ದೃಢೀಕರಣ ಮಾಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಉದ್ಯೋಗ ಸೇರಿದಂತೆ ವಿವಿಧ ಕಾರಣಗಳಿಗಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗಿರುವವರು ಇ-ಕೆವೈಸಿಗಾಗಿ ತಮ್ಮ ಊರಿಗೆ ಹಿಂದಿರುಗುವ ಅನಿವಾರ್ಯತೆಯನ್ನೂ ಈ ಸೌಲಭ್ಯ ತಪ್ಪಿಸಲಿದೆ.
ಆ್ಯಪ್ ಮೂಲಕ ಇ-ಕೆವೈಸಿ ಮಾಡುವುದು ಹೇಗೆ?
ಮೊಬೈಲ್‌ನಲ್ಲಿರುವ ಅನ್ನಸೇವೆ ಆ್ಯಪ್ ತೆರೆಯಿರಿ. ಲಾಗಿನ್ ಆಯ್ಕೆಯಲ್ಲಿ ‘ಸ್ವಯಂ/ನಾಗರಿಕ’ ಎಂಬುದನ್ನು ಆರಿಸಿಕೊಳ್ಳಿ.
ಬಳಿಕ ಜಿಲ್ಲೆಗಳ ಪಟ್ಟಿಯಿಂದ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ, ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ. ನಂತರ ರೇಷನ್ ಕಾರ್ಡ್‌ಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಅದಕ್ಕೆ ಬರುವ ಒಟಿಪಿ ದಾಖಲಿಸಿ.
ಮುಂದಿನ ಪುಟದಲ್ಲಿ ಪಡಿತರ ಚೀಟಿಯಲ್ಲಿರುವ ಕುಟುಂಬ ಸದಸ್ಯರ ವಿವರಗಳು ಕಾಣಿಸಿಕೊಳ್ಳುತ್ತವೆ. ಇ-ಕೆವೈಸಿ ಮಾಡಿಸಬೇಕಾದ ಸದಸ್ಯರನ್ನು ಆಯ್ಕೆ ಮಾಡಿ, ಆ್ಯಪ್ ನೀಡುವ ಸೂಚನೆಗಳನ್ನು ಅನುಸರಿಸಿ ಮುಖ ಗುರುತಿಸುವಿಕೆ ಪ್ರಕ್ರಿಯೆ ಪೂರ್ಣಗೊಳಿಸಿ. ಕೊನೆಯಲ್ಲಿ ‘ಇ-ಕೆವೈಸಿ ಯಶಸ್ವಿ’ ಎಂಬ ಸಂದೇಶ ಬಂದರೆ ನಿಮ್ಮ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದರ್ಥ.
ಸಚಿವ ರಿಜ್ವಾನ್ ಅರ್ಷದ್ ಅವರು ಇ-ಕೆವೈಸಿ ಪ್ರಕ್ರಿಯೆಯನ್ನು ವಿವರಿಸುವ ವಿಡಿಯೋವನ್ನು ಈ ಹಿಂದೆಯೇ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.